ವಯನಾಡ್ ಭೂಕುಸಿತ: ಪುನರ್ವಸತಿ ದೇಶದ ಜವಾಬ್ದಾರಿ, ಕೇರಳ ಸರ್ಕಾರಕ್ಕೆ ಕೇಂದ್ರ ಬೆಂಬಲ: ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದು ವಯನಾಡಿಗೆ ಭೇಟಿ ನೀಡಿದ್ದು ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿನ ಸಂತ್ರಸ್ತರಿಗೆ ಸಾಂತ್ವನ ನೀಡಿದ್ದಾರೆ. ಮೊದಲಿಗೆ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ ನಂತರ ರಸ್ತೆ ಮಾರ್ಗವಾಗಿ ಚೂರಲ್​​​ಮಲ ತಲುಪಿದ್ದಾರೆ. ಅಲ್ಲಿ ಪರಿಹಾರ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರನ್ನು ಪ್ರಧಾನಿ ಭೇಟಿ ಮಾಡಿದ್ದಾರೆ.

ವಯನಾಡ್ ಭೂಕುಸಿತ: ಪುನರ್ವಸತಿ ದೇಶದ ಜವಾಬ್ದಾರಿ, ಕೇರಳ ಸರ್ಕಾರಕ್ಕೆ ಕೇಂದ್ರ ಬೆಂಬಲ: ಮೋದಿ
ಮೋದಿ ನೇತೃತ್ವದಲ್ಲಿ ಪರಿಶೀಲನಾ ಸಭೆ
Follow us
ರಶ್ಮಿ ಕಲ್ಲಕಟ್ಟ
|

Updated on:Aug 10, 2024 | 5:15 PM

ಕಲ್ಪಟ್ಟಾ ಆಗಸ್ಟ್ 10: ಭೂಕುಸಿತ ಪೀಡಿತ ವಯನಾಡ್‌ಗೆ (Wayanad) ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದು, ಜಿಲ್ಲೆಯಲ್ಲಿನ ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳನ್ನು ಪರಿಶೀಲಿಸಿದ್ದಾರೆ. ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದು  ಪರಿಹಾರ ಕಾರ್ಯಗಳ ಕುರಿತು ಪ್ರಧಾನಿಗೆ ಮಾಹಿತಿ ನೀಡಲಾಯಿತು. ಪ್ರಧಾನಿ ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು.

ಪ್ರಧಾನಿ ಮೋದಿ ಅವರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದು ಭೂಕುಸಿತ ಮತ್ತು ನಡೆಯುತ್ತಿರುವ ಪರಿಹಾರ ಪ್ರಯತ್ನಗಳ ಬಗ್ಗೆ  ಅಧಿಕಾರಿಗಳು ಅವರಿಗೆ ವಿವರವಾಗಿ ತಿಳಿಸಲಿದ್ದಾರೆ. ಜುಲೈ 30 ರಂದು ಈ ಪ್ರದೇಶದಲ್ಲಿ ಭಾರೀ ಭೂಕುಸಿತಗಳು ಸಂಭವಿಸಿದ್ದು, ಕನಿಷ್ಠ 226 ಜನರು ಸಾವಿಗೀಡಾಗಿದ್ದಾರೆ.

ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಸುರೇಶ್ ಗೋಪಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ವಯನಾಡು ಭೂಕುಸಿತ ಪ್ರದೇಶಕ್ಕೆ ಭೇಟಿ ನೀಡಿ, ಸಂತ್ರಸ್ತರ ಕಷ್ಟಗಳ ಆಲಿಸಿದ ಮೋದಿ

ವಯನಾಡ್ ಕಲೆಕ್ಟರೇಟ್ ನಲ್ಲಿ ನಡೆದ ಪರಿಶೀಲನಾ ಸಭೆಯ ನಂತರ ಮಾತನಾಡಿದ ಪ್ರಧಾನಿ ಭಾರತ ಸರ್ಕಾರವು ಕೇರಳದೊಂದಿಗೆ ಇದೆ ಎಂದು ಹೇಳಿದರು. ಪುನರ್ವಸತಿ ದೇಶದ ಜವಾಬ್ದಾರಿಯಾಗಿದೆ. ನೊಂದವರ ಜೊತೆ ನಿಲ್ಲುವುದು ಮುಖ್ಯ. ದುರಂತದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ನಿಂತರು. ಕೇರಳದೊಂದಿಗೆ ಕೇಂದ್ರ ಸರ್ಕಾರ ಬೆಂಬಲವಾಗಿ ನಿಲ್ಲುತ್ತಿದೆ. ಕೇಂದ್ರಕ್ಕೆ ಎಲ್ಲ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಘಟನೆ ನಡೆದ ದಿನ ಬೆಳಗ್ಗೆ ಸಿಎಂ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿ, ನಾವು ನೆರವು ನೀಡುತ್ತೇವೆ. ಆದಷ್ಟು ಬೇಗ ಸ್ಥಳಕ್ಕೆ ತಲುಪಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಸೇನೆ, ಪೊಲೀಸರು, ವೈದ್ಯರು, ಎಲ್ಲರೂ ಸಂತ್ರಸ್ತರಿಗೆ ಸಾಧ್ಯವಾದಷ್ಟು ಬೇಗ ಸಹಾಯ ಮಾಡಲು ಪ್ರಯತ್ನಿಸಿದರು. ಮೃತರ ಕುಟುಂಬಗಳು ಒಬ್ಬಂಟಿಯಾಗಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಾವೆಲ್ಲರೂ ಅವರೊಂದಿಗೆ ನಿಂತಿದ್ದೇವೆ.ಕೇಂದ್ರ ಸರ್ಕಾರವು ಕೇರಳ ಸರ್ಕಾರದೊಂದಿಗೆ ನಿಂತಿದೆ. ಹಣದ ಕೊರತೆಯಿಂದ ಯಾವುದೇ ಕೆಲಸಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Sat, 10 August 24