Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ

ಬಿಜೆಪಿಯಿಂದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದೆ. ಬಹುತೇಕರು ನಿರೀಕ್ಷಿಸಿದಂತೆ ಸುವೇಂದು ಅಧಿಕಾರಿಯವರನ್ನು ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಘೋಷಿಸಲಾಗಿದೆ. ಈ ಬಗ್ಗೆ ಕೇಂದ್ರ ಅಮಿತ್ ಶಾ ಅಧಿಕೃತ ಘೋಷಣೆ ಮಾಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

Suvendu Adhikari: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಆಯ್ಕೆ; ನಾಳೆಯೇ ಪ್ರಮಾಣವಚನ
Suvendu Adhikari

Updated on: May 08, 2026 | 5:32 PM

ಕೊಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Elections) ಬಿಜೆಪಿಯ ಐತಿಹಾಸಿಕ ಗೆಲುವಿನ ನಂತರ, ಸುವೇಂದು ಅಧಿಕಾರಿ ಅವರನ್ನು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ. ಅವರು ನಾಳೆ (ಶನಿವಾರ) ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರು ಮೊದಲು ನಂದಿಗ್ರಾಮದಲ್ಲಿ ಮತ್ತು ಈಗ ಭವಾನಿಪುರದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಂಗಾಳದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕನಾಗಿ ಹೊರಹೊಮ್ಮುವ ಮೂಲಕ ಟಿಎಂಸಿ ಸರ್ಕಾರಕ್ಕೆ ಸವಾಲು ಹಾಕಿದ್ದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿಯ ವಿಧಾನಸಭಾ ಪಕ್ಷದ ನಾಯಕನ ಚುನಾವಣೆಗೆ ವೀಕ್ಷಕರಾಗಿ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಹಾಯಕ ವೀಕ್ಷಕರಾಗಿ ಬಂದಿದ್ದಾರೆ. ಅವರು ಇಂದು ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ಹೊಸದಾಗಿ ಆಯ್ಕೆಯಾದ ಬಿಜೆಪಿ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆ ಪ್ರಾರಂಭವಾಗುವ ಮೊದಲು, ಯಾವುದೇ ಬಿಜೆಪಿ ಶಾಸಕರು ಅಥವಾ ನಾಯಕರು ಮುಖ್ಯಮಂತ್ರಿ ಯಾರು ಎಂಬುದರ ಕುರಿತು ಮಾತನಾಡಿರಲಿಲ್ಲ. ಹಲವಾರು ಹೆಸರುಗಳ ಬಗ್ಗೆ ಚರ್ಚೆ ನಡೆದಿದ್ದರೂ, ಸುವೇಂದು ಅಧಿಕಾರಿಯವರ ಹೆಸರಿಗೆ ಹೆಚ್ಚಿನ ಬೆಂಬಲ ವ್ಯಕ್ತವಾಯಿತು.

ಸುವೇಂದು ಅಧಿಕಾರಿ ಅವರನ್ನು ವಿಧಾನಸಭಾ ನಾಯಕರನ್ನಾಗಿ ಘೋಷಿಸಿದ ಅಮಿತ್ ಶಾ, “ಎಲ್ಲರೂ ಮೊದಲು ಸಂಸದೀಯ ಪಕ್ಷದ ನಾಯಕರಾಗಿ ಸುವೇಂದು ಅಧಿಕಾರಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಎರಡನೇ ಹೆಸರನ್ನು ಪ್ರಸ್ತಾಪಿಸಬೇಕು ಎಂದು ಹೇಳಲಾಗಿತ್ತು. ಅದಕ್ಕಾಗಿ ಸಮಯವನ್ನೂ ನೀಡಲಾಯಿತು. ಆದರೆ, ಯಾರೂ ಎರಡನೇ ಹೆಸರನ್ನು ಪ್ರಸ್ತಾಪಿಸಲಿಲ್ಲ. ಆದ್ದರಿಂದ, ಸುವೇಂದು ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಮಾಡಲಾಯಿತು” ಎಂದು ಹೇಳಿದರು.


ಬಂಗಾಳದ ಮೊದಲ ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ಶನಿವಾರ ಬೆಳಿಗ್ಗೆ 11 ಗಂಟೆಗೆ ಬ್ರಿಗೇಡ್ ಮೈದಾನದಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.


ಬಿಜೆಪಿ ನೇತೃತ್ವದ ದೇಶದ 20 ರಾಜ್ಯಗಳ ಮುಖ್ಯಮಂತ್ರಿಗಳು ಸಹ ಭಾಗವಹಿಸಲಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲಾ ಪಕ್ಷಗಳನ್ನು ಆಹ್ವಾನಿಸಲಾಗಿದೆ. ನಾಳೆ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಸರ್ಕಾರ ರಚನೆಯಾಗುತ್ತಿರುವುದರಿಂದ ಪಕ್ಷದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:22 pm, Fri, 8 May 26

Follow Us