ಬಾರಾಮತಿ ಉಪಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆ; ಸುನೇತ್ರಾ ಪವಾರ್ ಅವಿರೋಧ ಆಯ್ಕೆ
ಬಾರಾಮತಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸುನೇತ್ರಾ ಪವಾರ್ ವಿರುದ್ಧದ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದೆ. ಈ ವರ್ಷದ ಆರಂಭದಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದ ಮಾಜಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಗೌರವಾರ್ಥವಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಂಡಿದೆ. ಇದರಿಂದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು ಬಾರಾಮತಿ ಉಪಚುನಾವಣೆಯಲ್ಲಿ ಅವಿರೋಧವಾಗಿ ಗೆಲ್ಲಲಿದ್ದಾರೆ.

ಬಾರಾಮತಿ, ಏಪ್ರಿಲ್ 9: ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರ ಹಿರಿಯ ನಾಯಕರು ಏಪ್ರಿಲ್ 23ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಸುನೇತ್ರಾ ಪವಾರ್ (Sunetra Pawar) ಅವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಬೇಕೆಂದು ಮಾಡಿದ ಮನವಿಗಳನ್ನು ಒಪ್ಪಿಕೊಂಡಿರುವ ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರು ಬಾರಾಮತಿ ವಿಧಾನಸಭಾ ಉಪಚುನಾವಣೆಯಿಂದ ಪಕ್ಷವು ತನ್ನ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಹೀಗಾಗಿ, ಸುನೇತ್ರಾ ಪವಾರ್ ಅವರ ಎದುರಾಳಿಯಾಗಿ ಯಾವುದೇ ಸ್ಪರ್ಧಿ ಇಲ್ಲದ ಕಾರಣ ಈ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಏಪ್ರಿಲ್ 23ರಂದು ನಡೆಯಲಿರುವ ಬಾರಾಮತಿ ಉಪಚುನಾವಣೆಯಿಂದ ಹಿಂದೆ ಸರಿಯುವಂತೆ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಹಿರಿಯ ಎನ್‌ಸಿಪಿ ನಾಯಕರು ಕಾಂಗ್ರೆಸ್ಗೆ ಮನವಿ ಮಾಡಿದ್ದರು. ಇದಾದ ನಂತರ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ: Video: ಮಹಾರಾಷ್ಟ್ರ ಉಪಮುಖ್ಯಮಂತ್ರಿಯಾಗಿ ಎನ್‌ಸಿಪಿ ನಾಯಕಿ ಸುನೇತ್ರಾ ಪವಾರ್ ಅಧಿಕಾರ ಸ್ವೀಕಾರ
ಜನವರಿಯಲ್ಲಿ ಬಾರಾಮತಿಯಲ್ಲಿ ನಡೆಯಲಿದ್ದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾದರು. ಆಗ ಅವರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಬಾರಾಮತಿಯ ಶಾಸಕರಾಗಿದ್ದರು. ಅದಾದ 1 ತಿಂಗಳ ನಂತರ ಅವರ ಪತ್ನಿ ಸುನೇತ್ರಾ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಲಾಯಿತು.ಆದರೆ, ಅವರು ಶಾಸಕಿಯಾಗಿ ಆಯ್ಕೆಯಾಗಬೇಕಾಗಿದ್ದರಿಂದ ಈ ಬಾರಿ ಉಪಚುನಾವಣೆಯಲ್ಲಿ ಅವರನ್ನು ಕಣಕ್ಕಿಳಿಸಲಾಗಿತ್ತು. ಅಜಿತ್ ಪವಾರ್ ಅವರ ಗೌರವಾರ್ಥವಾಗಿ ಕಾಂಗ್ರೆಸ್ ತನ್ನ ಪಕ್ಷ ಅಭ್ಯರ್ಥಿಯನ್ನು ಹಿಂಪಡೆಯುವ ಮೂಲಕ ಸುನೇತ್ರಾ ಪವಾರ್ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದೆ.
ಬಾರಾಮತಿ ಸ್ಥಾನವನ್ನು ಪವಾರ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇದನ್ನು 1991ರಿಂದ ಅಜಿತ್ ಪವಾರ್ ಹೊಂದಿದ್ದರು. ಅದಕ್ಕೂ ಮೊದಲು, ಅವರ ಚಿಕ್ಕಪ್ಪ ಶರದ್ ಪವಾರ್ ಬಾರಾಮತಿ ಸ್ಥಾನವನ್ನು ಹೊಂದಿದ್ದರು. ಸುಪ್ರಿಯಾ ಸುಲೆ ಬಾರಾಮತಿಯ ಸಂಸದೆ. ಹೀಗಾಗಿ ಬಾರಾಮತಿ ವಿಧಾನಸಭಾ ಸ್ಥಾನ ಮತ್ತು ಸಂಸದೀಯ ಕ್ಷೇತ್ರ ಎರಡನ್ನೂ ಪವಾರ್ ಕುಟುಂಬವು ಹೊಂದಿದೆ.
ಇದನ್ನೂ ಓದಿ: ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಸುನೇತ್ರಾ ಪವಾರ್ ಆಯ್ಕೆ
ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾದ ಇಂದು (ಗುರುವಾರ) ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಪಕ್ಷದ ಅಭ್ಯರ್ಥಿ ಅಮರ್ ಮೋರೆ ಅವರು ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದು ಘೋಷಿಸಿದರು. ಈ ಹಿಂದೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಭಾಗವಾಗಿದ್ದ ಅಜಿತ್ ಪವಾರ್ ಅವರ ಮೇಲಿನ ಗೌರವದಿಂದಾಗಿ ಕಾಂಗ್ರೆಸ್ ಪಕ್ಷವು ತನ್ನ ನಿಲುವನ್ನು ಬದಲಾಯಿಸಿತು ಎಂದು ಅವರು ಹೇಳಿದ್ದಾರೆ.
ಛಗನ್ ಭುಜಬಲ್ ಮತ್ತು ಧನಂಜಯ್ ಮುಂಡೆ ನೇತೃತ್ವದ ಹಿರಿಯ ಎನ್‌ಸಿಪಿ ನಾಯಕರ ನಿಯೋಗವು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ವೈಯಕ್ತಿಕವಾಗಿ ಸಂಪರ್ಕಿಸಿತ್ತು. ಸುನೇತ್ರಾ ಪವಾರ್ ಕೂಡ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:30 pm, Thu, 9 April 26




