ರಸ್ತೆ ಇರುವಲ್ಲೆಲ್ಲಾ ಪಾದಚಾರಿ ಮಾರ್ಗ ಕಡ್ಡಾಯ: ಸುಪ್ರೀಂ ಮಹತ್ವದ ಆದೇಶ, ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ

ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ದೇಶಾದ್ಯಂತ ರಸ್ತೆಗಳಿರುವ ಪ್ರತಿಯೊಂದು ಕಡೆಯೂ ಪಾದಚಾರಿಗಳಿಗೆ ಪ್ರತ್ಯೇಕ, ಅತಿಕ್ರಮಣ-ಮುಕ್ತ ಮಾರ್ಗಗಳನ್ನು ಖಚಿತಪಡಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಪಾದಚಾರಿಗಳು ವಾಹನಗಳ ಬೆದರಿಕೆ ಇಲ್ಲದೆ ಮುಕ್ತವಾಗಿ ಸಂಚರಿಸುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಸರಳ ವಿಧಾನಗಳಿಂದ ಪಾದಚಾರಿ ಜಾಗ ಪ್ರತ್ಯೇಕಿಸುವಂತೆ ಸೂಚಿಸಿದ್ದು, ಪಾದಚಾರಿಗಳ ಹಕ್ಕು ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದೆ.

ರಸ್ತೆ ಇರುವಲ್ಲೆಲ್ಲಾ ಪಾದಚಾರಿ ಮಾರ್ಗ ಕಡ್ಡಾಯ: ಸುಪ್ರೀಂ ಮಹತ್ವದ ಆದೇಶ, ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ
ಸುಪ್ರೀಂಕೋರ್ಟ್​

Updated on: Aug 03, 2026 | 1:08 PM

ನವದೆಹಲಿ, ಆಗಸ್ಟ್​ 03: ದೇಶಾದ್ಯಂತ ರಸ್ತೆಗಳಿರುವ ಪ್ರತಿಯೊಂದು ಕಡೆಯೂ ಪಾದಚಾರಿಗಳಿಗೆ ಪ್ರತ್ಯೇಕ ಹಾಗೂ ಅತಿಕ್ರಮಣ-ಮುಕ್ತ ಸ್ಥಳಗಳನ್ನು ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್(Supereme Court) ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರಿದ್ದ ಪೀಠವು ಈ ಆದೇಶ ನೀಡಿದ್ದು, ಪಾದಚಾರಿಗಳು ಯಾವುದೇ ಮೋಟಾರು ವಾಹನಗಳ ಬೆದರಿಕೆಯಿಲ್ಲದೆ ಮುಕ್ತವಾಗಿ ಸಂಚರಿಸುವ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ ಎಂದು ನೆನಪಿಸಿದೆ.

ಸರಳ ಮಾರ್ಗಗಳ ಬಳಕೆಗೆ ಸೂಚನೆ: ಕೇಂದ್ರ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರಿಗೆ ಸೂಚನೆ ನೀಡಿದ ಪೀಠವು, ಪಾದಚಾರಿ ಮಾರ್ಗ ರಚಿಸಲು ಭಾರಿ ಹೂಡಿಕೆ ಅಥವಾ ಕಾಂಕ್ರೀಟ್ ನಿರ್ಮಾಣಗಳೇ ಬೇಕಿಲ್ಲ. ಕನಿಷ್ಠ ಪಕ್ಷ ಹಗ್ಗಗಳು ಅಥವಾ ಬಣ್ಣದ ಲೈನ್‌ಗಳನ್ನು ಬಳಸಿ ರಸ್ತೆಯ ಪಕ್ಕದಲ್ಲಿ ಪಾದಚಾರಿ ಜಾಗವನ್ನು ಸ್ಪಷ್ಟವಾಗಿ ಪ್ರತ್ಯೇಕಿಸಿ ಎಂದು ಸಲಹೆ ನೀಡಿದೆ.

ಅಧಿಕಾರಿಗಳಿಗೆ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲು ಕೇಂದ್ರ ಸರ್ಕಾರಕ್ಕೆ ನ್ಯಾಯಪೀಠವು ಎರಡು ವಾರಗಳ ಕಾಲಾವಕಾಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಎರಡು ವಾರಗಳ ನಂತರ ಮುಂದೂಡಿದೆ.

ಜೂನ್ 19 ರಂದು ನೀಡಿದ್ದ ತನ್ನ ಐತಿಹಾಸಿಕ ತೀರ್ಪನ್ನು ನೆನಪಿಸಿದ ಸುಪ್ರೀಂ ಕೋರ್ಟ್, ಗುರುತಿಸಲಾದ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಭಾರತೀಯ ಸಂವಿಧಾನದ ಆರ್ಟಿಕಲ್ 21 ಹಾಗೂ ಆರ್ಟಿಕಲ್ 19(1)(ಡಿ) ಅಡಿಯಲ್ಲಿ ಮೂಲಭೂತ ಹಕ್ಕಾಗಿದೆ ಎಂದು ಪ್ರತಿಪಾದಿಸಿದೆ. ರಸ್ತೆಯಲ್ಲಿ ಮೋಟಾರು ವಾಹನಗಳಿಗಿಂತ ಕಾಲ್ನಡಿಗೆಯಲ್ಲಿ ಸಾಗುವ ಪಾದಚಾರಿಗಳ ಹಕ್ಕಿಗೆ ಮೊದಲ ಆದ್ಯತೆ ಇರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಮತ್ತಷ್ಟು ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ಹೆಚ್ಚುತ್ತಿರುವ ರಸ್ತೆ ಅಪಘಾತಗಳು: ಭಾರತದಲ್ಲಿ ಪ್ರತಿ ವರ್ಷ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಮೃತಪಡುವವರ ಪೈಕಿ ಶೇ. 15 ರಿಂದ 20 ರಷ್ಟು ಜನರು ಪಾದಚಾರಿಗಳಾಗಿದ್ದಾರೆ. ನಗರ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಅಕ್ರಮ ಅಂಗಡಿಗಳ ಅತಿಕ್ರಮಣ ಮತ್ತು ವಾಹನ ಪಾರ್ಕಿಂಗ್ ಇದಕ್ಕೆ ಪ್ರಮುಖ ಕಾರಣವಾಗಿದೆ.

ಸುಪ್ರೀಂ ಕೋರ್ಟ್‌ನ ಈ ಆದೇಶವು ದೇಶದ ಪ್ರಮುಖ ಮಹಾನಗರಗಳಾದ ಬೆಂಗಳೂರು, ದೆಹಲಿ, ಮುಂಬೈ ಮುಂತಾದ ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ಅತಿಕ್ರಮಣ ತೆರವುಗೊಳಿಸಲು ಸ್ಥಳೀಯ ಪಾಲಿಕೆಗಳಿಗೆ (ಬಿಬಿಎಂಪಿ, ಎಂಸಿಡಿ ) ಕಾನೂನಾತ್ಮಕ ಒತ್ತಡ ತರಲಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us