
ಭೋಪಾಲ್, ನವೆಂಬರ್ 5: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಹರ್ದೀಪ್ ಸಿಂಗ್ ಪುರಿ ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯಬೇಕಿದ್ದ ಉಪಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಇಂದು (ನ. 5) ಚುನಾವಣಾಧಿಕಾರಿ ಉಮೇಶ್ ಶರ್ಮಾ ಅವರು ಪುರಿ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.
ಎದುರಾಳಿಗಳ ನಾಮಪತ್ರ ರದ್ದು:
ಚುನಾವಣಾ ಕಣದಲ್ಲಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರಾಜಕುಮಾರ್ ಲೋಹಾನಿ ನಿಗದಿತ ಅವಧಿಯೊಳಗೆ ಅಫಿಡವಿಟ್ ಸಲ್ಲಿಸದ ಕಾರಣ ಅವರ ನಾಮಪತ್ರ ರದ್ದಾಗಿದೆ. ಪಕ್ಷೇತರ ಅಭ್ಯರ್ಥಿ ಕಾಂತೆ ಸಾಯಣ್ಣ ಅವರ ನಾಮಪತ್ರ ಪರಿಶೀಲನೆ ವೇಳೆ ರದ್ದುಗೊಂಡಿತು. ಇದರಿಂದಾಗಿ ಕಣದಲ್ಲಿದ್ದ ಏಕೈಕ ಅಭ್ಯರ್ಥಿಯಾದ ಹರ್ದೀಪ್ ಸಿಂಗ್ ಪುರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕೇಂದ್ರ ಸಚಿವ ಎಲ್. ಮುರುಗನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಈ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಮಧ್ಯಪ್ರದೇಶದ ಬಿಜೆಪಿ ರಾಜ್ಯ ಅಧ್ಯಕ್ಷ ಹೇಮಂತ್ ಖಂಡೇಲ್ವಾಲ್ ಅವರು ಭೋಪಾಲ್‌ನ ವಿಧಾನಸೌಧದಲ್ಲಿ ಪುರಿ ಅವರ ಪರವಾಗಿ ಆಯ್ಕೆಯ ಅಧಿಕೃತ ಪ್ರಮಾಣಪತ್ರವನ್ನು ಸ್ವೀಕರಿಸಿದರು.
ವಿಪಕ್ಷ ಕಾಂಗ್ರೆಸ್ ಮತ್ತು ಎದುರಾಳಿ ಅಭ್ಯರ್ಥಿಗಳು ಹರ್ದೀಪ್ ಸಿಂಗ್ ಪುರಿ ಅವರ ‘ಫಾರ್ಮ್ 26’ ಅಫಿಡವಿಟ್ ಅಪೂರ್ಣವಾಗಿದೆ ಎಂದು ಆಕ್ಷೇಪ ಎತ್ತಿ, ಅವರ ನಾಮಪತ್ರವನ್ನು ತಿರಸ್ಕರಿಸಬೇಕೆಂದು ಒತ್ತಾಯಿಸಿದ್ದರು. ಆದರೆ ಆಕ್ಷೇಪಣೆಯನ್ನು ಪರಿಶೀಲಿಸಿದ ಚುನಾವಣಾಧಿಕಾರಿ, ಪುರಿ ಅವರ ನಾಮಪತ್ರವು ಜನಪ್ರಾತಿನಿಧ್ಯ ಕಾಯ್ದೆಯ ನಿಯಮಾವಳಿಗಳಿಗೆ ಬದ್ಧವಾಗಿದ್ದು, ಯಾವುದೇ ಲೋಪವಿಲ್ಲ ಎಂದು ಸ್ಪಷ್ಟಪಡಿಸಿ ಆಕ್ಷೇಪಣೆಯನ್ನು ವಜಾಗೊಳಿಸಿದ್ದರು.
ರಾಜಕೀಯ ಪ್ರವೇಶಿಸುವ ಮೊದಲು ಹರ್ದೀಪ್ ಸಿಂಗ್ ಪುರಿ 1974ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಅಧಿಕಾರಿಯಾಗಿದ್ದರು. ಸಂಯುಕ್ತ ರಾಷ್ಟ್ರಸಂಘದಲ್ಲಿ ಭಾರತದ ಖಾಯಂ ಪ್ರತಿನಿಧಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿ 2013ರಲ್ಲಿ ನಿವೃತ್ತರಾದರು.
2014ರ ಜನವರಿ 2ರಂದು ಬಿಜೆಪಿಗೆ ಸೇರ್ಪಡೆಗೊಂಡ ಹರ್ದೀಪ್ ಸಿಂಗ್ ಪುರಿ, ಮೋದಿ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಈ ಮೊದಲು ಅವರು ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಹರ್ದೀಪ್ ಸಿಂಗ್ ಪುರಿ ಅವರು ಪ್ರಸ್ತುತ ಉತ್ತರ ಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದು, ಅವರ ಅವಧಿ ನವೆಂಬರ್ 25ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಕೇಂದ್ರ ಸಚಿವರಾಗಿ ಮುಂದುವರೆಯಲು ಅವರು ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.
ಹರ್ದೀಪ್ ಸಿಂಗ್ ಪುರಿ ವಿವಾದ:
ಇತ್ತೀಚೆಗೆ ಭಾರತೀಯ ರಾಜಕೀಯದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಅಮೆರಿಕದ ವಿವಾದಾತ್ಮಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ನಡುವಿನ ಸಂಪರ್ಕದ ಆರೋಪಗಳು ಸುದ್ದಿಯಲ್ಲಿದ್ದವು. ಅಮೆರಿಕದ ನ್ಯಾಯಾಂಗ ಇಲಾಖೆಯು ಜೆಫ್ರಿ ಎಪ್‌ಸ್ಟೀನ್ ಸಂಬಂಧಿತ ಸಾರ್ವಜನಿಕ ದಾಖಲೆಗಳು ಮತ್ತು ಇಮೇಲ್‌ಗಳನ್ನು ಬಿಡುಗಡೆ ಮಾಡಿದಾಗ, ಅದರಲ್ಲಿ ಹರ್ದೀಪ್ ಸಿಂಗ್ ಪುರಿ ಅವರ ಹೆಸರು ಹಾಗೂ ಇಮೇಲ್ ವ್ಯವಹಾರಗಳು ಉಲ್ಲೇಖವಾಗಿದ್ದವು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ವಿಪಕ್ಷಗಳ ನಾಯಕರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ, ಕೇಂದ್ರ ಸರ್ಕಾರದ ಸಚಿವರೊಬ್ಬರು ಎಪ್‌ಸ್ಟೀನ್ ಜೊತೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಒಟ್ಟಿಗೆ ಇರುವ ಕೆಲ ಹಳೆಯ ಫೋಟೋಗಳು ವೈರಲ್ ಆಗಿ ವಿಪಕ್ಷಗಳ ಕಟು ಟೀಕೆಗೆ ಗುರಿಯಾಗಿದ್ದವು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿದ್ದರು. ತಾವು 2013-14ರ ಸಮಯದಲ್ಲಿ ‘ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್’ (ಸಂಸ್ಥೆಯಲ್ಲಿದ್ದಾಗ, ಸಂಸ್ಥೆಯ ಡೆಲಿಗೇಷನ್ ಭಾಗವಾಗಿ ಜೆಫ್ರಿ ಎಪ್‌ಸ್ಟೀನ್ ಅವರನ್ನು ಕೇವಲ ಮೂರ್ನಾಲ್ಕು ಬಾರಿ ಭೇಟಿಯಾಗಿದ್ದಾಗಿ ತಿಳಿಸಿದ್ದರು. ಈ ಭೇಟಿಗಳು ಕೇವಲ ವೃತ್ತಿಪರ ಮಾತುಕತೆಗಳಾಗಿದ್ದವೇ ಹೊರತು, ಎಪ್‌ಸ್ಟೀನ್ ಎಸಗಿದ ಯಾವುದೇ ಅಕ್ರಮ ಅಥವಾ ಲೈಂಗಿಕ ಅಪರಾಧ ಕೃತ್ಯಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:52 pm, Thu, 5 November 26