SIR in Karnataka: ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಏಪ್ರಿಲ್​ನಿಂದ ಎಸ್​ಐಆರ್​ ಆರಂಭ ಸಾಧ್ಯತೆ

ದೇಶದ ಹಲವೆಡೆ ಎಸ್​ಐಆರ್​​ಗೆ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ಒಟ್ಟು 23 ರಾಜ್ಯಗಳಲ್ಲಿ SIR ಏಪ್ರಿಲ್‌ನಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. 22 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್​ಐಆರ್​ ನಡೆಯಲಿದ್ದು, ಚುನಾವಣಾ ಸಂಸ್ಥೆಯು ಅಧಿಕಾರಿಗಳಿಗೆ ಸಿದ್ಧರಾಗಿರಲು ನಿರ್ದೇಶನ ನೀಡಿದೆ. ಹೊಸ ಮತದಾರರ ನೋಂದಣಿ, ಅಸ್ತಿತ್ವದಲ್ಲಿರುವ ನಮೂದುಗಳ ಪರಿಶೀಲನೆ ಮತ್ತು ಅನರ್ಹ ಹೆಸರುಗಳನ್ನು ತೆಗೆದುಹಾಕುವುದು ಸೇರಿದಂತೆ ಮತದಾರರ ಪಟ್ಟಿಗಳ ಸಮಗ್ರ ಪರಿಷ್ಕರಣೆಯನ್ನು ಎಸ್​ಐಆರ್​ ಪ್ರಕ್ರಿಯೆ ಒಳಗೊಂಡಿರುತ್ತದೆ.

SIR in Karnataka: ಕರ್ನಾಟಕ ಸೇರಿ 23 ರಾಜ್ಯಗಳಲ್ಲಿ ಏಪ್ರಿಲ್​ನಿಂದ ಎಸ್​ಐಆರ್​ ಆರಂಭ ಸಾಧ್ಯತೆ
SIR
Image Credit source: PTI

Updated on: Feb 19, 2026 | 10:44 PM

ನವದೆಹಲಿ, ಫೆಬ್ರವರಿ 19: ಭಾರತೀಯ ಚುನಾವಣಾ ಆಯೋಗವು (ECI) ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಹಲವಾರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (CEO) ಪತ್ರ ಬರೆದಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಏಪ್ರಿಲ್ 2026ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಹೀಗಾಗಿ, SIRಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕೆಂದು ಚುನಾವಣಾ ಸಂಸ್ಥೆ ನಿರ್ದೇಶನ ನೀಡಿದೆ.

ಈ ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರ್ಷ ಏಪ್ರಿಲ್ ತಿಂಗಳಿನಿಂದ SIR ಪ್ರಾರಂಭವಾಗುವ ನಿರೀಕ್ಷೆಯಿದೆ. ಅವುಗಳೆಂದರೆ, ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು, ಜಾರ್ಖಂಡ್, ಲಡಾಖ್, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ಉತ್ತರಾಖಂಡ, ನಾಗಾಲ್ಯಾಂಡ್, ದೆಹಲಿ-ಎನ್​ಸಿಆರ್​, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರ, ತೆಲಂಗಾಣ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ.

ಇದನ್ನೂ ಓದಿ: ಎಸ್​ಐಆರ್ ಪ್ರಕ್ರಿಯೆಗೆಂದು ನೇಮಕಗೊಂಡಿರುವ ಬಿಎಲ್​ಒಗಳ ಸಾವಿನ ಬಗ್ಗೆ ಸುಪ್ರೀಂ ಕಳವಳ, ರಾಜ್ಯಗಳಿಗೆ ನಿರ್ದೇಶನ

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗವು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ನ ಎರಡನೇ ಹಂತವನ್ನು ಕೈಗೊಳ್ಳುವುದಾಗಿ ಘೋಷಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಛತ್ತೀಸ್‌ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳೆದ ವರ್ಷ SIR ನಡೆಸಲಾಗಿತ್ತು.

ಚುನಾವಣಾ ಸಂಸ್ಥೆಯ ಪ್ರಕಾರ, ಕೊನೆಯ SIR ಅನ್ನು 21 ವರ್ಷಗಳ ಹಿಂದೆ 2001-2004ರ ನಡುವೆ ನಡೆಸಲಾಗಿತ್ತು. ಆಗಾಗ ವಲಸೆ, ಡಬಲ್ ಮತದಾರರ ಗುರುತಿನ ಚೀಟಿಗಳು, ಮೃತಪಟ್ಟ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕದಿರುವುದು ಮತ್ತು ವಿದೇಶಿಯರನ್ನು ತಪ್ಪಾಗಿ ಪಟ್ಟಿಗೆ ಸೇರಿಸಿಕೊಳ್ಳುವುದನ್ನು ತಡೆಗಟ್ಟಲು ಎಸ್​ಐಆರ್​ ಪ್ರಕ್ರಿಯೆ ಅಗತ್ಯ ಎಂದು ಚುನಾವಣಾ ಆಯೋಗ ಹೇಳಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಎಸ್​ಐಆರ್​ಗೆ ಫೆ. 21ರವರೆಗೆ ಗಡುವು ವಿಸ್ತರಿಸಿದ ಸುಪ್ರೀಂ ಕೋರ್ಟ್

SIRಗೆ ಒಳಗಾಗುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯನ್ನು ಸ್ಥಗಿತಗೊಳಿಸಲಾಗುತ್ತದೆ. EROಗಳು (ಪ್ರತಿ ವಿಧಾನಸಭಾ ಮತ್ತು ಸಂಸದೀಯ ಕ್ಷೇತ್ರಗಳಿಗೆ ಮತದಾರರ ಪಟ್ಟಿಯನ್ನು ತಯಾರಿಸಲು ಮತ್ತು ಪರಿಷ್ಕರಿಸಲು ಆಯೋಗದಿಂದ ನೇಮಿಸಲ್ಪಟ್ಟ ಅಧಿಕಾರಿಗಳು) ಈ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಪ್ರತಿಯೊಬ್ಬ ನೋಂದಾಯಿತ ಮತದಾರರಿಗೆ ವಿಶಿಷ್ಟ ಎಣಿಕೆ ನಮೂನೆಗಳನ್ನು ಮುದ್ರಿಸುತ್ತಾರೆ. ಎಣಿಕೆ ನಮೂನೆಗಳನ್ನು ಹೆಚ್ಚಾಗಿ ಹೆಸರು, ಮತಗಟ್ಟೆ, ಕ್ಷೇತ್ರ ಮತ್ತು ಹಳೆಯ ಫೋಟೋ ಸೇರಿದಂತೆ ಮೊದಲೇ ಭರ್ತಿ ಮಾಡಲಾಗುತ್ತದೆ. ಬೂತ್ ಮಟ್ಟದ ಅಧಿಕಾರಿಗಳು (BLO) ಈ ಪ್ರಕ್ರಿಯೆಯನ್ನು ನಡೆಸಲು ಪ್ರತಿ ಮನೆಗೆ 3 ಬಾರಿ ಭೇಟಿ ನೀಡುತ್ತಾರೆ. ಅವರು ಸೇರ್ಪಡೆಗಾಗಿ ಹೊಸ ಮತದಾರರಿಂದ ಫಾರ್ಮ್ 6 ಮತ್ತು ಘೋಷಣೆ ನಮೂನೆಗಳನ್ನು ಸಂಗ್ರಹಿಸುತ್ತಾರೆ. ಮತದಾರರು ಎಣಿಕೆ ನಮೂನೆಗಳನ್ನು ಭರ್ತಿ ಮಾಡಲು ಸಹಾಯ ಮಾಡುತ್ತಾರೆ. ಅದನ್ನು EROಗಳಿಗೆ ಸಲ್ಲಿಸುತ್ತಾರೆ. ಅವರು ಅಸ್ತಿತ್ವದಲ್ಲಿರುವ ಪ್ರತಿಯೊಬ್ಬ ಮತದಾರರಿಗೆ EFಗಳನ್ನು ವಿತರಿಸುವುದು ಮತ್ತು 2002-2004 ರಲ್ಲಿ ನಡೆದ ಕೊನೆಯ SIRನಲ್ಲಿ ತಮ್ಮ ಹೆಸರು ಅಥವಾ ಅವರ ಸಂಬಂಧಿಕರ ಹೆಸರಿನೊಂದಿಗೆ ಲಿಂಕ್ ಮಾಡಲು ಮತದಾರರಿಗೆ ಸಹಾಯ ಮಾಡುವಂತಹ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ