ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಪ್ರತಿಪಕ್ಷಗಳ ಪಟ್ಟು; ದೋಷಾರೋಪ ನಿರ್ಣಯ ಮಂಡನೆಗೆ ಇಂಡಿಯಾ ಮೈತ್ರಿಕೂಟ ಸಿದ್ಧತೆ

ಇತ್ತೀಚೆಗೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ನಡೆದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಯಲ್ಲಿನ ಗಂಭೀರ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲು 'ಇಂಡಿಯಾ' ಮೈತ್ರಿಕೂಟವು ಸಂಸತ್ತಿನಲ್ಲಿ ಮತ್ತೆ ದೋಷಾರೋಪ ನಿರ್ಣಯ ಮಂಡಿಸಲು ಸಜ್ಜಾಗಿದೆ.  ಮೂಲಗಳ ಪ್ರಕಾರ, ಈ ಪ್ರಕ್ರಿಯೆಯ ನೋಟಿಸ್ ಸಿದ್ಧಗೊಳ್ಳುತ್ತಿದ್ದು, ಸಂಸತ್ತಿನ ಅಧಿವೇಶನ ನಡೆಯದಿರುವ ಸಮಯದಲ್ಲೂ ಇದನ್ನು ಸಲ್ಲಿಸಲು ಅವಕಾಶವಿರುವುದರಿಂದ, ಮುಂದಿನ ವಾರದಲ್ಲೇ ಸಲ್ಲಿಸುವ ಸಾಧ್ಯತೆಯಿದೆ.

ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಪ್ರತಿಪಕ್ಷಗಳ ಪಟ್ಟು; ದೋಷಾರೋಪ ನಿರ್ಣಯ ಮಂಡನೆಗೆ ಇಂಡಿಯಾ ಮೈತ್ರಿಕೂಟ ಸಿದ್ಧತೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್
Image Credit source: PTI

Updated on: Sep 24, 2026 | 6:08 PM

ನವದೆಹಲಿ, ಸೆಪ್ಟೆಂಬರ್ 24: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್) ಪ್ರಕ್ರಿಯೆಗೆ ಸಂಬಂಧಿಸಿದಂತೆ ಎದ್ದಿರುವ ಸರಣಿ ಆಕ್ಷೇಪಣೆಗಳು ಹಾಗೂ ಆಂತರಿಕ ಕದನದ ಹಿನ್ನೆಲೆಯಲ್ಲಿ, ಮುಖ್ಯ ಚುನಾವಣೆ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ದೋಷಾರೋಪ ನಿರ್ಣಯ ಮಂಡಿಸಲು ‘ಇಂಡಿಯಾ’ಮೈತ್ರಿಕೂಟ ನಿರ್ಧರಿಸಿದೆ.   ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ನಿಯಮ ಉಲ್ಲಂಘನೆಗಳ ಕುರಿತು ಮಾಧ್ಯಮಗಳು ವರದಿ ಮಾಡಿದ ಮರುದಿನವೇ ಈ ರಾಜಕೀಯ ಬೆಳವಣಿಗೆಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಇದರ ಕರಡನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು ಎಂದು ಟಿವಿ9 ನೆಟ್‌ವರ್ಕ್‌ಗೆ ರಾಜಕೀಯ ಮೂಲಗಳು ಖಚಿತಪಡಿಸಿವೆ.

ಸೆಪ್ಟೆಂಬರ್ 25 ಮತ್ತು 28ರಂದು ಕಾಂಗ್ರೆಸ್‌ನಿಂದ ಬೃಹತ್ ಚಳವಳಿ:

ಈ ವಿಚಾರವನ್ನು ಬೀದಿಗೆ ತರಲು ಕಾಂಗ್ರೆಸ್ ನಿರ್ಧರಿಸಿದ್ದು, ತನ್ನ ಎಲ್ಲಾ ರಾಜ್ಯ ಘಟಕಗಳಿಗೆ ತಕ್ಷಣವೇ ಬೀದಿಗಿಳಿದು ಪ್ರತಿಭಟನೆ ನಡೆಸಲು ನಿರ್ದೇಶನ ನೀಡಿದೆ. ಸೆಪ್ಟೆಂಬರ್ 25ರಂದು ರಾಜ್ಯ ಕಾಂಗ್ರೆಸ್ ಸಮಿತಿಗಳು (ಪಿಸಿಸಿ) ಆಯಾ ರಾಜ್ಯಗಳ ಚುನಾವಣಾ ಆಯೋಗದ ಕಚೇರಿಗಳಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿವೆ. ಸೆಪ್ಟೆಂಬರ್ 28ರಂದು 2ನೇ ಹಂತವಾಗಿ ಎಲ್ಲಾ ಜಿಲ್ಲಾ ಕಾಂಗ್ರೆಸ್ ಸಮಿತಿಗಳು (ಡಿಸಿಸಿ) ಆಯಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆ ಕೈಗೊಳ್ಳಲಿವೆ.

ಇದನ್ನೂ ಓದಿ: ಎಸ್​ಐಆರ್ ಬಗ್ಗೆ ಇನ್ನೂ ಗೊಂದಲ ಇದೆಯಾ? 1950 ಸಹಾಯವಾಣಿಗೆ ಕರೆ ಮಾಡಲು ಮಹೇಶ್ವರ್ ರಾವ್ ಸೂಚನೆ

ಇಂದು ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, “ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಹಾಗೂ ಅವರನ್ನು ತಕ್ಷಣವೇ ಬಂಧಿಸಬೇಕು. ಅವರ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಮಾಡಲಾದ ಎಲ್ಲಾ ತಿದ್ದುಪಡಿಗಳನ್ನು ಹಿಂಪಡೆದು, ಅವರ ನಿರ್ಧಾರಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ಸಿಇಸಿ ಹುದ್ದೆಯಿಂದ ಅವರನ್ನು ಕೆಳಗಿಳಿಸಿ, ಜೈಲಿಗೆ ಕಳುಹಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ.” ಎಂದಿದ್ದಾರೆ.

ಇದನ್ನೂ ಓದಿ: ಸಿಇಸಿ ಜ್ಞಾನೇಶ್ ಕುಮಾರ್ 48 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ದೇಶಾದ್ಯಂತ ಬೃಹತ್ ಪ್ರತಿಭಟನೆ; ಸಿಜೆಪಿ ಎಚ್ಚರಿಕೆ

ಪ್ರತಿಪಕ್ಷಗಳ ಹೊಸ ದೋಷಾರೋಪ ನಿರ್ಣಯಕ್ಕೆ ಕಾರಣಗಳೇನು?:

  • ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆ, ಹೆಸರುಗಳ ತೆಗೆದುಹಾಕುವಿಕೆ ಹಾಗೂ ‘ಫಾರ್ಮ್ 6’ ( ಮತದಾರರ ನೋಂದಣಿ ನಮೂನೆ) ನಿಯಮಗಳನ್ನು ಕಾನೂನುಬಾಹಿರವಾಗಿ ತಿದ್ದುಪಡಿ ಮಾಡಿದ್ದಕ್ಕೆ ಇಬ್ಬರು ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದು ಪ್ರತಿಪಕ್ಷಗಳಿಗೆ ಬಲವಾದ ಅಸ್ತ್ರವಾಗಿದೆ.

 

  • ಕಳೆದ ಏಪ್ರಿಲ್ 24ರಂದು 73 ರಾಜ್ಯಸಭಾ ಸಂಸದರು ಸಿಇಸಿ ವಜಾಗೆ ನೋಟಿಸ್ ನೀಡಿದ್ದರು. ಆದರೆ ಅದರಲ್ಲಿ ಅಂಕಿತ ಹಾಕಿದ್ದ 7 ಸಂಸದರು ಪಕ್ಷ ಬದಲಾಯಿಸಿರುವುದರಿಂದ ಹಾಗೂ ಹೊಸ ಆಧಾರಗಳು ಸಿಕ್ಕಿರುವುದರಿಂದ ನವೀಕೃತ ನೋಟಿಸ್ ನೀಡಲು ‘ಇಂಡಿಯಾ’ ಕೂಟ ನಿರ್ಧರಿಸಿದೆ.

 

  • ಮುಖ್ಯ ಚುನಾವಣೆ ಆಯುಕ್ತರನ್ನು ಹುದ್ದೆಯಿಂದ ತೆಗೆದುಹಾಕಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ವಜಾಗೊಳಿಸುವಷ್ಟೇ ಕಠಿಣವಾದ ಸುಪ್ರೀಂ ಕೋರ್ಟ್ ಮಾದರಿಯ ಮಹಾಭಿಯೋಗ ಪ್ರಕ್ರಿಯೆ ಮತ್ತು ಸಂಸತ್ತಿನಲ್ಲಿ ವಿಶೇಷ ಬಹುಮತದ ಅಗತ್ಯವಿರುತ್ತದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us