ಡ್ರಗ್ಸ್ ಜಾಲದ ಮೇಲೆ ‘ಆಪರೇಷನ್ ಟ್ರೈಡೆಂಟ್’; ಈಶಾನ್ಯ ರಾಜ್ಯಗಳಲ್ಲಿ 38 ಕಡೆ ದಾಳಿ; 100 ಕೋಟಿ ರೂ ಹವಾಲಾ ಜಾಲ ಪತ್ತೆ
ಮಾದಕ ವಸ್ತು ಕಳ್ಳಸಾಗಣೆ ಜಾಲದ ವಿರುದ್ಧ ಕೇಂದ್ರ ಸರ್ಕಾರವು 'ಆಪರೇಷನ್ ಟ್ರೈಡೆಂಟ್' ಹೆಸರಿನಲ್ಲಿ ದೊಡ್ಡ ಕಾರ್ಯಾಚರಣೆ ನಡೆಸಿದೆ. ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ದಾಳಿ ನಡೆಸಿ, 18 ಜನರನ್ನು ಬಂಧಿಸಿದೆ. ₹100 ಕೋಟಿ ಮೌಲ್ಯದ ಹವಾಲಾ ಜಾಲವನ್ನು ಭೇದಿಸಲಾಗಿದೆ. ಎನ್‌ಸಿಬಿ ಹಾಗೂ ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ.

ನವದೆಹಲಿ, ಅಕ್ಟೋಬರ್ 25: ಅಂತಾರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ (Transnational drug cartel) ವಿರುದ್ಧ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಪ್ರಹಾರ ನಡೆಸಿದೆ. ಕೇಂದ್ರದ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (NCB) ಹಾಗೂ ವಿವಿಧ ತನಿಖಾ ಸಂಸ್ಥೆಗಳು ಜಂಟಿಯಾಗಿ ‘ಆಪರೇಷನ್ ಟ್ರೈಡೆಂಟ್’ (Operation Trident) ಹೆಸರಿನಲ್ಲಿ ಭಾರಿ ದೊಡ್ಡ ಕಾರ್ಯಾಚರಣೆಯನ್ನು ನಡೆಸಿವೆ. ಅಸ್ಸಾಂ, ಮಿಜೋರಾಂ ಮತ್ತು ಮಣಿಪುರ ರಾಜ್ಯಗಳ ಒಟ್ಟು 38 ಸ್ಥಳಗಳಲ್ಲಿ ಏಕಕಾಲಕ್ಕೆ ಈ ದಾಳಿಗಳನ್ನು ನಡೆಸಲಾಗಿದೆ.
ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಕಾರಿಡಾರ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್ ಸಿಂಡಿಕೇಟ್‌ನ ಆರ್ಥಿಕ ಮೂಲಗಳನ್ನು ಈ ಕಾರ್ಯಾಚರಣೆ ಧ್ವಂಸಗೊಳಿಸಿದೆ. ತನಿಖೆ ವೇಳೆ ಸುಮಾರು ₹100 ಕೋಟಿ ಮೌಲ್ಯದ ಹವಾಲಾ ವ್ಯವಹಾರಗಳು ಬೆಳಕಿಗೆ ಬಂದಿದ್ದು, 1,424 ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ₹17.82 ಕೋಟಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
38 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಹಾಗೂ 18 ಜನರ ಬಂಧನ
ಎನ್‌ಸಿಬಿ (NCB), ಮಿಜೋರಾಂ ಪೊಲೀಸ್ ಮತ್ತು ಜಾರಿ ನಿರ್ದೇಶನಾಲಯದ (ED) ಜಂಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಏಕಕಾಲಕ್ಕೆ 38 ತಂಡಗಳು ದಾಳಿ ನಡೆಸಿ ಒಟ್ಟು 18 ಆರೋಪಿಗಳನ್ನು ಬಂಧಿಸಿವೆ. ದಾಳಿಯ ವೇಳೆ 500 ಡಿಟನೇಟರ್‌ಗಳು ಹಾಗೂ ₹12 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಗೃಹ ಸಚಿವ ಅಮಿತ್ ಶಾ ಪ್ರಶಂಸೆ: ಮಾದಕ ವಸ್ತುಗಳ ಸಾಗಣೆಗೆ ಸಂಬಂಧಿಸಿದಂತೆ ಸರ್ಕಾರದ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿಯನ್ನು ಪುನರುಚ್ಚರಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಈ ಯಶಸ್ವಿ ಕಾರ್ಯಾಚರಣೆಗಾಗಿ ಎನ್‌ಸಿಬಿ ಹಾಗೂ ಮೂರು ರಾಜ್ಯಗಳ ಪೊಲೀಸ್ ಪಡೆಗಳನ್ನು ಅಭಿನಂದಿಸಿದ್ದಾರೆ. ದೇಶವನ್ನು ‘ನಶಾ ಮುಕ್ತ ಭಾರತ’ವನ್ನಾಗಿ ಮಾಡಲು ಈ ರೀತಿಯ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಾರಣಾಸಿಯಲ್ಲಿ ವಾಯುಪಡೆಯಿಂದ ರೋಚಕ ಏರೋಶೋ; ಪ್ರಧಾನಿ ಮೋದಿ ವೀಕ್ಷಣೆ; ಪ್ರಧಾನಿಗೆ ಸ್ವಕ್ಷೇತ್ರದಲ್ಲಿ ಭವ್ಯ ಸ್ವಾಗತ
ಮ್ಯಾನ್ಮಾರ್‌ನಿಂದ ಈಶಾನ್ಯ ರಾಜ್ಯಗಳ ಮೂಲಕ ಭಾರತದ ವಿವಿಧ ಭಾಗಗಳು ಹಾಗೂ ಬಾಂಗ್ಲಾದೇಶಕ್ಕೆ ಹೆರಾಯಿನ್ ಮತ್ತು ಮೆಥಾಂಫೆಟಮಿನ್‌ನಂತಹ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಪ್ರಮುಖ ಜಾಲವನ್ನು ಈ ಕಾರ್ಯಾಚರಣೆಯ ಮೂಲಕ ಮಟ್ಟಹಾಕಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




