ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್

ರಾಂಚಿಯಲ್ಲಿರುವ ಆರ್‌ಎಸ್‌ಎಸ್ (RSS) ಕಚೇರಿ ಮೇಲಿನ ದಾಳಿಯ ತನಿಖೆಯ ವೇಳೆ ಈ ದಾಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲಿತ ಉಗ್ರಗಾಮಿ ಸಂಘಟನೆಯ ಲಿಂಕ್ ಇರುವುದು ಪತ್ತೆಯಾಗಿದೆ. ಜಾರ್ಖಂಡ್‌ನ ರಾಂಚಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಭದ್ರತಾ ಸಂಸ್ಥೆಗಳಿಗೆ ಭಾರಿ ಸುಳಿವು ಸಿಕ್ಕಿದೆ. ಈ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್‌ಐ ಹಣಕಾಸು ನೆರವು ಪಡೆಯುತ್ತಿರುವ 'ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್' (TTH) ಉಗ್ರಗಾಮಿ ಸಂಘಟನೆಯ ಕೈವಾಡ ಇರುವುದು ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ.

ರಾಂಚಿಯ ಆರ್‌ಎಸ್‌ಎಸ್ ಕಚೇರಿಯ ದಾಳಿಗೆ ಐಎಸ್‌ಐ ನಂಟು; ಭಯೋತ್ಪಾದನಾ ಕೃತ್ಯಕ್ಕೆ ಪಾಕಿಸ್ತಾನದಿಂದ ಫಂಡಿಂಗ್
Rss Office Attackers
Image Credit source: x

Updated on: Jun 19, 2026 | 3:27 PM

ರಾಂಚಿ, ಜೂನ್ 19: ಜಾರ್ಖಂಡ್‌ನ ರಾಂಚಿಯಲ್ಲಿ ಜೂನ್ 16ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಚೇರಿ ಮೇಲೆ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರೂ ಆರೋಪಿಗಳು ಪಾಕಿಸ್ತಾನದ ಐಎಸ್‌ಐ (ISI) ಫಂಡಿಂಗ್ ಮಾಡುತ್ತಿರುವ ‘ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್’ (TTH) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ. ರಾಂಚಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ತನಿಖೆಯ ವೇಳೆ, ಆರ್‌ಎಸ್‌ಎಸ್ ಕಚೇರಿಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯು ಕೇವಲ ಸ್ಥಳೀಯ ಘಟನೆಯಲ್ಲ, ಇದರ ಹಿಂದೆ ಅಂತಾರಾಷ್ಟ್ರೀಯ ಉಗ್ರರ ಜಾಲ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

ಆರೋಪಿಗಳಾದ ಸೈಫ್ ಅನ್ಸಾರಿ ಮತ್ತು ಅಮಾನ್ ಅನ್ಸಾರಿ ದುಬೈಗೆ ಪ್ರಯಾಣಿಸಿದ್ದಾಗ ಅಲ್ಲಿ ಅವರಿಗೆ ಪಾಕಿಸ್ತಾನದ ಪ್ರಜೆಯಾದ ಶಹಬಾಜ್ ರಾಣಾ ಅಲಿಯಾಸ್ ಭಟ್ಟಿ ಎಂಬಾತನ ಸಂಪರ್ಕ ಸಿಕ್ಕಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ. “ಇದಾದ ಬಳಿಕ ಅವರು ಉಗ್ರ ಸಿದ್ಧಾಂತಕ್ಕೆ ಒಳಗಾಗಿದ್ದು, ಭಾರತದಾದ್ಯಂತ ತೆಹ್ರೀಕ್-ಎ-ತಾಲಿಬಾನ್ ಹಿಂದೂಸ್ತಾನ್ (TTH)ನ ಭಾರತ ವಿರೋಧಿ ಚಟುವಟಿಕೆಗಳನ್ನು ಹರಡಲು ಒಪ್ಪಿಕೊಂಡಿದ್ದರು” ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐ, ಭಾರತದಲ್ಲಿ ಅಸ್ಥಿರತೆ ಮತ್ತು ಕೋಮು ಗಲಭೆಗಳನ್ನು ಸೃಷ್ಟಿಸಲು ಈ ಸಂಘಟನೆಗೆ ದೊಡ್ಡ ಮಟ್ಟದಲ್ಲಿ ಹಣಕಾಸಿನ ನೆರವು (ಫಂಡಿಂಗ್) ನೀಡುತ್ತಿದೆ ಎಂಬುದು ಡಿಜಿಟಲ್ ಪುರಾವೆಗಳಿಂದ ಸಾಬೀತಾಗಿದೆ. ಜಾರ್ಖಂಡ್ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿರುವ ಸ್ಥಳೀಯ ಸ್ಲೀಪರ್ ಸೆಲ್‌ಗಳು ಹಾಗೂ ಕೆಲವು ಯುವಕರನ್ನು ಬಳಸಿಕೊಂಡು ಈ ದಾಳಿಯನ್ನು ಕಾರ್ಯಗತಗೊಳಿಸಲಾಗಿತ್ತು.

ಇದನ್ನೂ ಓದಿ: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ

ಉಗ್ರರು ದಾಳಿಯ ಯೋಜನೆ ರೂಪಿಸಲು ಮತ್ತು ಪರಸ್ಪರ ಸಂವಹನ ನಡೆಸಲು ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಶನ್ ಹೊಂದಿರುವ ‘ಟೆಲಿಗ್ರಾಮ್’ ಚಾನೆಲ್‌ಗಳು ಮತ್ತು ಕೆಲವು ಸೀಕ್ರೆಟ್ ಡಾರ್ಕ್ ವೆಬ್ ಲಿಂಕ್‌ಗಳನ್ನು ಬಳಸಿಕೊಂಡಿದ್ದರು. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳ ವಿಧಿವಿಜ್ಞಾನ ತನಿಖೆಯ ವೇಳೆ, ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಅವರು ನಡೆಸಿದ ಚಾಟ್‌ಗಳು ಮತ್ತು ಹಣ ವರ್ಗಾವಣೆಯ ವಿವರಗಳು ಪತ್ತೆಯಾಗಿವೆ.


ಆರ್‌ಎಸ್‌ಎಸ್ ಕಚೇರಿ ಮೇಲಿನ ದಾಳಿಯ ಹಿಂದೆ ಪಾಕ್ ಲಿಂಕ್ ಪತ್ತೆಯಾಗುತ್ತಿದ್ದಂತೆ ಜಾರ್ಖಂಡ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ತನಿಖಾ ಸಂಸ್ಥೆಗಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಉಗ್ರರ ಜಾಲವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Video: ರಾಂಚಿಯ ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ತನಿಖೆಯಲ್ಲಿ ಅಂತಾರಾಷ್ಟ್ರೀಯ ಮತ್ತು ಭಯೋತ್ಪಾದನಾ ಲಿಂಕ್‌ಗಳು ಬಯಲಾಗಿರುವುದರಿಂದ ಈ ಪ್ರಕರಣವನ್ನು ಜಾರ್ಖಂಡ್ ಭಯೋತ್ಪಾದನಾ ನಿರೋಧಕ ದಳಕ್ಕೆ (ATS) ವರ್ಗಾಯಿಸಲು ಶಿಫಾರಸು ಮಾಡಲಾಗಿದೆ. ಇವರ ನೆಟ್‌ವರ್ಕ್ ಮತ್ತು ಫಂಡಿಂಗ್ ಕುರಿತು ತನಿಖೆ ನಡೆಸಲಾಗುತ್ತಿದ್ದು, ಇನ್ನು ಹಲವರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ. ಜೂನ್ 16ರ ಮಧ್ಯರಾತ್ರಿ ಇಬ್ಬರು ಯುವಕರು ಆರ್‌ಎಸ್‌ಎಸ್ ಕಚೇರಿಯ ಕಡೆಗೆ ಪೆಟ್ರೋಲ್ ಬಾಂಬ್ ಎಸೆಯುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us