ಕೋರ್ಟ್​ನಲ್ಲಿ ಪತಿಯ ಅಕ್ಕನನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ಪತಿಗೆ ಗೊತ್ತಿಲ್ಲದಂತೆ ವಿಚ್ಛೇದನ ಪಡೆದ ಚಾಲಾಕಿ ಪತ್ನಿ

ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬಳು ವಿಚ್ಛೇದನ ಪಡೆಯಲು ನ್ಯಾಯಾಲಯಕ್ಕೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಪತಿಯ ಅಕ್ಕನನ್ನೇ ಆತನ ಎರಡನೇ ಪತ್ನಿ ಎಂದು ಸುಳ್ಳು ಮಾಹಿತಿ ಹಾಗೂ ಫೋಟೋ ನೀಡಿ, ಕೌಟುಂಬಿಕ ನ್ಯಾಯಾಲಯದಿಂದ ಏಕಪಕ್ಷೀಯ ವಿಚ್ಛೇದನ ಪಡೆದಿದ್ದಾಳೆ. ಪತಿಗೆ ಅರಿವಿಲ್ಲದೆ ನಡೆದ ಈ ವಂಚನೆ ಏಪ್ರಿಲ್‌ನಲ್ಲಿ ಬಯಲಾಗಿದ್ದು, ಇದೀಗ ಪತಿ ಗ್ವಾಲಿಯರ್ ಹೈಕೋರ್ಟ್‌ ಮೊರೆ ಹೋಗಿ, ವಿಚ್ಛೇದನ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಕೋರ್ಟ್​ನಲ್ಲಿ ಪತಿಯ ಅಕ್ಕನನ್ನೇ ಆತನ ಎರಡನೇ ಹೆಂಡತಿ ಎಂದು ಬಿಂಬಿಸಿ ಪತಿಗೆ ಗೊತ್ತಿಲ್ಲದಂತೆ ವಿಚ್ಛೇದನ ಪಡೆದ ಚಾಲಾಕಿ ಪತ್ನಿ
ವಿಚ್ಛೇದನ
Image Credit source: Law Offices of Susan

Updated on: Apr 27, 2026 | 7:53 AM

ಗ್ವಾಲಿಯರ್, ಏಪ್ರಿಲ್ 27: ಸುಮಾರು 27 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ(Divorce) ಪಡೆಯಲು ಮಹಿಳೆಯೊಬ್ಬಳು ಅನುಸರಿಸಿದ ದಾರಿ ಕೇಳಿದರೆ ನ್ಯಾಯಮೂರ್ತಿಗಳೇ ದಂಗಾಗುವಂತಿದೆ. ತನ್ನ ಪತಿಯ ಅಕ್ಕನನ್ನೇ (ಅತ್ತಿಗೆ) ಎರಡನೇ ಹೆಂಡತಿ ಎಂದು ಬಿಂಬಿಸಿ ಆಕೆ ಏಕಪಕ್ಷೀಯ ವಿಚ್ಛೇದನ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. 1998ರಲ್ಲಿ ವಿವಾಹವಾಗಿದ್ದ ಈ ದಂಪತಿ ನಡುವೆ 2015ರಿಂದ ಭಿನ್ನಾಭಿಪ್ರಾಯ ಶುರುವಾಗಿತ್ತು. ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ಕೆಲಸದ ನಿಮಿತ್ತ ಹೊರಗಡೆ ಇರುತ್ತಿದ್ದರಿಂದ ಜಗಳಗಳು ಹೆಚ್ಚಾಗಿ, ಪತ್ನಿ ತನ್ನ ಪತಿಯಿಂದ ದೂರ ವಾಸಿಸುತ್ತಿದ್ದರು. ಆದರೆ ಪತಿ ಮಾತ್ರ ವಿಚ್ಛೇದನ ನೀಡಲು ಒಪ್ಪಿರಲಿಲ್ಲ.

2021ರಲ್ಲಿ ವಿಚ್ಛೇದನ ಪಡೆಯಲೇಬೇಕೆಂದು ನಿರ್ಧರಿಸಿದ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು. ತನ್ನ ಪತಿ ಮರುಮದುವೆಯಾಗಿದ್ದಾನೆ ಎಂದು ಸುಳ್ಳು ಆರೋಪ ಮಾಡಿದ್ದಲ್ಲದೆ, ಅದಕ್ಕೆ ಸಾಕ್ಷಿಯಾಗಿ ಒಂದು ಕೌಟುಂಬಿಕ ಫೋಟೋವನ್ನು ಸಲ್ಲಿಸಿದರು. ಆ ಫೋಟೋದಲ್ಲಿ ತನ್ನ ಪತಿಯ ಪಕ್ಕದಲ್ಲಿ ನಿಂತಿದ್ದ ಆತನ ಸ್ವಂತ ಸಹೋದರಿಯನ್ನೇ ಪತಿಯ ಎರಡನೇ ಹೆಂಡತಿ ಎಂದು ನ್ಯಾಯಾಲಯಕ್ಕೆ ಸುಳ್ಳು ಮಾಹಿತಿ ನೀಡಿದರು.

ಪತ್ನಿ ಸಲ್ಲಿಸಿದ ಫೋಟೋ ಸಾಕ್ಷ್ಯ ಮತ್ತು ಮಾಹಿತಿಯನ್ನು ನಿಜವೆಂದು ನಂಬಿದ ನ್ಯಾಯಾಲಯವು ಪತಿಯ ಅನುಪಸ್ಥಿತಿಯಲ್ಲಿ ಏಕಪಕ್ಷೀಯವಾಗಿ ವಿಚ್ಛೇದನ ಮಂಜೂರು ಮಾಡಿತು. ಪತಿಗೆ ಈ ವಿಷಯದ ಬಗ್ಗೆ ಕಿಂಚಿತ್ತೂ ಸುಳಿವಿರಲಿಲ್ಲ.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಶೂಟೌಟ್: ವಿಚ್ಛೇದನ ಕೋರ್ಟ್​​​​​ನಲ್ಲಿರುವಾಗಲೇ ಹೆಂಡ್ತಿಯನ್ನ ಗುಂಡಿಕ್ಕಿ ಕೊಂದ ಪತಿ

ಏಪ್ರಿಲ್ ಮೊದಲ ವಾರದಲ್ಲಿ ಪತಿಗೆ ತನ್ನ ವಿಚ್ಛೇದನದ ಆದೇಶದ ಪ್ರತಿ ಸಿಕ್ಕಾಗ ಆತ ಹೌಹಾರಿ ಹೋಗಿದ್ದ. ಕೂಡಲೇ ನ್ಯಾಯಾಲಯದ ದಾಖಲೆಗಳನ್ನು ಪರಿಶೀಲಿಸಿದಾಗ, ತನ್ನ ಪತ್ನಿ ತನ್ನದೇ ಅಕ್ಕನ ಫೋಟೋ ಬಳಸಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ವಂಚನೆಯ ವಿರುದ್ಧ ಈಗ ಪತಿ ಗ್ವಾಲಿಯರ್ ಹೈಕೋರ್ಟ್ ಮೆಟ್ಟಿಲೇರಿದ್ದು, ವಿಚ್ಛೇದನ ತೀರ್ಪನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ, ವಿಚ್ಛೇದನಕ್ಕಾಗಿ ರಕ್ತ ಸಂಬಂಧವನ್ನೇ ದಾಳವಾಗಿ ಬಳಸಿಕೊಂಡ ಈ ಪ್ರಕರಣವು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಮೇಲೆ ಬೆಳಕು ಚೆಲ್ಲಿದೆ. ಹೈಕೋರ್ಟ್ ಈಗ ಈ ವಂಚನೆಯನ್ನು ಹೇಗೆ ಪರಿಗಣಿಸುತ್ತದೆ ಮತ್ತು ಮಹಿಳೆಯ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us