ಪಶ್ಚಿಮ ಬಂಗಾಳದಲ್ಲಿ 6ರಿಂದ 9ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆ ಇಲ್ಲದೆ ಪಾಸ್
ಶಾಲೆ ತೆರೆದು, ಕ್ಲಾಸ್ ಆರಂಭಗೊಂಡ ಬಳಿಕ ಹಳೆಯ ತರಗತಿಯ ಪಾಠಗಳನ್ನು ಪುನರಾವರ್ತನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (WBBSE) 6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ವಾರ್ಷಿಕ ಪರೀಕ್ಷೆ ನಡೆಸದೆ ಮುಂದಿನ ತರಗತಿಗೆ ತೇರ್ಗಡೆಗೊಳಿಸಲು ನಿರ್ಧರಿಸಿದೆ. ಈ ಬಗ್ಗೆ ಅಧಿಕೃತವಾಗಿ ನಿರ್ಧಾರ ಕೈಗೊಂಡ ಭಾರತದ ಮೊದಲ ರಾಜ್ಯ ಇದಾಗಿದೆ.
ಕೊರೊನಾ ಸಂಕಷ್ಟದ ಬಳಿಕ ಶೈಕ್ಷಣಿಕ ವಲಯ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ವಿದ್ಯಾರ್ಥಿಗಳ ಕಲಿಕೆ, ಪರೀಕ್ಷೆ ಇತ್ಯಾದಿ ವ್ಯವಸ್ಥೆ ಏರುಪೇರಾಗಿದ್ದು, ಮುಂದಿನ ತರಗತಿಯ ಪ್ರವೇಶಾತಿ ಬಗ್ಗೆ ಗೊಂದಲ ಉಂಟಾಗಿದೆ. ಈ ಬಗ್ಗೆ ಪಶ್ಚಿಮ ಬಂಗಾಳ ಸರ್ಕಾರ ಹೊಸ ನಿರ್ಧಾರ ಕೈಗೊಂಡಿದ್ದು ವಿದ್ಯಾರ್ಥಿಗಳಿಗೆ ಸ್ವಲ್ಪ ರಿಲೀಫ್ ಸಿಕ್ಕಂತಾಗಿದೆ.
WBBSE ಗೆ ಒಳಪಟ್ಟ ಶಾಲೆಗಳಿಗೆ ಈ ನಿರ್ಧಾರವನ್ನು ಸರ್ಕಾರ ಸೂಚಿಸಿದೆ. ರಾಜ್ಯದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಮುಖ್ಯೋಪಾಧ್ಯಾಯರಿಗೆ WBBSE ಬರೆದ ಪತ್ರದಲ್ಲಿ, 6ರಿಂದ 9ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ತಿಳಿಸಲಾಗಿದೆ. ಶಾಲೆ ತೆರೆದು, ಕ್ಲಾಸ್ ಆರಂಭಗೊಂಡ ಬಳಿಕ ಹಳೆಯ ತರಗತಿಯ ಪಾಠಗಳನ್ನು ಪುನರಾವರ್ತನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.
ಶಾಲಾ ಕಾಲೇಜು ಪುನರಾರಂಭದ ಬಗ್ಗೆ ಪತ್ರದಲ್ಲಿ ಯಾವುದೇ ವಿವರಗಳು ಕಂಡುಬಂದಿಲ್ಲ. ಪಶ್ಚಿಮ ಬಂಗಾಳ ಶಿಕ್ಷಣ ಸಚಿವ ಪಾರ್ಥ ಚಟರ್ಜಿ, ಕೊವಿಡ್ ಪರಿಸ್ಥಿತಿ ತಿಳಿಗೊಂಡ ಬಳಿಕ ಶಾಲಾ ಕಾಲೇಜುಗಳನ್ನು ಆರಂಭಗೊಳಿಸುವ ಬಗ್ಗೆ ಹೇಳುವುದಾಗಿ ಈ ಹಿಂದೆ ತಿಳಿಸಿದ್ದರು. ಮಾರ್ಚ್ನಿಂದ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸದಿರುವ ಕಾರಣ 10 ಮತ್ತು 12ನೇ ತರಗತಿಯ ಶೇ.30ರಷ್ಟು ಪಾಠವನ್ನು ಮೊಟಕುಗೊಳಿಸುವ ಬಗ್ಗೆಯೂ ತಿಳಿಸಿದ್ದರು.
(ಪಿಟಿಐ)
ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಜನತೆಗೆ ಕೊಡುಗೆ ಘೋಷಿಸಿದ ಮಮತಾ ಬ್ಯಾನರ್ಜಿ.. ಏನದು?
Published On - 5:15 pm, Tue, 8 December 20