‘ಅಮ್ಮನ ಪಾದ ಮುಟ್ಟಿ ನಿನ್ನ ಪಾಪಗಳಿಗೆ ಕ್ಷಮೆಯಾಚಿಸು’; ಆಸ್ತಿ ವಿವಾದದಲ್ಲಿ ಮಗನಿಗೆ ಸುಪ್ರೀಂ ಕೋರ್ಟ್ ಸಲಹೆ
ತಾಯಿ ಮತ್ತು ಮಗನ ನಡುವಿನ ಆಸ್ತಿ ವಿವಾದದ ವಿಚಾರಣೆ ನಡೆಸುತ್ತಿದ್ದಾಗ, ಸುಪ್ರೀಂ ಕೋರ್ಟ್ ಅರ್ಜಿದಾರ ಮಗನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅರ್ಜಿ ಸಲ್ಲಿಸಿದ್ದ ಮಗನಿಗೆ ತನ್ನ ತಾಯಿಯಲ್ಲಿ ಕ್ಷಮೆಯಾಚಿಸುವಂತೆ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಪೋಷಕರು ಆಸ್ತಿಯ ಏಕೈಕ ಮಾಲೀಕತ್ವವನ್ನು ಹೊಂದಿದ್ದಾರೆ. ಅವರು ಮಗ ಮತ್ತು ಸೊಸೆಗೆ ಯಾವುದೇ ಬಾಡಿಗೆ ಪಾವತಿಸದೆ ಮೊದಲ ಮಹಡಿಯಲ್ಲಿ ಪರವಾನಗಿದಾರರಾಗಿ ವಾಸಿಸಲು ಅವಕಾಶ ನೀಡಿದ್ದರು. ಆದರೆ, ಮಗ ಮತ್ತು ಅವನ ಹೆಂಡತಿ ಪೋಷಕರನ್ನು ಕಿರುಕುಳ ನೀಡಲು ಮತ್ತು ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸಲು ಒತ್ತಡ ಹೇರಲು ಪ್ರಾರಂಭಿಸಿದರು ಎಂದು ಆರೋಪಿಸಲಾಗಿದೆ.

ನವದೆಹಲಿ, ಸೆಪ್ಟೆಂಬರ್ 9: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಮಗನ ನಡುವೆ ನಡೆದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ಎನ್.ಕೆ. ಸಿಂಗ್ ಅವರಿದ್ದ ಪೀಠವು ಅರ್ಜಿದಾರ ಮಗನಿಗೆ ತಾಯಿಯ ಪಾದಗಳಿಗೆ ಬಿದ್ದು ಕ್ಷಮೆಯಾಚಿಸುವಂತೆ ಸೂಚನೆ ನೀಡಿದೆ. ಮಗ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠವು, “ನೀವು ಹೋಗಿ ನಿಮ್ಮ ತಾಯಿಯ ಪಾದಗಳನ್ನು ಮುಟ್ಟಿ ಕ್ಷಮೆಯಾಚಿಸಬೇಕು. ನೀವು ಮಾಡಿದ ಎಲ್ಲಾ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ಕ್ಷಮೆ ಕೋರಿ” ಎಂದು ಹೇಳಿದೆ.
ಏನಿದು ಪ್ರಕರಣ?:
ಈ ಪ್ರಕರಣದಲ್ಲಿ ತಾಯಿ ಮತ್ತು ಆಕೆಯ ಪತಿಯೇ ಆಸ್ತಿಯ ಮಾಲೀಕರಾಗಿದ್ದರು. ತಮ್ಮ ಮಗ ಹಾಗೂ ಸೊಸೆಯ ಮೇಲಿನ ಪ್ರೀತಿಯಿಂದ ಉಚಿತವಾಗಿ ಮನೆಯ ಮೊದಲ ಮಹಡಿಯಲ್ಲಿ ವಾಸಿಸಲು ಅನುಮತಿ ನೀಡಿದ್ದರು. ಆದರೆ, ಮಗ ಹಾಗೂ ಸೊಸೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಪೋಷಕರಿಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದರು. ಮಗನ ಕಿರುಕುಳ ತಾಳಲಾರದೆ ಪೋಷಕರು ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ, ಪತ್ರಿಕೆಯಲ್ಲಿ ಸಾರ್ವಜನಿಕ ಪ್ರಕಟಣೆ ನೀಡುವ ಮೂಲಕ ಮಗನೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿತಗೊಳಿಸಿದ್ದರು. ಅಲ್ಲದೆ ತಮ್ಮ ಮನೆಯಲ್ಲಿ ವಾಸಿಸುವ ಅನುಮತಿಯನ್ನು ರದ್ದುಗೊಳಿಸಿ, ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರು.
ಇದನ್ನೂ ಓದಿ: ಕರ್ನಾಟಕ ಸೇರಿ 7 ರಾಜ್ಯಗಳ ಜಿಲ್ಲಾ ನ್ಯಾಯಾಧೀಶರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಳ: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಕೆಳ ನ್ಯಾಯಾಲಯಗಳ ತೀರ್ಪು:
ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ಹಾಗೂ ದೆಹಲಿ ಹೈಕೋರ್ಟ್, “ಆಸ್ತಿಯ ಪೂರ್ಣ ಮಾಲೀಕರು ಪೋಷಕರೇ ಹೊರತು ಮಗನಲ್ಲ. ಆದ್ದರಿಂದ ಮಗ ಹಾಗೂ ಸೊಸೆ ತಕ್ಷಣವೇ ಮನೆಯನ್ನು ಖಾಲಿ ಮಾಡಬೇಕು” ಎಂದು ಪೋಷಕರ ಪರವಾಗಿ ತೀರ್ಪು ನೀಡಿದ್ದವು.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಗ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದನು. ವಿಚಾರಣೆ ವೇಳೆ ನ್ಯಾಯಮೂರ್ತಿ ಶರ್ಮಾ ಅವರು ತಾಯಿಗಿರುವ ಮಹತ್ವವನ್ನು ನೆನಪಿಸುತ್ತಾ, ಮಗ ಮಾಡುತ್ತಿರುವುದು ತಪ್ಪು ಎಂದು ಪೀಠದಲ್ಲಿದ್ದ ವಕೀಲರ ಗಮನಕ್ಕೂ ತಂದರು. ಅಂತಿಮವಾಗಿ ಮಗ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿ, ಆತನಿಗೆ ತಾಯಿಯ ಆಶೀರ್ವಾದ ಪಡೆಯುವಂತೆ ಬುದ್ಧಿಮಾತು ಹೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




