ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?

ಬದರಿನಾಥ ಧಾಮದಿಂದ ಡೆಹ್ರಾಡೂನ್‌ನ ಸಹಸ್ರಧಾರಾಗೆ ಪೈಲಟ್ ಸೇರಿದಂತೆ ಐವರು ಕನ್ನಡಿಗರು ಸೇರಿದಂತೆ 6 ಜನರನ್ನು ಹೊತ್ತೊಯ್ಯುತ್ತಿದ್ದ 'ಟ್ರಾನ್ಸ್ ಭಾರತ್' ಸಂಸ್ಥೆಯ ಹೆಲಿಕಾಪ್ಟರ್, ಜೋಶಿಮಠ ಪ್ರದೇಶದ ಚಾಯೀ ಮತ್ತು ಥೈಂಗ್ ಗ್ರಾಮಗಳ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್ ಸೇರಿದಂತೆ ಆರೂ ಜನರು ಮೃತಪಟ್ಟಿದ್ದಾರೆ. ಇಂದು ಸಂಜೆ ಅವರೆಲ್ಲರ ಸುಟ್ಟು ಕರಕಲಾದ ಶವಗಳನ್ನು ಪತ್ತೆಹಚ್ಚಲಾಗಿದೆ. ಭಾರತೀಯ ಸೇನೆಯು ಈ ದುರಂತದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಸ್ಥಳವನ್ನು ಪತ್ತೆಹಚ್ಚಿ ಪರಿಶೀಲಿಸಿದಾಗ ಹೆಲಿಕಾಪ್ಟರ್‌ನಲ್ಲಿದ್ದ ಯಾರೊಬ್ಬರೂ ಬದುಕಿ ಉಳಿದಿಲ್ಲ ಎಂಬುದು ದೃಢಪಟ್ಟಿದೆ. ಹಾಗಾದರೆ, ಈ ಹೆಲಿಕಾಪ್ಟರ್​ ಅಪಘಾತಕ್ಕೆ ಕಾರಣವೇನು? ಈ ಘಟನೆಗೂ ಮುನ್ನ ಏನೇನಾಯ್ತು? ಎಂಬ ವಿವರ ಇಲ್ಲಿದೆ.

ಬೆಂಗಳೂರಿನ ಐವರ ದುರಂತ ಅಂತ್ಯ; ಉತ್ತರಾಖಂಡದ ಹೆಲಿಕಾಪ್ಟರ್ ಪತನದ ವೇಳೆ ಏನೇನಾಯ್ತು?
ಉತ್ತರಾಖಂಡದ ಹೆಲಿಕಾಪ್ಟರ್ ಪತನ
Image Credit source: PTI

Updated on: Oct 30, 2026 | 7:39 PM

ಮುಖ್ಯಾಂಶಗಳು

  • ಉತ್ತರಾಖಂಡದ ಬದರಿನಾಥದಿಂದ ಸಹಸ್ರಧಾರಾಕ್ಕೆ ಬರುತ್ತಿದ್ದ ಹೆಲಿಕಾಪ್ಟರ್ ಪತನ
  • ಬೆಂಗಳೂರಿನ ಸಿಸಿಬಿ ಇನ್​ಸ್ಪೆಕ್ಟರ್ ಅರುಣ್ ಸೇರಿ 6 ಜನರ ದಾರುಣ ಸಾವು
  • ಐವರು ಕನ್ನಡಿಗರು, ಓರ್ವ ಪೈಲಟ್ ಮೃತದೇಹಗಳು ಸುಟ್ಟು ಕರಕಲು

ಡೆಹ್ರಾಡೂನ್, ಅಕ್ಟೋಬರ್ 30: ಬೆಂಗಳೂರಿನಿಂದ ಕೇದಾರನಾಥ ಮತ್ತು ಬದರಿನಾಥಕ್ಕೆ ಹೋಗಿದ್ದ ಐವರು ಗೆಳೆಯರು ದಾರುಣ ಅಂತ್ಯ ಕಂಡಿದ್ದಾರೆ. ಈ ಐವರಲ್ಲಿ ಸಿಸಿಬಿ ಇನ್​ಸ್ಪೆಕ್ಟರ್ ಕೂಡ ಸೇರಿದ್ದಾರೆ. ಉಳಿದ ನಾಲ್ವರು ವಕೀಲರು. ಇಂದು ಮಧ್ಯಾಹ್ನ ಬದರಿನಾಥದಲ್ಲಿ ದರ್ಶನ ಮುಗಿಸಿ ಟ್ರಾನ್ಸ್ ಭಾರತ್ ಏವಿಯೇಷನ್ ​​ಹೆಲಿಕಾಪ್ಟರ್​ನಲ್ಲಿ ಹಿಂತಿರುಗುತ್ತಿದ್ದ ವೇಳೆ ಚಮೋಲಿ ಜಿಲ್ಲೆಯ ಜೋಶಿಮಠ ಪ್ರದೇಶದಲ್ಲಿ ಹೆಲಿಕಾಪ್ಟರ್ ಪತನಗೊಂಡಿತ್ತು. ಇಂದು ಸಂಜೆಯ ವೇಳೆ ಪೈಲಟ್ ಹಾಗೂ ಈ ಐವರ ಸುಟ್ಟು ಕರಕಲಾದ ಶವಗಳನ್ನು ಪತ್ತೆಹಚ್ಚಲಾಗಿದೆ. ಹಾಗಾದರೆ, ಇಂದು ಹೆಲಿಕಾಪ್ಟರ್ ಪತನವಾಗಿದ್ದು ಹೇಗೆ? ಅದಕ್ಕೂ ಮೊದಲು ಏನೇನಾಯ್ತು? ಎಂಬ ಮಾಹಿತಿ ಇಲ್ಲಿದೆ.

ಉತ್ತರಾಖಂಡದ ಜೋಶಿಮಠ ಬಳಿ ನಡೆದ ಹೆಲಿಕಾಪ್ಟರ್ ಪತನದ ಸಂಪೂರ್ಣ ಮಾಹಿತಿ ಇಲ್ಲಿದೆ.

  1. ಬೆಂಗಳೂರಿನ ಗೆಳೆಯರಾದ ಅರುಣ್ ಸಾಲುಂಕೆ, ಎಚ್.ಎಸ್. ನಾಗರಾಜ್, ಪ್ರತಾಪ್ ಬಚಿಹಳ್ಳಿ ನಿಂಗರಾಜನ್, ಸುಧೀರ್ ಕೆ. ಮತ್ತು ಶಂಕರಗೌಡ ವಿ.ಬಿ. ಎಂಬುವವರು ಉತ್ತರಾಖಂಡದ ಧಾರ್ಮಿಕ ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿದ್ದರು. ಇಂದು ಬದರಿನಾಥ ದೇವಸ್ಥಾನದಲ್ಲಿ ದರ್ಶನ ಮುಗಿಸಿದ ಅವರು ಟ್ರಾನ್ಸ್ ಭಾರತ್ ಏವಿಯೇಷನ್ ​​ಹೆಲಿಕಾಪ್ಟರ್​ನಲ್ಲಿ ವಾಪಾಸ್ ಬರುತ್ತಿದ್ದರು. ಹೆಲಿಕಾಪ್ಟರ್ ಪೈಲಟ್ ಹಿಮಾಂಶು ಸಭರ್ವಾಲ್ ಸೇರಿದಂತೆ 6 ಜನರು ಅದರಲ್ಲಿದ್ದರು. ದೇವರ ದರ್ಶನ ಮುಗಿಸಿ ವಾಪಾಸ್ ಬರುತ್ತಿದ್ದ ಅವರಿಗೆ ಇದೇ ತಮ್ಮ ಕೊನೆಯ ದಿನವಾಗಲಿದೆ ಎಂಬ ಸುಳಿವೂ ಇರಲಿಲ್ಲ. ಇಂದು ಮಧ್ಯಾಹ್ನ 1.14ಕ್ಕೆ ಬದರಿನಾಥದಿಂದ ಡೆಹ್ರಾಡೂನ್‌ನ ಸಹಸ್ರಧಾರಾಗೆ ಹೆಲಿಕಾಪ್ಟರ್ ಹೊರಟಿತ್ತು.
  2. ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಬದರಿನಾಥ ಮತ್ತು ಜೋಶಿಮಠದ ನಡುವಿನ ಕಣಿವೆಯ ಬಳಿ ಬಂದಾಗ ಆ ಹೆಲಿಕಾಪ್ಟರ್​ ನಿಯಂತ್ರಣ ಕೊಠಡಿಯೊಂದಿಗಿನ ಸಂಪರ್ಕ ಕಳೆದುಕೊಂಡಿತ್ತು. ಉತ್ತರಾಖಂಡದಲ್ಲೂ ಮಳೆಯಾಗುತ್ತಿರುವುದರಿಂದ ವಾತಾವರಣವೂ ಸರಿಯಾಗಲಿಲ್ಲ. ಹಲವಾರು ಪ್ರಯತ್ನಗಳನ್ನು ಮಾಡಿದರೂ ಆ ಹೆಲಿಕಾಪ್ಟರ್​​ನ ಸ್ಥಳವನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
  3. ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡ ಬಳಿಕ ಸ್ವಲ್ಪ ಸಮಯದ ನಂತರ, ಚಾಯ್ ಗ್ರಾಮ ಮತ್ತು ಥಾಂಗ್ ಗ್ರಾಮದ ಬಳಿ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಮಾಹಿತಿ ಲಭ್ಯವಾಯಿತು. ಆದರೂ ಅದರಲ್ಲಿದ್ದ ಪ್ರಯಾಣಿಕರು ಯಾರಾದರೂ ಕೆಳಗೆ ಹಾರಿ ಬದುಕಿರುವ ಸಾಧ್ಯತೆ ಇದೆಯೇ ಎಂಬ ಸಣ್ಣ ನಿರೀಕ್ಷೆ ಉಳಿದಿತ್ತು.
  4. ತಕ್ಷಣ ಭಾರತೀಯ ಸೇನೆ, ಜಿಲ್ಲಾಡಳಿತ, NDRF ಮತ್ತು SDRF ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಜೋಶಿಮಠದ ಕಣಿವೆಯ ಸುತ್ತಮುತ್ತ ಹುಡುಕಾಟ ನಡೆಸಿದ ನಂತರ ಇಂದು ಸಂಜೆಯ ವೇಳೆಗೆ ಸುಟ್ಟುಕರಕಲಾಗಿ, ದೇಹಗಳು ಛಿದ್ರವಾದ ಸ್ಥಿತಿಯಲ್ಲಿ 6 ಜನರ ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.
  5. ಈಗ ಮೃತದೇಹಗಳನ್ನು ಅಪಘಾತ ಸ್ಥಳದಿಂದ ರಸ್ತೆ ಮೂಲಕ ಸಾಗಿಸಲಾಗುತ್ತಿದ್ದು, ಅಲ್ಲಿ ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (UCADA) ಆ ಕಂಪನಿಯ ಸಂಪೂರ್ಣ ಹೆಲಿಕಾಪ್ಟರ್ ಫ್ಲೀಟ್ ಅನ್ನು ಸ್ಥಗಿತಗೊಳಿಸಿದೆ.
  6. ಈ ಅಪಘಾತದ ನಂತರ, ಪ್ರತಿಕೂಲ ಹವಾಮಾನದ ಸಮಯದಲ್ಲಿ ಹೆಲಿಕಾಪ್ಟರ್ ಹಾರಾಟದ ಬಗ್ಗೆ ದೊಡ್ಡ ಪ್ರಶ್ನೆ ಎದ್ದಿದೆ. ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಆರೆಂಜ್ ಅಲರ್ಟ್ ನೀಡಿತ್ತು. ಆದರೂ ಹೆಲಿಕಾಪ್ಟರ್​ ಹಾರಿಸುವ ನಿರ್ಧಾರ ಮಾಡಿದ್ದು ಆ ಹೆಲಿಕಾಪ್ಟರ್​ ಕಂಪನಿಗೆ ದೊಡ್ಡ ಸಂಕಷ್ಟ ತಂದಿದೆ. ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್‌ನ ಸಂಪೂರ್ಣ ಹೆಲಿಕಾಪ್ಟರ್ ಫ್ಲೀಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರರ್ಥ ಕಂಪನಿಯ ಇತರ ಹೆಲಿಕಾಪ್ಟರ್‌ಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಅಪಘಾತದ ಕಾರಣವನ್ನು ತನಿಖೆ ಮಾಡಲು ಮತ್ತು ಸುರಕ್ಷತಾ ಕಾಳಜಿಗಳನ್ನು ತನಿಖೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.
  7. ಹವಾಮಾನ ಇಲಾಖೆಯ ಎಚ್ಚರಿಕೆಯ ಹೊರತಾಗಿಯೂ ಹೆಲಿಕಾಪ್ಟರ್ ಹಾರಾಟಕ್ಕೆ ಹೇಗೆ ಅನುಮತಿ ಪಡೆಯಿತು? ಹಾರಾಟದ ಸಮಯದಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಯಾವ ಆಧಾರದ ಮೇಲೆ ನಿರ್ಣಯಿಸಲಾಯಿತು? ಎಂಬ ಪ್ರಶ್ನೆಗಳು ಎದ್ದಿವೆ.
  8. ತನಿಖೆಯು ಹವಾಮಾನ ಪರಿಸ್ಥಿತಿಗಳು, ಹೆಲಿಕಾಪ್ಟರ್‌ನ ತಾಂತ್ರಿಕ ಸ್ಥಿತಿ, ಪೈಲಟ್‌ಗೆ ಒದಗಿಸಲಾದ ಮಾಹಿತಿ ಮತ್ತು ಹಾರಾಟ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಸುರಕ್ಷತಾ ಮಾನದಂಡಗಳನ್ನು ಪರಿಶೀಲಿಸುತ್ತದೆ. ಪರ್ವತ ಪ್ರದೇಶಗಳಲ್ಲಿ ಹವಾಮಾನವು ವೇಗವಾಗಿ ಬದಲಾಗುತ್ತದೆ. ಕೆಲವೊಮ್ಮೆ, ಕೆಲವೇ ನಿಮಿಷಗಳಲ್ಲಿ, ಮೋಡಗಳು, ಬಲವಾದ ಗಾಳಿ ಮತ್ತು ಕಡಿಮೆ ಗೋಚರತೆಯು ಹಾರಾಟವನ್ನು ಕಷ್ಟಕರವಾಗಿಸಬಹುದು. ಆದ್ದರಿಂದ, ಹೆಲಿಕಾಪ್ಟರ್ ಕಾರ್ಯಾಚರಣೆಗಳ ಸಮಯದಲ್ಲಿ ನಿಖರವಾದ ಹವಾಮಾನ ಮಾಹಿತಿ ಮತ್ತು ಸುರಕ್ಷತಾ ನಿಯಮಗಳ ಅನುಸರಣೆ ನಿರ್ಣಾಯಕವಾಗಿದೆ.
  9. ಜೋಶಿಮಠ ಕಣಿವೆ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಉಂಟಾದ ಕಳಪೆ ಹವಾಮಾನ ಹಾಗೂ ದಟ್ಟ ಮಂಜು ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಶಂಕಿಸಲಾಗಿದೆ. ಉತ್ತರಾಖಂಡದ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಮಳೆ ಹಾಗೂ ಹಿಮಪಾತ ಮುಂದುವರಿದಿದ್ದು, ಅಕ್ಟೋಬರ್ 29ರಿಂದ ಬೀಳುತ್ತಿರುವ ಹಿಮದಿಂದಾಗಿ ಕೇದಾರನಾಥ ಧಾಮದಲ್ಲಿ ಈ ಋತುವಿನ ಮೊದಲ ಭಾರಿ ಹಿಮಪಾತ ದಾಖಲಾಗಿದೆ. ಇಡೀ ಹಿಮಾಲಯನ್ ಬೆಟ್ಟಗಳು ಬಿಳಿ ಹಿಮದ ಹೊದಿಕೆಯಿಂದ ಕಂಗೊಳಿಸುತ್ತಿದ್ದು, ತಾಪಮಾನ ತೀವ್ರವಾಗಿ ಕುಸಿದಿದೆ.
  10. ಚಮೋಲಿಯಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕಳವಳ ವ್ಯಕ್ತಪಡಿಸಿದ್ದಾರೆ. ಇಡೀ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತ್ವರಿತಗೊಳಿಸುವಂತೆ ಮತ್ತು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ಜಿಲ್ಲಾಡಳಿತ ಮತ್ತು ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Fri, 30 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us