ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಅತಿ ಭಯ ಬೇಡ: ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ
ಸದ್ಯ ಅಭಿವೃದ್ಧಿ ಪಡಿಸಲಾಗಿರುವ ಕೊವಿಡ್-19 ಲಸಿಕೆಗಳೇ, ರೂಪಾಂತರಿ ಕೊರೊನಾ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಲಿವೆ ಎಂದು ಪಿಎಂಒದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ರಾಘವನ್ ತಿಳಿಸಿದರು. ಲಸಿಕೆ ದೇಹದಲ್ಲಿ ಹುಟ್ಟುಹಾಕುವ ಪ್ರತಿಕಾಯಗಳನ್ನು ನಾಶಮಾಡಲು ರೂಪಾಂತರ ವೈರಸ್ಗೆ ಶಕ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ದೆಹಲಿ: ಭಾರತಕ್ಕೆ ರೂಪಾಂತರಿ ಕೊರೊನಾ ವೈರಸ್ ಕಾಲಿಟ್ಟಿದೆ. ಇತ್ತೀಚೆಗಷ್ಟೇ ಬ್ರಿಟನ್ನಿಂದ ಆಗಮಿಸಿದ ಆರು ಮಂದಿಯಲ್ಲಿ ಹೊಸ ಪ್ರಭೇದದ ಕೊರೊನಾ ಸೋಂಕು ಪತ್ತೆಯಾಗಿದೆ. ಹಾಗೇ, ರೂಪಾಂತರಿ ವೈರಸ್ ನಿಯಂತ್ರಣದ ಸಲುವಾಗಿ ಹೆಚ್ಚಿನ ಎಚ್ಚರಿಕೆ, ಕಣ್ಗಾವಲು ಇಟ್ಟಿದ್ದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಜನವರಿ 31ರವರೆಗೂ ಅದು ಮುಂದುವರಿಯಲಿದೆ ಎಂದು ಹೇಳಿದೆ.
ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಇಲಾಖೆ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ್, ದೇಶದಲ್ಲಿನ ಕೊರೊನಾ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಹಾಗೇ, ಪಂಜಾಬ್, ಆಸ್ಸಾಂ, ಗುಜರಾತ್ ಮತ್ತು ಆಂಧ್ರಪ್ರದೇಶಗಳಲ್ಲಿ ಕೊವಿಡ್-19 ಲಸಿಕಾ ವಿತರಣೆ ಅಭಿಯಾನದ ಸಾಧಕ ಬಾಧಕಗಳ ಪರಿಶೀಲನೆಗಾಗಿ ಎರಡು ದಿನಗಳಿಂದ ‘ಡ್ರೈ ರನ್’ ನಡೆಸಲಾಗುತ್ತಿದೆ ಎಂದು ತಿಳಿಸಿದರು.
10 ಲ್ಯಾಬ್ ನಿರ್ಮಾಣ
ಸರ್ಕಾರ ಈಗಾಗಲೇ ಭಾರತೀಯ ಜಿನೋಮಿಕ್ಸ್ ಒಕ್ಕೂಟವನ್ನು ರಚಿಸಿದೆ. ರೂಪಾಂತರಿತ ಕೊರೊನಾ ವೈರಸ್ ಪತ್ತೆ ಹಚ್ಚಲು ಒಟ್ಟು 10 ಪ್ರಯೋಗಾಲಯಗಳನ್ನು ಗುರುತಿಸಲಾಗಿದೆ. ಈ ಲ್ಯಾಬ್ಗಳು ಈಗಾಗಲೇ ಕೊರೊನಾದ ವಿವಿಧ ರೂಪಾಂತರವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿವೆ. ಜಿನೋಮ್ ಅನುಕ್ರಮ ಗುರುತಿಸುವ ಕಾರ್ಯವನ್ನೂ ಪ್ರಾರಂಭ ಮಾಡಿವೆ. ಬ್ರಿಟನ್ನಲ್ಲಿ ಕೊರೊನಾದ ಹೊಸ ಪ್ರಭೇದ ಪತ್ತೆಯಾಗಿದೆ ಎಂದು ಘೋಷಣೆ ಆಗುವುದಕ್ಕೂ ಮೊದಲೇ, ನಮ್ಮ ದೇಶದ ಈ ಲ್ಯಾಬ್ಗಳು 500ಕ್ಕೂ ಹೆಚ್ಚು ಜಿನೋಮ್ ಸೆಕ್ವೆನ್ಸ್ಗಳನ್ನು (ಜೀವತಂತು ವೈವಿಧ್ಯ) ಗುರುತಿಸಿವೆ ಎಂದು ರಾಜೇಶ್ ಭೂಷಣ್ ತಿಳಿಸಿದರು.
ಸಾಮಾನ್ಯ ಕೊರೊನಾ ಸೋಂಕಿತರ ಪ್ರಮಾಣ ದೇಶದಲ್ಲಿ ತಗ್ಗಿದೆ. ಪ್ರತಿದಿನ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ಆರು ತಿಂಗಳ ನಂತರ ದಿನವೊಂದಕ್ಕೆ 17,000ಕ್ಕಿಂತಲೂ ಕಡಿಮೆ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಭಾರತದಲ್ಲಿ ಇದುವರೆಗಿನ ಒಟ್ಟು ಕೊವಿಡ್-19 ಪ್ರಕರಣಗಳಲ್ಲಿ ಶೇ.63ರಷ್ಟು ಪುರುಷರಿಂದ, 37ರಷ್ಟು ಮಹಿಳೆಯರಿಂದ ವರದಿಯಾಗಿದೆ. ಹಾಗೇ, 18-44ವರೆಗಿನ ವಯಸ್ಸಿನವರಲ್ಲಿ ಸೋಂಕು ಪತ್ತೆಯಾದ ಪ್ರಮಾಣ ಶೇ.52 ಎಂದು ರಾಜೇಶ ಭೂಷಣ್ ತಿಳಿಸಿದರು. ಕೊರೊನಾದಿಂದ ಮೃತಪಟ್ಟವರಲ್ಲಿ ಶೇ.70ರಷ್ಟು ಪುರುಷರು, ಶೇ.30 ಮಹಿಳೆಯರು ಮತ್ತು ಶೇ.55ರಷ್ಟು 60 ವರ್ಷ ಮೇಲ್ಪಟ್ಟವರು ಎಂದು ವಿಶ್ಲೇಷಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ನೀತಿ ಆಯೋಗದ ಸದಸ್ಯ ಡಾ.ವಿಕೆ. ಪೌಲ್ ಮಾತನಾಡಿ, ಕೊರೊನಾದ ಹೊಸ ರೂಪಾಂತರ ಹೊಸ ಚಲನೆಯನ್ನೇ ಹೊಂದಿರಬಹುದು. ವೇಗವಾಗಿಯೂ ಹರಡುತ್ತಿದೆ. ಈಗಾಗಲೇ ಹಲವು ದೇಶಗಳಿಗೆ ಕಾಲಿಟ್ಟಿದೆ. ಸದ್ಯ ಪ್ರಾರಂಭ ಹಂತದಲ್ಲಿರುವುದರಿಂದ ವೈರಸ್ ನಿಯಂತ್ರಣ ಸುಲಭ ಎಂದು ಅಭಿಪ್ರಾಯಪಟ್ಟರು. ಹಾಗೇ, ಈಗಾಗಲೇ ರೂಪಾಂತರಿ ಕೊರೊನಾಕ್ಕೆ ಒಳಗಾಗಿರುವ ಸಂಪರ್ಕಿತರನ್ನು ಪತ್ತೆಹಚ್ಚುವ, ಕಣ್ಗಾವಲಿನಲ್ಲಿ ಇಡುವ ಕಾರ್ಯ ಭರದಿಂದ ಸಾಗಿದೆ ಎಂದು ಮಾಹಿತಿ ನೀಡಿದರು.
ಹಾಗೇ ಸದ್ಯ ಅಭಿವೃದ್ಧಿ ಪಡಿಸಲಾಗಿರುವ ಕೊವಿಡ್-19 ಲಸಿಕೆಗಳೇ, ರೂಪಾಂತರಿ ಕೊರೊನಾ ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಲಿವೆ ಎಂದು ಪ್ರಧಾನ ಮಂತ್ರಿಯ ವೈಜ್ಞಾನಿಕ ಸಲಹೆಗಾರ ಕೆ. ರಾಘವನ್ ತಿಳಿಸಿದರು. ಲಸಿಕೆ ದೇಹದಲ್ಲಿ ಹುಟ್ಟುಹಾಕುವ ಪ್ರತಿಕಾಯಗಳನ್ನು ನಾಶಮಾಡಲು ರೂಪಾಂತರಿ ವೈರಸ್ಗೆ ಶಕ್ತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Published On - 6:20 pm, Tue, 29 December 20