Viral Video: ಆಂಧ್ರದ ಹಾಸ್ಟೆಲ್ನಲ್ಲಿ ರ್ಯಾಗಿಂಗ್; ಯುವಕನನ್ನು ಥಳಿಸಿ, ಐರನ್ ಬಾಕ್ಸ್ನಿಂದ ಸುಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಗಳು
ಹಾಸ್ಟೆಲ್ ರೂಮಿನೊಳಗೆ ಯುವಕರು ಸೇರಿ ಇನ್ನೋರ್ವ ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆಗಿದ್ದು, ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಹೈದರಾಬಾದ್: ಕಾನೂನು ಎಷ್ಟೇ ಕಟ್ಟುನಿಟ್ಟಾಗಿದ್ದರೂ ಕಾಲೇಜು, ಹಾಸ್ಟೆಲ್ಗಳಲ್ಲಿ ರ್ಯಾಗಿಂಗ್ ಇನ್ನೂ ಪೂರ್ತಿಯಾಗಿ ಕಡಿಮೆಯಾಗಿಲ್ಲ. ಈ ರ್ಯಾಗಿಂಗ್ನಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಆಂಧ್ರಪ್ರದೇಶದ (Andra Pradesh) ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂನಲ್ಲಿರುವ ಖಾಸಗಿ ಇಂಜಿನಿಯರಿಂಗ್ ಹಾಸ್ಟೆಲ್ನ ರೂಮಿನಲ್ಲಿ ವಿದ್ಯಾರ್ಥಿಗಳು ಸೇರಿ ಒಬ್ಬ ಯುವಕನನ್ನು ಥಳಿಸಿ, ಇಸ್ತ್ರಿ ಪೆಟ್ಟಿಗೆಯಿಂದ ಆತನ ಮೈ ಸುಟ್ಟಿರುವ ವಿಡಿಯೋ ಭಾರೀ (Video Viral) ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಇಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಹಾಸ್ಟೆಲ್ ರೂಮಿನೊಳಗೆ ಯುವಕರು ಸೇರಿ ಇನ್ನೋರ್ವ ಯುವಕನನ್ನು ಥಳಿಸಿದ ವಿಡಿಯೋ ವೈರಲ್ ಆಗಿದ್ದು, ತನ್ನನ್ನು ಬಿಡುವಂತೆ ಆತ ಕೈ ಮುಗಿದು ಬೇಡಿಕೊಂಡರೂ ಕರುಣೆ ತೋರದೆ ಥಳಿಸಲಾಗಿದೆ.
student Beaten, Burnt With iron box by college mates in Andhrapradesh#andharapradeshstudent #AndhraPradesh pic.twitter.com/wKA4mrpZ4G
— VISHAL SAVANE (@VISHALSAVANE) November 5, 2022
ಕೋಲುಗಳನ್ನು ತಂದು ರೂಮಿನಲ್ಲಿ ಆ ಯುವಕನನ್ನು ಥಳಿಸುತ್ತಿರುವಾಗ ಆತ ಕ್ಷಮೆ ಯಾಚಿಸುತ್ತಾ, ತನ್ನನ್ನು ಬಿಟ್ಟು ಬಿಡುವಂತೆ ಬೇಡಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೂ ಕೇಳದ ಯುವಕರು ಶರ್ಟ್ ಬಿಚ್ಚಲು ಹೇಳಿ ಮತ್ತೆ ಮತ್ತೆ ಥಳಿಸಿದ್ದಾರೆ. ಅದೇ ರೂಮಿನಲ್ಲಿದ್ದ ಇನ್ನೋರ್ವ ಯುವಕ ಈ ದೃಶ್ಯವನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ಇದೀಗ ಆ ಯುವಕರ ಪಾಲಿಗೆ ಮುಳುವಾಗಿದೆ.
ಇದನ್ನೂ ಓದಿ: ರಸ್ತೆಯಲ್ಲೇ ಕುಳಿತು ಕೆಆರ್ ನಗರದ ಜನರ ನಿದ್ರೆಗೆಡಿಸಿದ್ದ ಭಯಾನಕ ಚಿರತೆ ಕೊನೆಗೂ ಸೆರೆ; ಇಲ್ಲಿದೆ ವಿಡಿಯೋ
ಹೊಡೆತ ತಿಂದ ಯುವಕ ಮತ್ತು ಎಲ್ಲಾ ಆರೋಪಿಗಳು ಎಸ್‌ಆರ್‌ಕೆಆರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಈ ಘಟನೆ ಒಂದೆರಡು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಅಂಕಿತ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ದೇಹದ ತುಂಬ ಗಾಯಗಳಾಗಿವೆ. ಅವರ ಎದೆ ಮತ್ತು ಕೈಗಳ ಮೇಲೆ ಸುಟ್ಟ ಗಾಯಗಳಿವೆ. ಈ ಹಲ್ಲೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.