ನೇರಳೆ ಹಣ್ಣು ಮಾರುವವರಿಗೂ ಜಿಎಸ್‌ಟಿ ನೋಟಿಸ್; ಕರ್ನಾಟಕ ಸರ್ಕಾರದ ವಿರುದ್ಧ ಪ್ರಲ್ಹಾದ್ ಜೋಶಿ ಆರೋಪ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 1.2 ಲಕ್ಷ ಕೋಟಿ ರೂ. ವಸೂಲಿಗೆ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದೆ ಎಂದು ಆರೋಪಿಸಿರುವ ಅವರು ನೇರಳೆ ಹಣ್ಣು ಮಾರುವವರಿಗೂ ಜಿಎಸ್‌ಟಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅತ್ಯಂತ ಅಯೋಗ್ಯ ರೀತಿಯಲ್ಲಿ ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ನವದೆಹಲಿ, ಜುಲೈ 23: ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಯಾವುದೇ ಮೂಲಗಳಿಂದಾದರೂ ಸರಿ 1.2 ಲಕ್ಷ ಕೋಟಿ ವಸೂಲಿ ಮಾಡುವಂತೆ ಮುಖ್ಯಮಂತ್ರಿಗಳೇ ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ದರ ಪರಿಣಾಮದಿಂದಲೇ ರಾಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಜಿಎಸ್‌ಟಿ ನೋಟಿಸ್ ನೀಡಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ಹಣದ ದಾಹದಲ್ಲಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು-ನೇರಳೆ ಹಣ್ಣು ಮಾರುವವರಿಗೂ ಜಿಎಸ್‌ಟಿ ನೋಟಿಸ್ ಕೊಟ್ಟಿದೆ. ಇದು ಅಯೋಗ್ಯ ಸರ್ಕಾರವಲ್ಲವೇ? ಇವರಿಗೆ ನಾಚಿಕೆ ಆಗುವುದಿಲ್ಲವೇ? ಎಂದು ಸಿದ್ದರಾಮಯ್ಯನವರ ವಿರುದ್ಧ ಪ್ರಲ್ಹಾದ್ ಜೋಶಿ ಹರಿಹಾಯ್ದಿದ್ದಾರೆ. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿ ಅತ್ಯಂತ ಕೆಟ್ಟ, ಅಯೋಗ್ಯ ಸರ್ಕಾರ ನಡೆಸುತ್ತಿದ್ದಾರೆ. ಲಂಚ ತೆಗೆದುಕೊಂಡು ಜನರನ್ನು ಅಡ್ಡ ದಾರಿಗೆಳೆಯುವ ಕೆಲಸ ಮಾಡುತ್ತಿದೆ ಈ ಸರ್ಕಾರ ಎಂದು ಅವರು ಆರೋಪಿಸಿದರು.
ಇದನ್ನೂ ಓದಿ: ಕೇವಲ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದರು: ಪ್ರಲ್ಹಾದ್ ಜೋಶಿ
ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳುವಲ್ಲಿ ರಾಜ್ಯ ಸರ್ಕಾರಗಳೇ ಮಹತ್ವದ ಪಾತ್ರ ವಹಿಸುತ್ತವೆ. ರಾಜ್ಯ ಸರ್ಕಾರಕ್ಕೆ 3ನೇ ಎರಡು ಭಾಗದಷ್ಟು ಅಧಿಕಾರವಿದ್ದರೆ, ಕೇಂದ್ರ ಸರ್ಕಾರಕ್ಕೆ ಕೇವಲ 3ನೇ ಒಂದು ಭಾಗ ಮಾತ್ರ ಅಧಿಕಾರವಿರುತ್ತದೆ. ರಾಜ್ಯ ಸರ್ಕಾರಗಳ ನಿರ್ಣಯವೇ ಅಂತಿಮವಾಗಿರುತ್ತದೆ. ಹಾಗಿದ್ದರೂ ಸಿದ್ದರಾಮಯ್ಯ ಸರ್ಕಾರ ಬರೀ ಸುಳ್ಳು ಹೇಳುತ್ತಾ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ ಎಂದು ಅವರು ಖಂಡಿಸಿದರು.
ಕರ್ನಾಟಕದಲ್ಲಿ ಆರ್ಥಿಕ ದಿವಾಳಿತ ಎದುರಾಗಿದೆ, ಜಿ ಎಸ್ ಟಿಯಲ್ಲಿ ಬರುವ ಕೇವಲ ಶೇ 0.5% ಆದಾಯದ ಹಣಕ್ಕಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಕಿರುಕುಳ ನೀಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ಅತ್ಯಂತ ಕೆಟ್ಟ ಆಡಳಿತ.#GST… pic.twitter.com/Xs7p9GoB0Q
— Pralhad Joshi (@JoshiPralhad) July 23, 2025
ಪ್ರಧಾನ ಮಂತ್ರಿ ಸಭೆ ಕರೆದರೂ ಸಿಎಂ ಸಿದ್ದರಾಮಯ್ಯ ಬರುವುದಿಲ್ಲ, ನೀತಿ ಆಯೋಗದ ಸಭೆಗೂ ಹಾಜರಾಗುವುದಿಲ್ಲ. ಜಿಎಸ್‌ಟಿ ಕೌನ್ಸಿಲ್‌ಗೂ ಬರುವುದಿಲ್ಲ. ಮಂತ್ರಿಗಳನ್ನು ಕಳಿಸಿಕೊಡುವ ಸಿಎಂ ಸಿದ್ದರಾಮಯ್ಯ ಬರೀ ಸುಳ್ಳು ಹೇಳುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಸುಳ್ಳು ಹೇಳಲು ಇವರಿಗೆ ಮಿತಿಯೇ ಇಲ್ಲ ಎಂದು ಜೋಶಿ ಆರೋಪಿಸಿದರು.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ನೋಟಿಸ್: ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದ ಜೋಶಿ
ಕರ್ನಾಟಕದಲ್ಲಿ ಇರುವುದಕ್ಕಿಂತ ದೊಡ್ಡ ದೊಡ್ಡ ನಗರಗಳು ಮಾಹಾರಾಷ್ಟ್ರದಲ್ಲಿವೆ. ಮುಂಬೈ, ಪುಣೆ, ನಾಗ್ಪುರದಂತಹ ಬೃಹತ್ ವಾಣಿಜ್ಯ ನಗರಗಳಿವೆ. ಅಲ್ಲೆಲ್ಲೂ ಇಲ್ಲದ ಜಿಎಸ್‌ಟಿ ನೋಟಿಸ್ ನಮ್ಮ ರಾಜ್ಯದಲ್ಲಷ್ಟೇ ಏಕೆ? ಎಂದು ಪ್ರಶ್ನಿಸಿರುವ ಸಚಿವ ಪ್ರಲ್ಹಾದ್ ಜೋಶಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಮಾಡುವುದೆಲ್ಲವನ್ನೂ ಮಾಡಿ ಈಗ ಕೇಂದ್ರದ ಮೇಲೆ ಹಾಕಲು ಹೊರಟಿದೆ ಎಂದು ಖಂಡಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




