AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಪವಾಸ ನಿಲ್ಲಿಸುವೆ; ಸರ್ಕಾರಕ್ಕೆ ಸೋನಮ್ ವಾಂಗ್ಚುಕ್ ಪತ್ರ

ಇಂದು 25ನೇ ದಿನಕ್ಕೆ ಕಾಲಿಟ್ಟಿರುವ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯಲು ಕಾರ್ಯಕರ್ತ ಸೋನಮ್ ವಾಂಗ್ಚುಕ್ ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಆದರೆ, ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸೋಮವಾರ ನಡೆದ 'ಚಲೋ ಸಂಸದ್' ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಯಾವುದೇ ರೀತಿಯ ಶಿಕ್ಷಾರ್ಹ ಅಥವಾ ಪ್ರತೀಕಾರದ ಕಾನೂನು ಕ್ರಮಗಳನ್ನು ಕೈಗೊಳ್ಳಬಾರದು ಎಂಬ ಖಚಿತ ಭರವಸೆಯನ್ನು ಸರ್ಕಾರ ನೀಡಬೇಕು ಎಂದು ಅವರು ಷರತ್ತು ವಿಧಿಸಿದ್ದಾರೆ. ಕೇಂದ್ರ ಸಚಿವ ಬಿ.ಜೆ.ಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ, ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿ ಉಪವಾಸ ಹಿಂಪಡೆಯುವಂತೆ ಮನವಿ ಮಾಡಿದ್ದಕ್ಕಾಗಿ ವಾಂಗ್ಚುಕ್ ಧನ್ಯವಾದ ಅರ್ಪಿಸಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಪವಾಸ ನಿಲ್ಲಿಸುವೆ; ಸರ್ಕಾರಕ್ಕೆ ಸೋನಮ್ ವಾಂಗ್ಚುಕ್ ಪತ್ರ
Sonam Wangchuk Image Credit source: PTI
ಸುಷ್ಮಾ ಚಕ್ರೆ
|

Updated on: Jul 22, 2026 | 7:06 PM

Share

ನವದೆಹಲಿ, ಜುಲೈ 22: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ (Sonam Wangchuk) ತಮ್ಮ ಉಪವಾಸವನ್ನು ಕೊನೆಗೊಳಿಸಲು ಕೇಂದ್ರ ಸರ್ಕಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿ ಇಂದು ಪತ್ರ ಬರೆದಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಮ್ ವಾಂಗ್ಚುಕ್ ಅವರನ್ನು ಮಂಗಳವಾರ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಭೇಟಿಯಾದ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆ ನಡೆದಿದೆ.

ಆಸ್ಪತ್ರೆಗೆ ಭೇಟಿ ನೀಡಿ ಉಪವಾಸ ಹಿಂಪಡೆಯುವಂತೆ ವಿನಂತಿಸಿದ್ದಕ್ಕಾಗಿ ಸಚಿವರಿಗೆ ಧನ್ಯವಾದ ತಿಳಿಸಿರುವ ಸೋನಮ್ ವಾಂಗ್ಚುಕ್, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಮತ್ತು ಹಗರಣದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಭರವಸೆಗಳಿಗೆ ಪಟ್ಟು ಹಿಡಿದಿದ್ದಾರೆ. ತಮ್ಮ ಭೇಟಿಯ ಸಮಯದಲ್ಲಿ ಸಚಿವರು ಎರಡು ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ವಾಂಗ್ಚುಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹೈಕೋರ್ಟ್ ಆದೇಶದ ಬೆನ್ನಲ್ಲೇ ಉಪವಾಸ ಸತ್ಯಾಗ್ರಹ ನಿರತ ಸೋನಮ್ ವಾಂಗ್ಚುಕ್ ಮೇದಾಂತ ಆಸ್ಪತ್ರೆಗೆ ಶಿಫ್ಟ್

ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವುದು, ಶಿಕ್ಷಣ ಸಚಿವರ ರಾಜೀನಾಮೆಯ ಪರಿಶೀಲನೆ ಸೇರಿದಂತೆ ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವುದಾಗಿ ಕೇಂದ್ರ ಸಚಿವರು ನನಗೆ ಭರವಸೆ ನೀಡಿದ್ದಾರೆ ಎಂದು ಸೋನಮ್ ವಾಂಗ್ಚುಕ್ ತಿಳಿಸಿದ್ದಾರೆ.

ಜುಲೈ 20ರ ‘ಚಲೋ ಸಂಸದ್’ ಮೆರವಣಿಗೆ ಮತ್ತು ಪ್ರತಿಭಟನಾಕಾರರ ಮೇಲಿನ ಪೊಲೀಸ್ ಲಾಠಿಚಾರ್ಜ್ ಬಗ್ಗೆ ಉಲ್ಲೇಖಿಸಿದ ವಾಂಗ್ಚುಕ್, “ಪೊಲೀಸರ ಅತಿಯಾದ ಬಲಪ್ರಯೋಗ ಮತ್ತು ದೌರ್ಜನ್ಯಗಳ ಹೊರತಾಗಿಯೂ ಪ್ರತಿಭಟನೆಯು ಅತ್ಯಂತ ಶಾಂತಿಯುತವಾಗಿದೆ. ಪ್ರಜಾಪ್ರಭುತ್ವದ ಮಾದರಿಯ ಪ್ರತಿಭಟನೆಗೆ ಅವರ ತಾಳ್ಮೆ ಮತ್ತು ಬದ್ಧತೆಯನ್ನು ಇಡೀ ದೇಶ ಮತ್ತು ಜಗತ್ತು ವೀಕ್ಷಿಸಿದೆ” ಎಂದಿದ್ದಾರೆ.

ಉಪವಾಸ ಹಿಂಪಡೆಯಲು ಷರತ್ತು:

ವಿವಿಧ ಪಕ್ಷಗಳ ಸುಮಾರು 65 ಸಂಸದರು ತಮಗೆ ಪತ್ರ ಬರೆದು ಉಪವಾಸ ಹಿಂಪಡೆಯುವಂತೆ ಮತ್ತು ದೇಶಸೇವೆಗೆ ಹಿಂತಿರುಗುವಂತೆ ವಿನಂತಿಸಿದ್ದಾರೆ ಎಂದು ವಾಂಗ್ಚುಕ್ ವಿವರಿಸಿದ್ದಾರೆ. ಪ್ರತಿಭಟನಾಕಾರರ ವಿರುದ್ಧ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಖಚಿತ ಭರವಸೆ ನೀಡಿದರೆ ಮಾತ್ರ ತಮ್ಮ ಉಪವಾಸವನ್ನು ಕೊನೆಗೊಳಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. “ನಾನು ಬದುಕಲು ಬಯಸುತ್ತೇನೆ. ನನ್ನ ವಿದ್ಯಾರ್ಥಿಗಳು, ಶಿಕ್ಷಣ ಮತ್ತು ನನ್ನ ಜೀವನವನ್ನು ನಿರೂಪಿಸಿದ ಕೆಲಸಕ್ಕೆ ಹಿಂತಿರುಗಲು ನಾನು ಬಯಸುತ್ತೇನೆ. ಆದರೆ, ಈ ಚಳವಳಿಗೆ ಕಾರಣರಾದ ಯುವಜನರ ಭವಿಷ್ಯದ ಬೆಲೆಯ ಮೇಲೆ ನಾನು ಅದನ್ನು ಮಾಡಲು ಸಾಧ್ಯವಿಲ್ಲ. ಈ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಯಾವುದೇ ಯುವ ಪ್ರತಿಭಟನಾಕಾರರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಸ್ಪಷ್ಟ ಭರವಸೆಯನ್ನು ಸರ್ಕಾರ ನೀಡಿದರೆ ನಾನು ಒಪ್ಪುತ್ತೇನೆ” ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: ಸೋನಮ್ ವಾಂಗ್ಚುಕ್ 3 ವಾರಗಳ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಷರತ್ತು ವಿಧಿಸಿದ ಪತ್ನಿ

ಉಪವಾಸ ಸತ್ಯಾಗ್ರಹದ 21ನೇ ದಿನವಾದ ಜುಲೈ 18ರಂದು ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಕ್ಷೀಣಿಸಿದ ಕಾರಣ ದೆಹಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ತದನಂತರ, ಸಫ್ದರ್‌ಜಂಗ್ ಆಸ್ಪತ್ರೆಯ ಚಿಕಿತ್ಸೆಯನ್ನು ಪ್ರಶ್ನಿಸಿ ಅವರ ಪತ್ನಿ ಗೀತಾಂಜಲಿ ಜಿ. ಆಂಗ್ಮೊ ಸಲ್ಲಿಸಿದ್ದ ಅರ್ಜಿಯ ಮೇರೆಗೆ ದೆಹಲಿ ಹೈಕೋರ್ಟ್ ಅವರನ್ನು ತಕ್ಷಣವೇ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಆದೇಶಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us