ನದಿಯಲ್ಲಿ ಮುಳುಗುತ್ತಿದ್ದ ಕರುವನ್ನು ಕಾಪಾಡಲು ಹೋದ ಥಾಣೆಯ ರೈತನೂ ಸಾವು
ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಇಲ್ಲಿನ ಥಾಣೆ ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ನದಿಯಿಂದ ಕರುವನ್ನು ಕಾಪಾಡಲು ಹೋಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿ ರೈತನಾಗಿದ್ದು, ಅವರು ತಮ್ಮ ಮನೆಯ ಕರು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿ ಅದನ್ನು ರಕ್ಷಿಸಲು ಹೋದಾಗ ಈ ದುರ್ಘಟನೆ ನಡೆದಿದೆ.

ಥಾಣೆ, ಜುಲೈ 9: ಮಹಾರಾಷ್ಟ್ರದ ಥಾಣೆ (Thane) ಜಿಲ್ಲೆಯ 56 ವರ್ಷದ ರೈತ ನದಿಗೆ ಬಿದ್ದ ಕರುವನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಇಂದು (ಬುಧವಾರ) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಣೆಯ ಮುರ್ಬಾದ್ ತಾಲ್ಲೂಕಿನ ಪಲು ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸೋಮವಾರ ಭಾರೀ ಮಳೆಯ ನಡುವೆ ಕೃಷ್ಣ ಮೋರೆ ಎಂಬ ರೈತ ದನಗಳನ್ನು ಮೇಯಿಸಲು ನದಿಯ ದಡಕ್ಕೆ ಕರೆದೊಯ್ದಿದ್ದರು. ಆಗ ದನಗಳು ಹುಲ್ಲನ್ನು ತಿನ್ನುತ್ತಿದ್ದಾಗ, ಒಂದು ಕರು ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದ ನದಿಗೆ ಜಾರಿ ಬಿದ್ದು ಕೊಚ್ಚಿಹೋಯಿತು. ಅದನ್ನು ನೋಡಿ ಬೇರೆ ಹಸುಗಳು ಅಂಬಾ ಎಂದು ಕೂಗಲಾರಂಭಿಸಿದವು. ಕಣ್ಣೆದುರೇ ಕರು ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಲಾಗದೆ ಆ ರೈತ ಕರುವನ್ನು ಕಾಪಾಡಲು ನೀರಿಗೆ ಹಾರಿದರು.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 14ರವರೆಗೂ ಮಳೆ ಜೋರು
ಕರುವನ್ನು ಉಳಿಸಲು ನೀರಿಗೆ ಹಾರಿದ ಅವರು ಬಲವಾದ ಪ್ರವಾಹದಿಂದಾಗಿ ಕಾಣೆಯಾಗಿದ್ದರು. ಕೂಡಲೆ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಲಾಗಿದ್ದು, ಅವರು ಬಂದು ಹುಡುಕಾಟ ನಡೆಸಿದ್ದರು. ಸಂಜೆಯವರೆಗೂ ಸ್ಥಳೀಯರು ಹುಡುಕಾಟ ನಡೆಸಿದರೂ ಆ ರೈತನನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮಂಗಳವಾರ ಬೆಳಿಗ್ಗೆ ಪೆಂಡ್ರಿ ಗ್ರಾಮದ ಬಳಿ ಸುಮಾರು 2 ಕಿ.ಮೀ ದೂರದಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ರೈತನೂ ಬದುಕುಳಿಯಲಿಲ್ಲ, ಕರುವಿನ ಜೀವ ಕೂಡ ಉಳಿಯಲಿಲ್ಲ. ಈ ಘಟನೆಗೆ ಸಂಬಂಧಿಸಿದಂತೆ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




