Sheikh Hasina: ಹಿಂಡನ್ ವಾಯುನೆಲೆಯಲ್ಲಿ ಶೇಖ್ ಹಸೀನಾ ಭೇಟಿಯಾದ ಅಜಿತ್ ದೋವಲ್; ಮೇಘಾಲಯದ ಗಡಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ
ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಾಂಗ್ಲಾದೇಶದಿಂದ ಭಾರತಕ್ಕೆ ವಿಮಾನದಲ್ಲಿ ಹೊರಟಿದ್ದ ಶೇಖ್ ಹಸೀನಾ ದೆಹಲಿ ಬಳಿ ಇರುವ ಹಿಂಡನ್ ವಾಯುನೆಲೆಗೆ ಬಂದಿಳಿದಿದ್ದಾರೆ. ಅಲ್ಲಿ ಅವರನ್ನು ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿಯಾಗಿದ್ದಾರೆ.
ನವದೆಹಲಿ: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾತ್ಮಕ ಪ್ರತಿಭಟನೆಯ ಬಳಿಕ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಕೂಡಲೇ ತಮ್ಮ ವಿಶೇಷ ವಿಮಾನದ ಮೂಲಕ ಭಾರತದತ್ತ ಹೊರಟಿದ್ದ ಅವರು ದೆಹಲಿ ಬಳಿಯ ಘಜಿಯಾದಾಬ್ನ ಹಿಂಡನ್ ವಾಯುನೆಲೆ ತಲುಪಿದ್ದಾರೆ. ಅಲ್ಲಿ ಅವರನ್ನು ಭಾರತದ NSA ಅಜಿತ್ ದೋವಲ್ ಭೇಟಿಯಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇತರ ಉನ್ನತ ಅಧಿಕಾರಿಗಳು ಹಿಂಡನ್ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಭೇಟಿ ಮಾಡಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಹಿಂಡನ್ ವಾಯುನೆಲೆಯಲ್ಲಿ ವೆಸ್ಟರ್ನ್ ಏರ್ ಕಮಾಂಡ್ ಮುಖ್ಯಸ್ಥ ಏರ್ ಮಾರ್ಷಲ್ ಪಿಎಂ ಸಿನ್ಹಾ ಅವರನ್ನು ಕೂಡ ಭೇಟಿಯಾದರು. ಶೇಖ್ ಹಸೀನಾ ಭಾರತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮೇಘಾಲಯದ ಗಡಿಯಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಭಾರತ- ಬಾಂಗ್ಲಾ ಗಡಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
Watch: National Security Advisor Ajit Doval met with Bangladesh Prime Minister Sheikh Hasina at Hindon Airbase pic.twitter.com/DpO8eiT8s5
— IANS (@ians_india) August 5, 2024
ಇದೀಗ ಭಾರತದಲ್ಲಿರುವ ಶೇಖ್ ಹಸೀನಾ ಇಂದು ರಾತ್ರಿ ಇಲ್ಲೇ ಉಳಿಯಲಿದ್ದು, ಬಳಿಕ ಲಂಡನ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಾಯುಪಡೆಯ ಉನ್ನತ ಮೂಲಗಳ ಪ್ರಕಾರ, ಅವರು ವಿಮಾನಕ್ಕೆ ಇಂಧನ ತುಂಬಿಸಲು ಹಿಂಡನ್ ಏರ್‌ಬೇಸ್‌ಗೆ ಬಂದಿಳಿದಿದ್ದಾರೆ.
“ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು C-130 ಸಾರಿಗೆ ವಿಮಾನದಲ್ಲಿ ಹಿಂಡನ್ ಏರ್ ಬೇಸ್‌ಗೆ ಬಂದಿಳಿದಿದ್ದಾರೆ. ವಿಮಾನವನ್ನು ಭಾರತೀಯ ವಾಯುಪಡೆಯ C-17 ಮತ್ತು C-130J ಸೂಪರ್ ಹರ್ಕ್ಯುಲಸ್ ವಿಮಾನ ಹ್ಯಾಂಗರ್‌ಗಳ ಬಳಿ ನಿಲುಗಡೆ ಮಾಡಲಾಗುತ್ತದೆ. ವಿಮಾನದ ಚಲನೆಯನ್ನು ಭಾರತೀಯ ವಾಯುಪಡೆಯು ಮೇಲ್ವಿಚಾರಣೆ ಮಾಡಿದೆ. ಭದ್ರತಾ ಏಜೆನ್ಸಿಗಳು ಭಾರತೀಯ ವಾಯುಪ್ರದೇಶದ ಪ್ರವೇಶದಿಂದ ಘಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ತೆರಳಿವೆ” ಎಂದು ಮೂಲಗಳು ತಿಳಿಸಿವೆ.
ಶೇಖ್ ಹಸೀನಾ ರಾಜೀನಾಮೆ ನೀಡುತ್ತಿದ್ದಂತೆ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಲಕ್ಷಾಂತರ ಜನರು ಈಗಾಗಲೇ ವಿಜಯಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಯಾವುದೇ ಮಂತ್ರಿ ತಪ್ಪಿಸಿಕೊಳ್ಳದಂತೆ ಢಾಕಾ ವಿಮಾನ ನಿಲ್ದಾಣವನ್ನು ಸೀಲ್ ಮಾಡಲಾಗಿದೆ.
ಮೇಘಾಲಯದಲ್ಲಿ ಕರ್ಫ್ಯೂ:
ಮೇಘಾಲಯದ ಗಡಿಯಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. 444 ಕಿಲೋಮೀಟರ್‌ಗಿಂತಲೂ ಹೆಚ್ಚಿನ ಗಡಿ ವ್ಯಾಪ್ತಿಯ ಉದ್ದಕ್ಕೂ ಕರ್ಫ್ಯೂ ಮುಂದಿನ ಸೂಚನೆ ಬರುವವರೆಗೆ ಪ್ರತಿದಿನ ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ ಅನ್ವಯಿಸುತ್ತದೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಮತ್ತು ಮೇಘಾಲಯ ಪೊಲೀಸರೊಂದಿಗೆ ತುರ್ತು ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 pm, Mon, 5 August 24