Sandhya Mukherjee: ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ಆಸ್ಪತ್ರೆಗೆ ದಾಖಲು

| Updated By: ಸುಷ್ಮಾ ಚಕ್ರೆ

Updated on: Jan 27, 2022 | 6:29 PM

ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದ ಗಾಯಕಿ ಸಂಧ್ಯಾ ಮುಖರ್ಜಿ ಅವರಿಗೆ ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ತೊಂದರೆ ಶುರುವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Sandhya Mukherjee: ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಗಾಯಕಿ ಸಂಧ್ಯಾ ಮುಖರ್ಜಿ ಆಸ್ಪತ್ರೆಗೆ ದಾಖಲು
ಸಂಧ್ಯಾ ಮುಖರ್ಜಿ
Follow us on

ಕೊಲ್ಕತ್ತಾ: ಈ ಬಾರಿಯ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದ ಹಿರಿಯ ಹಿನ್ನೆಲೆ ಗಾಯಕಿ ಸಂಧ್ಯಾ ಮುಖರ್ಜಿ (90) ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಇಂದು ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರಿಂದ ಕರೆ ಬಂದ ನಂತರ ಕುಟುಂಬ ಸದಸ್ಯರು ಸಂಧ್ಯಾ ಮುಖರ್ಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಗಾಯಕಿ ಸಂಧ್ಯಾ ಮುಖರ್ಜಿ (Sandhya Mukherjee) ಅವರನ್ನು ಅವರ ಮನೆಯಿಂದ ಕೋಲ್ಕತ್ತಾ ಟ್ರಾಫಿಕ್ ಪೋಲಿಸ್ ರಚಿಸಿದ ಹಸಿರು ಕಾರಿಡಾರ್‌ನ ಮೂಲಕ ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಎಸ್​ಎಸ್​ಕೆಎಂ ಆಸ್ಪತ್ರೆಯಲ್ಲಿ ಅನುಭವಿ ವೈದ್ಯರ ತಂಡದೊಂದಿಗೆ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲಾಗಿದೆ. ಸಂಧ್ಯಾ ಮುಖರ್ಜಿ ಅವರಿಗೆ ಶ್ವಾಸಕೋಶದ ಸೋಂಕು ಹಾಗೂ ಉಸಿರಾಟದ ತೊಂದರೆ ಶುರುವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ಆಸ್ಪತ್ರೆಯ ವುಡ್‌ಬರ್ನ್ ಘಟಕದಲ್ಲಿ ದಾಖಲಿಸಲಾಗಿದೆ.

‘ಬಂಗಾ ಬಿಭೂಷಣ’ ಮತ್ತು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದ ಗಾಯಕಿ ಸಂಧ್ಯಾ ಮುಖರ್ಜಿ ಒಂದೆರಡು ದಿನಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ತಮಗೆ ಪದ್ಮಶ್ರೀ ಪ್ರಶಸ್ತಿ ಬಂದಿರುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ದೂರವಾಣಿಯಲ್ಲಿ ಅವರನ್ನು ಸಂಪರ್ಕಿಸಿದಾಗ ಅವರು ಈ ಪ್ರಶಸ್ತಿ ನನಗಿಂತ ಕಿರಿಯರಿಗೆ ಸಲ್ಲಬೇಕು. ನನಗೆ ಈಗ ವಯಸ್ಸಾಗಿದೆ. ನಾನು ಹಾಡುವುದನ್ನು ನಿಲ್ಲಿಸಿದ ಮೇಲೆ ಈ ಪ್ರಶಸ್ತಿ ನೀಡಿ ಅವಮಾನ ಮಾಡಬೇಡಿ ಎಂದು ಹೇಳಿದ್ದರು.

ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ, ಕಮ್ಯುನಿಷ್ಟ್‌ ನಾಯಕ ಬುದ್ಧದೇವ ಭಟ್ಟಾಚಾರ್ಯ ಅವರು ತಮಗೆ ಘೋಷಣೆಯಾದ ಪದ್ಮಭೂಷಣ ತಿರಸ್ಕಾರ ಮಾಡಿದ ಬೆನ್ನಲ್ಲೇ ಖ್ಯಾತ ಗಾಯಕಿ ಸಂಧ್ಯಾ ಮುಖರ್ಜಿ (ಸಂಧ್ಯಾ ಮುಖ್ಯೋಪಾಧ್ಯಾಯ) ಕೂಡ ಪದ್ಮಶ್ರೀ ಪುರಸ್ಕಾರ ತಿರಸ್ಕರಿಸಿದ್ದರು. ಸುಮಾರು 8 ದಶಕಗಳ ಕಾಲ ಗಾಯನವನ್ನು ವೃತ್ತಿಯಾಗಿಸಿಕೊಂಡಿದ್ದ ಸಂಧ್ಯಾ ಮುಖರ್ಜಿ ಅವರಿಗೆ ಇದೀಗ 90 ವರ್ಷ. ಅವರು ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Padma Awards 2022: ದಲಿತ ಸಂವೇದನೆಗೆ ಅಕ್ಷರಲೋಕದಲ್ಲಿ ಶಾಶ್ವತ ಸ್ಥಾನ ದೊರಕಿಸಿದ ಕವಿ ಸಿದ್ದಲಿಂಗಯ್ಯಗೆ ಪದ್ಮಶ್ರೀ ಪ್ರಶಸ್ತಿ: ಹರ್ಷ ವ್ಯಕ್ತಪಡಿಸಿದ ಪುತ್ರಿ ಮಾನಸಾ

Padma Awards 2022: ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸದಿರಲು ಬುದ್ಧದೇವ್​ ಭಟ್ಟಾಚಾರ್ಯ ನಿರ್ಧಾರ