
ನವದೆಹಲಿ, ಜೂನ್ 2: ಬಿಜೆಪಿಗೆ ರಾಜೀನಾಮೆ ನೀಡಿ ಸ್ವತಂತ್ರ ಹಾದಿ ಹಿಡಿಯಲು ನಿರ್ಧರಿಸಿರುವ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ (K Annamalai) ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅಣ್ಣಾಮಲೈ ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಅಣ್ಣಾಮಲೈ ಆಗಲಿ ಅಥವಾ ಬಿಜೆಪಿ ನಾಯಕರಾಗಲಿ ಇದುವರೆಗೂ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಇದರ ಬೆನ್ನಲ್ಲೇ ನಡೆದಿರುವ ಈ ಭೇಟಿ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ, ಅಣ್ಣಾಮಲೈ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕೊನೆಯ ಹಂತದ ಪ್ರಯತ್ನಗಳನ್ನು ನಡೆಸುತ್ತಿದೆ. ಹೀಗಾಗಿ, ಅಣ್ಣಾಮಲೈ ಅವರಿಗೆ ಕೆಲವು ದಿನಗಳ ಕಾಲ ದೆಹಲಿಯಲ್ಲೇ ಇರುವಂತೆ ಸೂಚಿಸಲಾಗಿದೆ. ಇಂದು ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಣ್ಣಾಮಲೈ ನಡುವೆ ಈ ವಿಷಯದ ಕುರಿತು ಮತ್ತೊಂದು ಸುತ್ತಿನ ಮಾತುಕತೆ ನಡೆಯುವ ಸಾಧ್ಯತೆಯಿದೆ. ನಾಳೆ ಅಥವಾ ನಾಡಿದ್ದು ತಮಿಳುನಾಡಿನಲ್ಲಿ ಅಣ್ಣಾಮಲೈ ಅವರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?
ಸುದ್ದಿ ಸಂಸ್ಥೆ ANI ಮೂಲಗಳ ಪ್ರಕಾರ, ಅಣ್ಣಾಮಲೈ ಅವರು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಹಿರಿಯ ನಾಯಕ ಬಿ.ಎಲ್. ಸಂತೋಷ್ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಸಭೆಗಳಲ್ಲಿ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಕುರಿತೇ ಪ್ರಮುಖವಾಗಿ ಮಾತುಕತೆ ನಡೆದಿದೆ ಎನ್ನಲಾಗಿದೆ. ರಾಜೀನಾಮೆ ನೀಡುವ ಕುರಿತು ಗಂಭೀರ ಚರ್ಚೆಗಳು ನಡೆದಿದ್ದರೂ ಸಹ, ಅಣ್ಣಾಮಲೈ ಅವರು ಇನ್ನೂ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷಕ್ಕೆ ಸಲ್ಲಿಸಿಲ್ಲ ಎಂದು ಕೂಡ ಮೂಲಗಳು ಸ್ಪಷ್ಟಪಡಿಸಿವೆ.
ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಪಕ್ಷ ಸಂಘಟಿಸಲು ಬಯಸಿದ್ದ ಅಣ್ಣಾಮಲೈ ಅವರಿಗೆ ಬಿಜೆಪಿ ಹೈಕಮಾಂಡ್ ಎಐಎಡಿಎಂಕೆ (AIADMK) ಜೊತೆ ಮೈತ್ರಿ ಮಾಡಿಕೊಳ್ಳುವಂತೆ ಒತ್ತಡ ಹೇರಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಅವರನ್ನು ಈಗ ಸಮಾಧಾನ ಪಡಿಸಲು ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಜವಾಬ್ದಾರಿ ಅಥವಾ ಹುದ್ದೆ ನೀಡುವ ಭರವಸೆಯನ್ನು ಅಮಿತ್ ಶಾ ನೀಡಿದ್ದಾರೆ ಎನ್ನಲಾಗಿದೆ.
As per Sources, “Former Tamil Nadu BJP president K Annamalai met Union HM Amit Shah. K Annamalai also met BJP President Nitin Nabin and senior leader BL Santosh. He held discussions concerning his resignation. The discussions concluded with his meeting with HM Amit Shah. They… pic.twitter.com/LIysMj37wW
— ANI (@ANI) June 2, 2026
ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರಿಗೆ ರಾಜೀನಾಮೆ ನೀಡುವ ವೇಳೆ ಅಣ್ಣಾಮಲೈ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನದ ಕುರಿತು 5 ಪುಟಗಳ ಸುದೀರ್ಘ ವರದಿಯನ್ನು ಹಸ್ತಾಂತರಿಸಿದ್ದಾರೆ. ಮೈತ್ರಿ ರಾಜಕಾರಣದಿಂದ ಪಕ್ಷಕ್ಕೆ ಹೇಗೆ ಹಿನ್ನಡೆಯಾಯಿತು ಎಂಬುದನ್ನು ಅವರು ಅದರಲ್ಲಿ ವಿವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಣ್ಣಾಮಲೈ ಅವರ ಆಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಅವರು ಬಿಜೆಪಿಯಿಂದ ಸೌಹಾರ್ದಯುತವಾಗಿ ಹೊರಬಂದು ತಮಿಳುನಾಡಿನಲ್ಲಿ ಹೊಸ ರಾಜಕೀಯ ಪಯಣ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಹೊಸ ಪಕ್ಷ ಕಟ್ಟಲು ಮುಂದಾದ್ರಾ ಬಿಜೆಪಿ ನಾಯಕ ಅಣ್ಣಾಮಲೈ?
ಅಣ್ಣಾಮಲೈ ಅವರು ಮುಂದಿನ 6 ರಿಂದ 8 ತಿಂಗಳಲ್ಲಿ ತಮಿಳುನಾಡಿನಲ್ಲಿ ಹೊಸ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಸಿಬಿಎಸ್‌ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ತಂದ ‘ತ್ರಿಭಾಷಾ ಸೂತ್ರ’ವನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದರು. ಇದು ಅವರು ಈಗಾಗಲೇ ಬಿಜೆಪಿ ಸಿದ್ಧಾಂತದಿಂದ ದೂರ ಸರಿದು, ತಮಿಳುನಾಡಿನ ಜನರ ಪರವಾಗಿ ನಿಲ್ಲುವ ಮುನ್ಸೂಚನೆ ನೀಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅಣ್ಣಾಮಲೈ ಅವರ ರಾಜೀನಾಮೆ ಸುದ್ದಿ ಬೆನ್ನಲ್ಲೇ ತಮಿಳುನಾಡು ಬಿಜೆಪಿಯಲ್ಲಿ ಆಂತರಿಕ ಬಿಕ್ಕಟ್ಟು ಸ್ಫೋಟಗೊಂಡಿದೆ. ಅಣ್ಣಾಮಲೈ ಅವರ ನಿರ್ಗಮನದಿಂದ ಬೇಸತ್ತು ತಮಿಳುನಾಡು ಬಿಜೆಪಿ ಮೀನುಗಾರರ ಘಟಕದ ಅಧ್ಯಕ್ಷ ಎಂ.ಸಿ. ಮುನುಸ್ವಾಮಿ ಅವರೂ ಸಹ ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದು ತಮಿಳುನಾಡಿನಲ್ಲಿ ಬಿಜೆಪಿ ಸಂಪೂರ್ಣವಾಗಿ ನೆಲಕಚ್ಚುವ ಭೀತಿಯನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ