West Bengal Election 2026 Result: ಬಂಗಾಳದ ಭವಾನಿಪುರದಲ್ಲಿ ಸುವೇಂದು ಅಧಿಕಾರಿ ಎದುರು ಸಿಎಂ ಮಮತಾ ಬ್ಯಾನರ್ಜಿ ಹೀನಾಯ ಸೋಲು
Assembly Election Results 2026: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಮತ ಎಣಿಕೆ ಅಂತಿಮ ಹಂತ ತಲುಪಿದೆ. ಭಾರೀ ಕುತೂಹಲ ಮೂಡಿಸಿದ್ದ ಭವಾನಿಪುರ ಕ್ಷೇತ್ರದಲ್ಲಿ 20ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಸಿಎಂ ಮಮತಾ ಬ್ಯಾನರ್ಜಿ ತಮ್ಮ ಭದ್ರಕೋಟೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿಯೂ ವಿಫಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ಸುವೇಂದು ಅಧಿಕಾರ ಮುಂದೆ ಮಮತಾ ಬ್ಯಾನರ್ಜಿ ಹೀನಾಯ ಸೋಲನ್ನು ಅನುಭವಿಸಿದ್ದಾರೆ. ಈಗಾಗಲೇ ಟಿಎಂಸಿ ಹಲವು ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿದ್ದರೂ ಸಿಎಂ ಮಮತಾ ಬ್ಯಾನರ್ಜಿಯಾದರೂ ಗೆಲ್ಲಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಲ್ಲಿಯೂ ಬಿಜೆಪಿ ಜಯ ಗಳಿಸಿದೆ.

ಕೊಲ್ಕತ್ತಾ, ಮೇ 4: ಪಶ್ಚಿಮ ಬಂಗಾಳದಲ್ಲಿ 4ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವ ಉತ್ಸಾಹ ಮತ್ತು ವಿಶ್ವಾಸದಲ್ಲಿದ್ದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ (Mamata Banerjee) ಅವರಿಗೆ ಭಾರೀ ಮುಖಭಂಗವಾಗಿದೆ. ಮಧ್ಯಾಹ್ನ 12 ಗಂಟೆಯ ವೇಳೆಗೆ ಬಿಜೆಪಿ ಬಹುಮತದ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆದರೂ ಧೃತಿಗೆಡದ ಮಮತಾ ಬ್ಯಾನರ್ಜಿ ಸೂರ್ಯಾಸ್ತವಾಗುವಷ್ಟರಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಡಿಯೋ ಮೂಲಕ ತಮ್ಮ ಬೆಂಬಲಿಗರಿಗೆ ಧೈರ್ಯ ತುಂಬಿದ್ದರು. ಸಂಜೆ ಟಿಎಂಸಿ ಭಾರೀ ಸೋಲನ್ನು ಅನುಭವಿಸುತ್ತಿದ್ದಂತೆ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂದು ಆರೋಪ ಮಾಡಿದ್ದರು. ಇದೀಗ ತಮ್ಮ ತವರು ಕ್ಷೇತ್ರವಾದ ಭವಾನಿಪುರದಲ್ಲಿ ಮಮತಾ ಬ್ಯಾನರ್ಜಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಹೀನಾಯವಾಗಿ ಸೋತಿದ್ದಾರೆ.
ಸುವೇಂದು ಅಧಿಕಾರಿ ಬಂಗಾಳದ ಭವಾನಿಪುರ ಸ್ಥಾನವನ್ನು ಗೆದ್ದಿದ್ದಾರೆ. ಅವರು 20ನೇ ಸುತ್ತಿನ ಎಣಿಕೆಯ ನಂತರ 73,463 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 58,349 ಮತಗಳನ್ನು ಪಡೆದರು. ಹೀಗಾಗಿ, ಸುವೇಂದು ಅಧಿಕಾರಿ ಮಮತಾ ಬ್ಯಾನರ್ಜಿ ಅವರನ್ನು 15,114 ಮತಗಳಿಂದ ಸೋಲಿಸಿದರು. ಮಮತಾ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಈ ಕ್ಷೇತ್ರದಲ್ಲಿ ಈ ಬಾರಿ ಮತದಾರರು ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಇದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಕಳೆದ ಚುನಾವಣೆಯಲ್ಲೂ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿ ಸೋತಿದ್ದರು ಎಂಬುದು ಗಮನಾರ್ಹ. ಆದರೆ, ಆ ಚುನಾವಣೆಯಲ್ಲಿ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದರು. ಈ ಬಾರಿ ಭವಾನಿಪುರ ಕ್ಷೇತ್ರದಿಂದ ಸೋತಿದ್ದಾರೆ.
ಇದನ್ನೂ ಓದಿ: West Bengal CM: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು; ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?
ಏಳನೇ ಸುತ್ತಿನ ಅಂತ್ಯದ ವೇಳೆಗೆ ಮಮತಾ ಬ್ಯಾನರ್ಜಿ 17,000ಕ್ಕೂ ಹೆಚ್ಚು ಮತಗಳ ಮುನ್ನಡೆಯನ್ನು ಹೊಂದಿದ್ದರು. ಆದರೆ ನಂತರದ ಸುತ್ತುಗಳಲ್ಲಿ ಅಂತರ ಕಡಿಮೆಯಾಯಿತು. 14 ನೇ ಸುತ್ತಿನ ವೇಳೆಗೆ 4,000ಕ್ಕಿಂತ ಕಡಿಮೆಯಾಯಿತು. ದಕ್ಷಿಣ ಕೋಲ್ಕತ್ತಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟ ಈ ಸ್ಥಾನವು ಇಬ್ಬರೂ ನಾಯಕರ ನಡುವಿನ ಪ್ರತಿಷ್ಠೆಯ ಸ್ಪರ್ಧೆಯಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




