ಪರಿಸರ, ಕೃಷಿ, ಸಂಸ್ಕೃತಿ, ಜಾನಪದದ ಬಗ್ಗೆ ಅತೀವ ಆಸಕ್ತಿ ಇಟ್ಟುಕೊಂಡವರು ಖ್ಯಾತ ಲೇಖಕಿ ಉಷಾ ಕಟ್ಟೆಮನೆ. ಇಂದು (ಫೆ.7) ಉತ್ತರಾಖಂಡದಲ್ಲಿ ಸಂಭವಿಸಿದ ದಿಢೀರ್ ಹಿಮಕುಸಿತದಿಂದ ಉಕ್ಕಿ ಹಿರಿದ ಧೌಲಿಗಂಗಾ ನದಿ ಪಾತ್ರದ ಬದುಕಿನ ಬಗ್ಗೆ ಅವರ ಈ ಬರಹ ಮತ್ತು ಚಿತ್ರಗಳು ಸಾಕಷ್ಟು ಒಳನೋಟಗಳನ್ನು ನೀಡುತ್ತವೆ.
ಇಂದು ಬೆಳಿಗ್ಗೆ ಹತ್ತು ಘಂಟೆಗೆ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ದವಳಗಿರಿ ಪರ್ವತ ಪ್ರದೇಶದಲ್ಲಿ ದಿಢೀರ್ ಹಿಮಕುಸಿತ ಉಂಟಾದ ಕಾರಣ ಧೌಲಿಗಂಗಾ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಿದೆ. ನದಿಗೆ ತಪೋವನ ಎಂಬಲ್ಲಿ ಕಟ್ಟಲಾಗಿದ್ದ ರಿಷಿಗಂಗಾ ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ನೂರೈವತ್ತು ಜನ ಕಾರ್ಮಿಕರು ಕಾಣೆಯಾಗಿದ್ದಾರೆ. ಇವರಲ್ಲಿ ಈಗಾಗಲೇ ಹತ್ತು ಕಾರ್ಮಿಕರ ಶವವನ್ನು ಮೇಲೆತ್ತಲಾಗಿದೆ.
ಇಡೀ ಉತ್ತರಾಖಂಡ ರಾಜ್ಯದಲ್ಲಿ ವಿದ್ಯುತ್ಗಾಗಿ ಹಲವು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಎಗ್ಗಿಲ್ಲದೆ ಅಬಿವೃದ್ಧಿ ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ. ತೆಹ್ರಿಯಲ್ಲಿ ಭಾಗೀರಥಿಗೆ ಕಟ್ಟಲಾಗಿರುವ ಅಣೆಕಟ್ಟು ನಮ್ಮ ದೇಶದ ಅತ್ಯಂತ ದೊಡ್ಡ ಅಣೆಕಟ್ಟು. ಇದು ವಿಶ್ವದ ಎಂಟನೆಯ ದೊಡ್ಡ ಅಣೆಕಟ್ಟು. ಇದೇನಾದರೂ ಒಡೆದರೆ ಇಡೀ ಉತ್ತರಾಖಂಡ ರಾಜ್ಯ 2013ರ ‘ಸುನಾಮಿ’ಗಿಂತಲೂ ದೊಡ್ಡದಾದ ದುರಂತ ಕಾಣಬಹುದು.
ಹಿಮಾಲಯ ಶ್ರೇಣಿಯ ಭೂಮಿ ಅತ್ಯಂತ ನಾಜೂಕಿನದು. ಅಲ್ಲಿ ಮಾನವ ಚಟುವಟಿಕೆಗಳು ಮೇರೆಮೀರಿ ಹೋಗಿದೆ. ಇದನ್ನೆಲ್ಲಾ ತಾಳಿಕೊಳ್ಳುವ ಶಕ್ತಿ ಇಲ್ಲಿನ ಮಣ್ಣಿಗಿಲ್ಲ. 2013ರ ಜೂನ್ನಲ್ಲಿ ಉತ್ತರಾಖಂಡದಲ್ಲಿ ಮೇಘಸ್ಪೋಟವಾಗಿ ಮಹಾದುರಂತ ಸಂಭವಿಸಿತ್ತು. ನವೆಂಬರ್ನಲ್ಲಿ ನಾನಲ್ಲಿಗೆ ಭೇಟಿ ನೀಡಿದ್ದೆ. ಅಲ್ಲಿಯ ದುರಂತದ ಪಳೆಯುಳಿಕೆಗಳಾಗಿ ಉಳಿದಿರುವ ಕಟ್ಟಡಗಳು, ಮೆಶಿನರಿಗಳನ್ನು ನೋಡಿ ಮನಸ್ಸು ತಳಮಳಿಸಿತ್ತು.
ಆಗ ಭವಿಷ್ಯಬದ್ರಿಗೆ ಚಾರಣ ಹೋಗಿದ್ದೆ. ದಾರಿ ಮಧ್ಯದಲ್ಲಿ ತಪೋವನ ಸಿಗುತ್ತದೆ. ತಪೋವನವು ಜೋಶಿಮಠದಿಂದ 27 ಕಿಮೀ ದೂರದಲ್ಲಿದೆ. ಇಲ್ಲಿಯೇ ಅಪೂರ್ವವಾದ ಸೂರ್ಯೋದಯವನ್ನು ಕಂಡಿದ್ದೆ. ಸೂರ್ಯೋದಯಕ್ಕೆ ಮುನ್ನ ಆತನ ಕರಸ್ಪರ್ಶಗಳಿಗೆ ಒಳಗಾದ ನೀಲಕಂಠ ಪರ್ವತದ ಅಪೂರ್ವ ನೋಟವೊಂದು ನನಗೆ ಸಿಕ್ಕಿತ್ತು. ಬಿಸಿನೀರನ್ನು ಉಗುಳುವ ಕುಂಡವೊಂದು ಇಲ್ಲಿದೆ.
ಜೋಶಿಮಠದಲ್ಲಿ ಬದ್ರಿನಾಥದಿಂದ ಬರುವ ಅಲಕಾನಂದ ಮತ್ತು ದವಳಗಿರಿಯಿಂದ ಬರುವ ಧೌಲಿಗಂಗಾದ ಸಂಗಮವಾಗುತ್ತದೆ. ಅದಕ್ಕೆ ವಿಷ್ಣುಪ್ರಯಾಗವೆಂದು ಹೆಸರು. ಇಲ್ಲಿಯೂ ಒಂದು ಜಲವಿದ್ಯುತ್ ಉತ್ಪಾದನಾ ಅಣೆಕಟ್ಟು ಇದೆ. ಇಂದು ಧೌಲಿಗಂಗಾದಲ್ಲಿ ಬಂದ ಪ್ರವಾಹದಿಂದ ಇದಕ್ಕೂ ಹಾನಿಯಾಗಿದೆ ಎಂದು ಸುದ್ದಿಯಿದೆ. ಇಲ್ಲಿಂದ ಸುಮಾರು ಇಪ್ಪತ್ತು ಕಿಮೀ ಕೆಳಗೆ ಶ್ರೀನಗರ ಎಂಬಲ್ಲಿಯೂ ಒಂದು ಅಣೆಕಟ್ಟಿದೆ. ಇಲ್ಲಿ ನದಿ ಮಧ್ಯೆ 2013ರ ಸುನಾಮಿಗೆ ಕಾರಣವೆಂದು ನಂಬಲಾಗಿರುವ ಧಾರೀ ದೇವಿಯ ಮಂದಿರವಿದೆ.
ನಾವು ಹೋದಾಗ ತಪೋವನದಲ್ಲಿ ಜಲವಿದ್ಯುತ್ ಕಾಮಗಾರಿಗಳು ಆರಂಭವಾಗಿರಲಿಲ್ಲ. ಹಾಗಾಗಿ ಅದು ನಿಜವಾದ ತಪೋವನದಂತಿತ್ತು. ಈಗ ಹೇಗಿದೆಯೋ! ಅಂದಿನ ತಪೋವನ ಮತ್ತು ಧೌಲಿಗಂಗಾ ನನ್ನ ಕಣ್ಣಮುಂದಿದೆ.
ಸಹಾಯವಾಣಿ ಸಂಪರ್ಕಿಸಿ
ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರ ಸಂಪರ್ಕ ಸಂಖ್ಯೆ: 1070 ಮತ್ತು 95574 44486
Explainer | ಉತ್ತರಾಖಂಡ್ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?
Published On - 7:24 pm, Sun, 7 February 21