ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ಎಳೆದುಕೊಂಡು ಹೋದ ಮಹಿಳೆಯರು; ತೀವ್ರವಾಗಿ ಗಾಯಗೊಂಡ ಶ್ವಾನ ಸಾವು
ನಮಗೆ ನಾಯಿಯನ್ನು ಸಾಯಿಸುವ ಉದ್ದೇಶ ಇರಲಿಲ್ಲ. ಅದನ್ನು ಸ್ಕೂಟರ್ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗಿ ಭಾಕ್ರಾ ನಾಲೆಯ ಬಳಿ ಬಿಡಲು ನಿರ್ಧರಿಸಿದ್ದೆವು ಎಂದು ಮಹಿಳೆಯರು ಹೇಳಿದ್ದಾರೆ.
ಚಂಡೀಗಡ: ಮಹಿಳೆಯರಿಬ್ಬರು ದ್ವಿಚಕ್ರ ವಾಹನದ ಹಿಂಭಾಗಕ್ಕೆ ನಾಯಿಯನ್ನು ಕಟ್ಟಿ ಎಳೆದುಕೊಂಡ ಹೋಗಿ ಅದರ ಸಾವಿಗೆ ಕಾರಣವಾದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಪಂಜಾಬ್ನ ಪಟಿಯಾಲದಲ್ಲಿ ಜೂನ್ 20ರಂದು ಈ ಕೃತ್ಯ ನಡೆದಿದ್ದು, ತೀವ್ರವಾಗಿ ಗಾಯಗೊಂಡಿದ್ದ ನಾಯಿ ಜೂನ್ 24 ನೇ ತಾರೀಖು ಪ್ರಾಣಬಿಟ್ಟಿದೆ. ಇದೀಗ ಹೀನ ಕೃತ್ಯವನ್ನೆಸಗಿದ ಇಬ್ಬರನ್ನೂ ಬಂಧಿಸಲಾಗಿದ್ದು, ಬಂಧಿತರನ್ನು ಚಂಚಲ ಮತ್ತು ಸೋನಿಯಾ ಎಂದು ಗುರುತಿಸಲಾಗಿದೆ.
ಬಂಧಿತರಿಬ್ಬರೂ ಪಟಿಯಾಲದ ಅಬ್ಲೋವಲ್ ಹಳ್ಳಿ ಸಮೀಪದ ಆದರ್ಶ ನಗರದ ನಿವಾಸಿಗಳಾಗಿದ್ದು, ಅವರ ಮೇಲೆ ಪ್ರಾಣಿಹಿಂಸೆ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಸದ್ಯ ಬಂಧಿತರಿಗೆ ಜಾಮೀನು ಲಭಿಸಿದ್ದು, ಅವರು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಪೊಲೀಸರು ವಶದಲ್ಲಿಟ್ಟುಕೊಂಡಿದ್ದಾರೆ.
ತನಿಖೆ ವೇಳೆ ಸೋನಿಯಾ ಮತ್ತು ಚಂಚಲ ಪರಿಚಿತರೆಂಬುದು ತಿಳಿದುಬಂದಿದ್ದು, ನಾಯಿ ಅವರ ಮೇಲೆ ದಾಳಿ ನಡೆಸಲು ಮುಂದಾಗಿದ್ದರಿಂದ ಕುಪಿತಗೊಂಡು ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ, ಮನೆಯ ಬಳಿಯಿದ್ದ ಮಗುವಿನ ಮೇಲೂ ಅದು ದಾಳಿ ನಡೆಸಿತ್ತು ಎಂದು ತಿಳಿಸಿದ್ದಾರೆ. ಆದರೆ, ನಮಗೆ ಸಾಯಿಸುವ ಉದ್ದೇಶ ಇರಲಿಲ್ಲ. ಅದನ್ನು ಸ್ಕೂಟರ್ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗಿ ಭಾಕ್ರಾ ನಾಲೆಯ ಬಳಿ ಬಿಡಲು ನಿರ್ಧರಿಸಿದ್ದೆವು ಎಂದಿದ್ದಾರೆ.
ಅವರು ನಾಯಿಯನ್ನು ವಾಹನಕ್ಕೆ ಕಟ್ಟಿಕೊಂಡು ಹೋಗುವುದನ್ನು ನೋಡಿದ ಕೆಲ ಪ್ರಾಣಿಪ್ರಿಯರು ಕೂಡಲೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅದನ್ನು ಪೊಲೀಸರ ಗಮನಕ್ಕೆ ತಂದಿದ್ದರು. ಅಲ್ಲದೇ ತೀವ್ರವಾಗಿ ಗಾಯಗೊಂಡಿದ್ದ ನಾಯಿಯನ್ನು ತೆಗೆದುಕೊಂಡು ಹೋಗಿದ್ದ ಎನ್ಜಿಓ ಸಂಸ್ಥೆ ಅದನ್ನು ಬದುಕಿಸಲು ಪ್ರಯತ್ನಿಸಿ ಸೂಕ್ತ ಚಿಕಿತ್ಸೆ ನೀಡಿತ್ತು. ಆದರೆ, ಎಲ್ಲಾ ಚಿಕಿತ್ಸೆಗಳೂ ವಿಫಲಗೊಂಡ ಪರಿಣಾಮ ಶ್ವಾನ ಜೂನ್ 24 ರಂದು ಮೃತಪಟ್ಟಿತ್ತು. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧವೂ ವ್ಯಕ್ತವಾಗಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅನೇಕರು ಧ್ವನಿಯೆತ್ತಿದ್ದಾರೆ.
ಮಂಗಳೂರಿನಲ್ಲೂ ನಡೆದಿತ್ತು ಇಂಥದ್ದೇ ಘಟನೆ ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಂಗಳೂರಿನಲ್ಲೂ ಇಂಥದ್ದೇ ಅಮಾನವೀಯ ಘಟನೆಯೊಂದು ನಡೆದಿತ್ತು. ಏಪ್ರಿಲ್ 15 ರಂದು ಮಂಗಳೂರು ಹೊರವಲಯದ ಸುರತ್ಕಲ್ನ ಎನ್.ಐ.ಟಿ.ಕೆ ಬಳಿ ನೀಲಪ್ಪ ಮತ್ತು ಮಾದಪ್ಪ ಎಂಬುವವರು ಬೈಕ್ ಹಿಂಬದಿಗೆ ನಾಯಿಯನ್ನು ಕಟ್ಟಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಎಳೆದುಕೊಂಡು ಹೋಗಿದ್ದರು. ಅದನ್ನು ನೋಡಿದ ಕೆಲವರು ಘಟನೆಯ ವಿಡಿಯೋ ಮಾಡಿಕೊಂಡು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಲಾಕ್ಡೌನ್ ವೇಳೆ ಬೀದಿನಾಯಿಗಳಿಗೆ ಮಾಂಸದೂಟ ಹಾಕಿದ ಮೊತ್ತ 15 ಲಕ್ಷ ರೂ; ಹಸುಗಳಿಗೆ ಮೇವು ಪೂರೈಕೆ ಮೊತ್ತ 3 ಲಕ್ಷ ರೂ: ಬಿಬಿಎಂಪಿ
ತಮ್ಮ ಮುದ್ದಿನ ಸಾಕು ನಾಯಿಯ ಸವಿ ನೆನಪಿಗೆ ಸಮಾಧಿ ಕಟ್ಟಿ ತಿಥಿ ಮಾಡಿ ಜನರಿಗೆ ಊಟ ಹಾಕಿದ ದಂಪತಿ
Published On - 11:40 am, Thu, 1 July 21