AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ) ಪಕ್ಷದಿಂದ ಹೊರಬಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದೊಂದಿಗೆ ವಿಲೀನಗೊಳ್ಳಲು ಯತ್ನಿಸುತ್ತಿರುವ 6 ಮಂದಿ ಬಂಡಾಯ ಸಂಸದರು ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರು, "ಠಾಕ್ರೆ ಬಣವು ತನ್ನ ಮೂಲ ಸಿದ್ಧಾಂತದಿಂದ ಸಂಪೂರ್ಣವಾಗಿ ದೂರ ಸರಿದಿದೆ" ಎಂದು ಸ್ಪೀಕರ್‌ಗೆ ತಿಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ, ಉದ್ಧವ್ ಠಾಕ್ರೆ ಅವರ ಶಿವಸೇನೆ ಬಣ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದ ಪಾಲುದಾರ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಶೀಘ್ರದಲ್ಲೇ ಸಂಪೂರ್ಣವಾಗಿ ವಿಲೀನಗೊಳ್ಳಲು ರಹಸ್ಯ ಯೋಜನೆ ರೂಪಿಸಿದೆ ಎಂದು ಈ 6 ಸಂಸದರು ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಜೊತೆ ವಿಲೀನಕ್ಕೆ ಉದ್ಧವ್ ಠಾಕ್ರೆ ಪ್ಲಾನ್; ಶಿವಸೇನೆಯ 6 ಬಂಡಾಯ ಸಂಸದರಿಂದ ಸ್ಪೀಕರ್‌ಗೆ ದೂರು
Uddhav Thackeray Image Credit source: PTI
ಸುಷ್ಮಾ ಚಕ್ರೆ
|

Updated on: Jun 18, 2026 | 5:24 PM

Share

ಮುಂಬೈ, ಜೂನ್ 18: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ (ಯುಬಿಟಿ) ಪಕ್ಷಕ್ಕೆ ಭಾರಿ ಆಘಾತ ಎದುರಾಗಿದ್ದು, ಉದ್ಧವ್ ಠಾಕ್ರೆ ಬಣದ 9 ಲೋಕಸಭಾ ಸಂಸದರ ಪೈಕಿ 6 ಬಂಡಾಯ ಸಂಸದರು ದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಪತ್ರ ಸಲ್ಲಿಸಿದ್ದಾರೆ. ಶಿವಸೇನೆ (UBT) ಪಕ್ಷದಲ್ಲಿ ಮತ್ತೊಮ್ಮೆ ಭಾರಿ ಬಿರುಕು ಉಂಟಾಗಿದ್ದು, 6 ಲೋಕಸಭಾ ಸಂಸದರು ಉದ್ಧವ್ ಠಾಕ್ರೆ (Uddhav Thackeray) ವಿರುದ್ಧ ಬಂಡಾಯವೆದ್ದಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ 4 ಪುಟಗಳ ಸುದೀರ್ಘ ಪತ್ರ ನೀಡಿರುವ ಬಂಡಾಯ ಸಂಸದರು, “ಉದ್ಧವ್ ಠಾಕ್ರೆ ಅವರು ಶಿವಸೇನೆಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸಲು ರಹಸ್ಯ ಯೋಜನೆ ರೂಪಿಸಿದ್ದಾರೆ. ನಮಗೆ ಅವರ ನಾಯಕತ್ವದ ಮೇಲೆ ನಂಬಿಕೆಯಿಲ್ಲ. ಹೀಗಾಗಿ, ನಾವು ಆ ಪಕ್ಷದಿಂದ ಹೊರಬರುತ್ತಿದ್ದೇವೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ, ತಾವು ಏಕನಾಥ್ ಶಿಂಧೆ ನೇತೃತ್ವದ ಅಸಲಿ ಶಿವಸೇನೆಯೊಂದಿಗೆ ವಿಲೀನಗೊಳ್ಳುವುದಾಗಿ ಘೋಷಿಸಿದ್ದಾರೆ.

ಬಂಡಾಯ ಸಂಸದರು ಉದ್ಧವ್ ಠಾಕ್ರೆ ಅವರ ನಾಯಕತ್ವದ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ. ತಮ್ಮ ಕ್ಷೇತ್ರಗಳಿಗೆ ಭೇಟಿ ನೀಡುವಂತೆ ಪದೇ ಪದೇ ಮನವಿ ಮಾಡಿದರೂ ಉದ್ಧವ್ ಠಾಕ್ರೆ ಅದನ್ನು ನಿರ್ಲಕ್ಷಿಸಿದ್ದರು ಮತ್ತು ಚುನಾವಣಾ ಸಮಯದಲ್ಲಿ ಪಕ್ಷದಿಂದ ಯಾವುದೇ ಬೆಂಬಲ ಸಿಕ್ಕಿರಲಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಭೇಟಿಯಾಗಲು ಕೂಡ ತಮಗೆ ಅವಕಾಶ ಸಿಗುತ್ತಿರಲಿಲ್ಲ ಎಂದು ಅವರು ಬೇಸರ ತೋಡಿಕೊಂಡಿದ್ದಾರೆ.

ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಸಂಸದರು ಒಟ್ಟಾಗಿ ಬಂಡಾಯ ಸಾರಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಒಟ್ಟು ಸಂಸದರ ಪೈಕಿ ಮೂರನೇ ಎರಡರಷ್ಟು ಅಂದರೆ ಕನಿಷ್ಠ 6 ಸಂಸದರ ಬೆಂಬಲ ಬೇಕು. ಈ ಸಂಖ್ಯೆಯನ್ನು ತಲುಪಿರುವ ಬಂಡಾಯಗಾರರು ಬಚಾವಾಗಿದ್ದಾರೆ. ನಾವು 6 ಸಂಸದರು ಉದ್ಧವ್ ಬಣದಿಂದ ಹೊರಬಂದು ಪ್ರತ್ಯೇಕ ಗುಂಪನ್ನು ರಚಿಸಿಕೊಂಡಿದ್ದೇವೆ. ಲೋಕಸಭೆಯಲ್ಲಿ ನಮಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಕಲ್ಪಿಸಬೇಕು ಮತ್ತು ನಮ್ಮ ಗುಂಪನ್ನು ಏಕನಾಥ್ ಶಿಂಧೆ ನೇತೃತ್ವದ ಅಧಿಕೃತ ಶಿವಸೇನೆಯೊಂದಿಗೆ ವಿಲೀನಗೊಳಿಸಲು ಅನುಮತಿ ನೀಡಬೇಕು ಎಂದು ಬಂಡಾಯ ಸಂಸದರು ಸ್ಪೀಕರ್​ಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನಿಯತ್ತಿಲ್ಲದವರು ಪಕ್ಷ ಬಿಟ್ಟು ಹೋಗಬಹುದು; ‘ಆಪರೇಷನ್ ಟೈಗರ್’ ಬೆನ್ನಲ್ಲೇ ಸಂಸದರಿಗೆ ಉದ್ಧವ್ ಠಾಕ್ರೆ ಎಚ್ಚರಿಕೆ

ಕಳೆದ ಕೆಲವು ತಿಂಗಳುಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ಈ ಹೈಡ್ರಾಮಾ ಈಗ ಸಂಪೂರ್ಣವಾಗಿ ಬೀದಿಗೆ ಬಂದಿದೆ. ಉದ್ಧವ್ ಬಣದ ಪ್ರಭಾವಿ ನಾಯಕ ಸಂಜಯ್ ರಾವತ್ ಅವರು ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಿ ಬಂಡಾಯಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ 6 ಸಂಸದರ ಗುರುತು ಈಗ ಅಧಿಕೃತವಾಗಿ ಬಹಿರಂಗಗೊಂಡಿದೆ. ಈ ಹಿಂದಿನ ರಾಜಕೀಯ ಇತಿಹಾಸಗಳನ್ನು ಗಮನಿಸಿದರೆ, ಈ ಸಂಸದರ ಬಂಡಾಯಕ್ಕೆ ಸ್ಪೀಕರ್ ಅಂಗೀಕಾರ ನೀಡುವ ಸಾಧ್ಯತೆ ದಟ್ಟವಾಗಿದೆ. ಇದರಿಂದ ಶಿಂಧೆ ಬಣ ಮತ್ತಷ್ಟು ಬಲಗೊಳ್ಳಲಿದ್ದು, ಮುಂಬರುವ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ ಬಿಲ್‌ಗಳನ್ನು ಪಾಸ್ ಮಾಡಲು ಬಿಜೆಪಿಗೆ ಇನ್ನೂ 6 ಹೆಚ್ಚುವರಿ ಮತಗಳು ಸಿಗಲಿವೆ.

ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾದ ಬಳಿಕ ಈ 6 ಸಂಸದರು ಬೇರೆ ಬೇರೆ ನಗರಗಳಿಗೆ ತೆರಳಿದ್ದಾರೆ. ನಾಗೇಶ್ ಅಸ್ತಿತ್ಕರ್ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಬೌಸಾಹೇಬ್ ವಾಕಚೌರೆ ವಾರಾಣಸಿಗೆ ಪ್ರಯಾಣಿಸಿದ್ದಾರೆ. ಸಂಜಯ್ ದಿನಾ ಪಾಟೀಲ್ ಮುಂಬೈಗೆ ವಾಪಸಾಗಿದ್ದಾರೆ. ಓಂರಾಜೇ ನಿಂಬಾಳ್ಕರ್ ಪುಣೆಗೆ ತೆರಳಿದ್ದಾರೆ. ಸಂಜಯ್ ದೇಶ್‌ಮುಖ್ ಮತ್ತು ಸಂಜಯ್ ಜಾಧವ್ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಸಂಸದರು ಅತ್ಯಂತ ರಹಸ್ಯವಾಗಿ, ಬೇರೆ ಬೇರೆ ಸಮಯಗಳಲ್ಲಿ ಖಾಸಗಿ ವಿಮಾನಗಳ ಮೂಲಕ ದೆಹಲಿ ತಲುಪಿದ್ದರು.

ಇದನ್ನೂ ಓದಿ: ಠಾಕ್ರೆ ಬಣದಲ್ಲಿ ಮತ್ತೊಂದು ಬಿರುಕು ದೃಢ, ಉದ್ಧವ್ ಕರೆದಿದ್ದ ಸಭೆಗೆ 6 ಸಂಸದರು ಗೈರು

ಶೋಕಾಸ್ ನೋಟಿಸ್ ಜಾರಿ:

ಮತ್ತೊಂದೆಡೆ, ತೀವ್ರ ಆಕ್ರೋಶಗೊಂಡಿರುವ ಉದ್ಧವ್ ಠಾಕ್ರೆ ಬಣವು ಈ 6 ಬಂಡಾಯ ನಾಯಕರಿಗೆ 7 ದಿನಗಳ ಒಳಗಾಗಿ ಉತ್ತರ ನೀಡುವಂತೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅವರ ಯಾವುದೇ ಬೇಡಿಕೆಗಳನ್ನು ಅಥವಾ ಆಸನ ಬದಲಾವಣೆಯ ಮನವಿಯನ್ನು ಪುರಸ್ಕರಿಸಬಾರದು ಎಂದು ಸ್ಪೀಕರ್‌ಗೆ ಒತ್ತಾಯಿಸಿದೆ. ಈ ಸಂಸದರು ಪಕ್ಷ ವಿರೋಧಿ ಚಟುವಟಿಕೆ ಎದುರಿಸಲಿದ್ದಾರೆ ಎಂದು ಠಾಕ್ರೆ ಬಣ ಹೇಳಿದೆ. ಇಂದು ಬೆಳಗ್ಗೆ ಉದ್ಧವ್ ಬಣ ಜಾರಿ ಮಾಡಿದ್ದ ತುರ್ತು ಸಭೆಯ ‘ವಿಪ್’ ಅನ್ನು ಈ 6 ಸಂಸದರು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಒಟ್ಟು 9 ಲೋಕಸಭಾ ಸಂಸದರ ಪೈಕಿ ಕೇವಲ ಮೂವರು ಮಾತ್ರ (ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಾಭಾವು ವಾಜೆ) ಸಭೆಗೆ ಹಾಜರಾಗಿದ್ದು, ಉದ್ಧವ್ ಠಾಕ್ರೆ ಬಣಕ್ಕೆ ಭಾರಿ ಮುಖಭಂಗವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us