
ಚೆನ್ನೈ, ಅಕ್ಟೋಬರ್ 25: ಸಿಎಂ ಜೋಸೆಫ್ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರ ವಿಮಾನ ಇಂಧನವಾದ ಎಟಿಎಫ್ ಮೇಲಿನ ವ್ಯಾಟ್ ತೆರಿಗೆಯನ್ನು ಗಣನೀಯವಾಗಿ ಇಳಿಸಿದೆ. ಜೆಟ್ ಫುಯೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಇಳಿಸುವ ರಾಜ್ಯ ಸರ್ಕಾರದ ಈ ಕ್ರಮವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ರಾಜಕೀಯ ಕ್ಷೇತ್ರದಲ್ಲಿ ಅಪರೂಪವಾಗಿ ಕಾಣುವ ಸನ್ನಿವೇಶ ಇದಾಗಿರಬಹುದು.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಶೇ. 29ರಷ್ಟಿದ್ದ ಜೆಟ್ ಇಂಧನ ಮೇಲಿನ ವ್ಯಾಟ್ (VAT) ಪ್ರಮಾಣವನ್ನು ಶೇ. 16ಕ್ಕೆ ಇಳಿಸಲಾಗಿದೆ. ಅದೇ ರೀತಿ, ರಾಜ್ಯದ ಇತರ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಇದನ್ನು ಬ್ರಹ್ಮಾಂಡ ಕಡಿತಗೊಳಿಸಿ ಕೇವಲ ಶೇ. 1ಕ್ಕೆ ತರಲಾಗಿದೆ. ಅಲ್ಲದೆ, ಸಣ್ಣ ವಿಮಾನಗಳ ಇಂಧನ ತೆರಿಗೆಯನ್ನು ಶೇ. 5ರಿಂದ ಶೇ. 1ಕ್ಕೆ ಇಳಿಸಲಾಗಿದೆ. ಈ ವಿನಾಯಿತಿಯು ಒಂದು ವರ್ಷದವರೆಗೆ, ಅಂದರೆ ಅಕ್ಟೋಬರ್ 31, 2027ರವರೆಗೆ ಜಾರಿಯಲ್ಲಿರಲಿದೆ.
ಇದನ್ನೂ ಓದಿ: ಡ್ರಗ್ಸ್ ಜಾಲದ ಮೇಲೆ ‘ಆಪರೇಷನ್ ಟ್ರೈಡೆಂಟ್’; ಈಶಾನ್ಯ ರಾಜ್ಯಗಳಲ್ಲಿ 38 ಕಡೆ ದಾಳಿ; 100 ಕೋಟಿ ರೂ ಹವಾಲಾ ಜಾಲ ಪತ್ತೆ
ತಮಿಳುನಾಡು ಸರ್ಕಾರದ ಈ ನಿರ್ಧಾರವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಬಹಿರಂಗವಾಗಿ ಸ್ವಾಗತಿಸಿದ್ದಾರೆ.
“ವಿಮಾನ ಇಂಧನ ಮೇಲಿನ ವ್ಯಾಟ್ ತಗ್ಗಿಸುವ ಮೂಲಕ ತಮಿಳುನಾಡು ಸರ್ಕಾರವು ವಿಮಾನಯಾನ ಕ್ಷೇತ್ರಕ್ಕೆ ದೊಡ್ಡ ರಿಲೀಫ್ ನೀಡಿದೆ. ಪ್ರಯಾಣಿಕರನ್ನು ಸುಲಭವಾಗಿ ತಲುಪುವಂತೆ ಮಾಡಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ” ಎಂದು ವಿಮಾನಯಾನ ಸಚಿವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿ, ಮುಖ್ಯಮಂತ್ರಿ ವಿಜಯ್ ಅವರನ್ನು ಅಭಿನಂದಿಸಿದ್ದಾರೆ.
ವಿಮಾನಯಾನ ಕ್ಷೇತ್ರಕ್ಕೆ ಅನುಕೂಲ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಇಂಧನ ವೆಚ್ಚದಿಂದ ಸಂಕಷ್ಟಕ್ಕೀಡಾಗಿರುವ ವಿಮಾನಯಾನ ಸಂಸ್ಥೆಗಳಿಗೆ ಈ ತೆರಿಗೆ ಕಡಿತವು ದೊಡ್ಡ ಮಟ್ಟದ ಆರ್ಥಿಕ ನೆಮ್ಮದಿ ನೀಡಲಿದೆ. ಅಲ್ಲದೆ, ರಾಜ್ಯದ ಪ್ರಾದೇಶಿಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಮತ್ತು ಹೊಸ ಮಾರ್ಗಗಳ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ ಎಂದು ತಮಿಳುನಾಡು ಕೈಗಾರಿಕಾ ಸಚಿವರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ