
ನವದೆಹಲಿ, ಸೆಪ್ಟೆಂಬರ್ 16: ನಾಳೆ (ಸೆಪ್ಟೆಂಬರ್ 17) ನರೇಂದ್ರ ಮೋದಿಯವರ ಜನ್ಮದಿನ. ಇದೇ ಸಮಯದಲ್ಲಿ ಅವರು ರಾಜಕೀಯ ಜೀವನದಲ್ಲಿ ತಮ್ಮ 25 ವರ್ಷಗಳ ಸುದೀರ್ಘ ಪಯಣವನ್ನು ಕೂಡ ಪೂರ್ತಿಗೊಳಿಸುತ್ತಿದ್ದಾರೆ. ಹೀಗಾಗಿ, ಅವರ ರಾಜಕೀಯ ಬದುಕಿನ ಆರಂಭದ ದಿನಗಳನ್ನು ಕೊಂಚ ಮೆಲುಕು ಹಾಕೋಣ. 25 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ನರೇಂದ್ರ ಮೋದಿಯವರು ಮುಂದೊಂದು ದಿನ ಭಾರತದ ಅತ್ಯಂತ ಜನಪ್ರಿಯ ಪ್ರಧಾನಿಯಾಗಿ, ಜಗತ್ತಿನ ಪ್ರಭಾವಿ ನಾಯಕರಾಗಿ ಬೆಳೆಯುತ್ತಾರೆ ಎಂಬ ಕಲ್ಪನೆಯೂ ಸಾಕಷ್ಟು ಜನರಿಗೆ ಇರಲಿಲ್ಲ. ಸ್ವತಃ ನರೇಂದ್ರ ಮೋದಿಯವರೇ ಆ ಬಗ್ಗೆ ಯೋಚನೆಯನ್ನೂ ಮಾಡಿರಲಿಲ್ಲ. ಅವರ ಗುರಿ ಇದ್ದುದು ಗುಜರಾತ್ ರಾಜ್ಯವನ್ನು ಹೇಗೆ ಅಭಿವೃದ್ಧಿಪಡಿಸುವುದು ಎಂಬುದಷ್ಟೇ ಆಗಿತ್ತು.
2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅದಕ್ಕೂ ಮುನ್ನ ಅವರು ಚುನಾವಣಾ ರಾಜಕೀಯದಲ್ಲಿ ಸ್ಪರ್ಧಿಸದೆ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಅಂದಿನ ಗುಜರಾತ್ ಮುಖ್ಯಮಂತ್ರಿ ಕೆಶುಭಾಯಿ ಪಟೇಲ್ ಅವರನ್ನು ಬದಲಾಯಿಸಿ ನರೇಂದ್ರ ಮೋದಿಯವರನ್ನು ಸಿಎಂ ಮಾಡಲು ಹಲವು ಪ್ರಮುಖ ಆಡಳಿತಾತ್ಮಕ ಮತ್ತು ರಾಜಕೀಯ ಕಾರಣಗಳಿದ್ದವು.
ಚುನಾವಣೆಯಲ್ಲೇ ಸ್ಪರ್ಧಿಸದ ನರೇಂದ್ರ ಮೋದಿಗೆ ಸಿಎಂ ಪಟ್ಟ ಒಲಿದಿದ್ದು ಹೇಗೆ?:
2001ರ ಜನವರಿ 26ರಂದು ಗುಜರಾತ್‌ನ ಕಚ್ ಮತ್ತು ಭುಜ್ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಭೂಕಂಪವು ಸುಮಾರು 20,000ಕ್ಕೂ ಹೆಚ್ಚು ಜನರನ್ನು ಬಲಿಪಡೆದಿತ್ತು. ಅಂದಿನ ಮುಖ್ಯಮಂತ್ರಿ ಕೆಶುಭಾಯಿ ಪಟೇಲ್ ನೇತೃತ್ವದ ಸರ್ಕಾರವು ಸಂತ್ರಸ್ತರಿಗೆ ತಕ್ಷಣದ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸಾರ್ವಜನಿಕರಲ್ಲಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಯಿತು. ಇದರ ಜೊತೆಗೆ, ಕೆಶುಭಾಯಿ ಪಟೇಲ್ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿತ್ತು, ಗುಜರಾತ್ ಬಿಜೆಪಿಯಲ್ಲಿ ಆಂತರಿಕ ಬಣ ರಾಜಕೀಯ ತೀವ್ರಗೊಂಡಿತ್ತು. ಆಡಳಿತ ಯಂತ್ರದ ಮೇಲಿನ ಹಿಡಿತ ಸಡಿಲಗೊಂಡು, ಸರ್ಕಾರದ ವಿರುದ್ಧ ಭ್ರಷ್ಟಾಚಾರ ಹಾಗೂ ದುರಾಡಳಿತದ ಆರೋಪಗಳು ಹೆಚ್ಚಾಗಿದ್ದವು. ಇದೆಲ್ಲದಕ್ಕೂ ಕಡಿವಾಣ ಹಾಕಲು ಬಿಜೆಪಿ ಹೈಕಮಾಂಡ್ ಪರಿಹಾರಕ್ಕಾಗಿ ಹುಡುಕಾಟ ನಡೆಸಿತ್ತು.
ಗುಜರಾತ್‌ನಲ್ಲಿ ನಡೆದ ಭೂಕಂಪದ ನಂತರ ನಡೆದ ಸಬರಮತಿ ವಿಧಾನಸಭಾ ಕ್ಷೇತ್ರ ಹಾಗೂ ಉಪಚುನಾವಣೆಗಳಲ್ಲಿ ಬಿಜೆಪಿ ಸೋಲನ್ನು ಅನುಭವಿಸಿತು. 2002ರಲ್ಲಿ ಬರಬೇಕಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುವ ಭೀತಿ ಎದುರಾಯಿತು. ಪಕ್ಷಕ್ಕೆ ಹೊಸ ಚೈತನ್ಯ ನೀಡಲು ನಾಯಕತ್ವ ಬದಲಾವಣೆ ಮಾಡುವುದು ಬಿಜೆಪಿ ನಾಯಕರಿಗೆ ಅನಿವಾರ್ಯವಾಯಿತು. ಆಗ ಕಾಣಿಸಿದ್ದೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ.
ನರೇಂದ್ರ ಮೋದಿಯವರ ಸಂಘಟನಾ ಕೌಶಲ್ಯ:
ಬಿಜೆಪಿ ಹೈಕಮಾಂಡ್ ನರೇಂದ್ರ ಮೋದಿಯವರನ್ನೇ ಆಯ್ಕೆ ಮಾಡಲು ಕಾರಣಗಳೂ ಇತ್ತು. ನರೇಂದ್ರ ಮೋದಿ ಅವರು 1980 ಮತ್ತು 1990ರ ದಶಕದಲ್ಲಿ ಗುಜರಾತ್‌ನಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಲವಾದ ಸಂಘಟನಾತ್ಮಕ ತಡಿಪಾಯ ಹಾಕಿದ್ದರು. ಭೂಕಂಪ ಸಂಭವಿಸಿದ ತಕ್ಷಣ ದೆಹಲಿಯಿಂದ ಕಚ್‌ಗೆ ಆಗಮಿಸಿದ ಮೋದಿ, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಂಘಟಿಸಿ ಸ್ವಯಂಪ್ರೇರಿತ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಈ ಬದ್ಧತೆ ಮತ್ತು ಕೆಲಸದ ಶೈಲಿ ಬಿಜೆಪಿ ಹೈಕಮಾಂಡ್ನ ಗಮನ ಸೆಳೆಯಿತು.
ಹೀಗಾಗಿ, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಗೃಹ ಸಚಿವ ಎಲ್.ಕೆ. ಅಡ್ವಾಣಿ ನೇತೃತ್ವದ ಬಿಜೆಪಿ ಹೈಕಮಾಂಡ್, ಗುಜರಾತ್ ರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಮರುಜೀವ ನೀಡಲು ಮತ್ತು ಬಲವಾದ ನಾಯಕತ್ವ ತರಲು ಕೆಶುಭಾಯಿ ಪಟೇಲ್ ಅವರನ್ನು ರಾಜೀನಾಮೆ ನೀಡುವಂತೆ ಸೂಚಿಸಿತು. ಬಳಿಕ, ಸಂಘಟನೆಯಲ್ಲಿ ಅಪಾರ ಅನುಭವ ಹೊಂದಿದ್ದ, ಶಿಸ್ತಿನ ನಾಯಕ ನರೇಂದ್ರ ಮೋದಿ ಅವರನ್ನು ಗುಜರಾತ್‌ನ 14ನೇ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ಅಧಿಕಾರ ವಹಿಸಿಕೊಂಡ ನಂತರ ಮೋದಿ ತಕ್ಷಣವೇ ‘ಕಚ್ ಮರುನಿರ್ಮಾಣ’ ಯೋಜನೆಯನ್ನು ಕೈಗೆತ್ತಿಕೊಂಡು, ನಂತರ ರಾಜಕೋಟ್-2 ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾದರು.
ಗುಜರಾತ್ ಮಾದರಿಯ ಸೃಷ್ಟಿ:
ನರೇಂದ್ರ ಮೋದಿಯವರು 2001ರಿಂದ 2014ರವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಗುಜರಾತ್ ಅನ್ನು ದೇಶದ ಪ್ರಮುಖ ಕೈಗಾರಿಕಾ ಮತ್ತು ಆರ್ಥಿಕ ಕೇಂದ್ರವಾಗಿ ಅಭಿವೃದ್ಧಿಪಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಇದನ್ನು “ಗುಜರಾತ್ ಮಾದರಿ” (ಗುಜರಾತ್ ಮಾಡೆಲ್) ಅಭಿವೃದ್ಧಿ ಎಂದೇ ಕರೆಯಲಾಗುತ್ತದೆ. ವಿದೇಶಿ ಮತ್ತು ದೇಶೀಯ ಹೂಡಿಕೆಗಳನ್ನು ಆಕರ್ಷಿಸಲು 2003ರಲ್ಲಿ ‘ವೈಬ್ರೆಂಟ್ ಗುಜರಾತ್’ ಜಾಗತಿಕ ಹೂಡಿಕೆದಾರರ ಶೃಂಗಸಭೆಯನ್ನು ಮೋದಿ ಪ್ರಾರಂಭಿಸಿದರು. ಇದು ರಾಜ್ಯಕ್ಕೆ ಶತಕೋಟಿ ಡಾಲರ್ ಹೂಡಿಕೆಯನ್ನು ತಂದಿತು.
ಆಟೋಮೊಬೈಲ್ ಹಬ್ ಆಗಿ ಬದಲಾಯ್ತು ಗುಜರಾತ್:
ಟಾಟಾ ನ್ಯಾನೋ ಯೋಜನೆಯನ್ನು ಸಾನಂದ್‌ಗೆ ತರುವ ಮೂಲಕ ಗುಜರಾತ್ ಅನ್ನು ಮೋದಿ ಭಾರತದ ಪ್ರಮುಖ ಆಟೋಮೊಬೈಲ್ ಉತ್ಪಾದನಾ ಕೇಂದ್ರವಾಗಿ ಪರಿವರ್ತಿಸಿದರು. ನಂತರ ಫೋರ್ಡ್, ಸುಜುಕಿ ಕಂಪನಿಗಳೂ ಇಲ್ಲಿ ಘಟಕಗಳನ್ನು ಸ್ಥಾಪಿಸಿದವು.
ಕೃಷಿ ಮತ್ತು ನೀರಾವರಿ ಕ್ರಾಂತಿ:
ಸರ್ದಾರ್ ಸರೋವರ ನರ್ಮದಾ ಯೋಜನೆ ಬಹಳ ಮುಖ್ಯವಾದುದು. ನರ್ಮದಾ ಅಣೆಕಟ್ಟು ಯೋಜನೆಯನ್ನು ವೇಗಗೊಳಿಸಿ, ಕಾಲುವೆಗಳ ಜಾಲದ ಮೂಲಕ ಸೌರಾಷ್ಟ್ರ ಮತ್ತು ಕಚ್‌ನ ಒಣ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ನೀರಾವರಿ ಸೌಲಭ್ಯ ಒದಗಿಸಿದರು. ಗ್ರಾಮೀಣ ಪ್ರದೇಶಗಳಿಗೆ ಮತ್ತು ಕೃಷಿಗೆ 24 ಗಂಟೆಗಳ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಒದಗಿಸಿದರು. ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನ, ಮಣ್ಣಿನ ಆರೋಗ್ಯ ಕಾರ್ಡ್ ಮತ್ತು ಹನಿ ನೀರಾವರಿ ಪದ್ಧತಿಗಳನ್ನು ಪರಿಚಯಿಸಿ, ರಾಜ್ಯದಲ್ಲಿ ಕೃಷಿ ಬೆಳವಣಿಗೆ ದರವನ್ನು ಎರಡಂಕಿಗೆ ಏರಿಸಿದರು.
ಮೂಲಸೌಕರ್ಯ ಮತ್ತು ಇಂಧನ ವಲಯದಲ್ಲಿ ಕ್ರಾಂತಿ:
ಏಷ್ಯಾದ ಅತಿದೊಡ್ಡ ಏಕೈಕ ಸೌರ ಉದ್ಯಾನವನಗಳಲ್ಲಿ ಒಂದಾದ ‘ಚರಂಕಾ ಸೋಲಾರ್ ಪಾರ್ಕ್’ ಸ್ಥಾಪಿಸಿ, ಹಸಿರು ಇಂಧನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ರಾಜ್ಯದ ಬಂದರುಗಳನ್ನು ಆಧುನೀಕರಿಸಿ, ಅತ್ಯುತ್ತಮ ರಸ್ತೆ ಸಂಪರ್ಕ ಜಾಲವನ್ನು ನಿರ್ಮಿಸಿದರು. ಸರ್ಕಾರದ ಸೇವೆಗಳಲ್ಲಿ ಪಾರದರ್ಶಕತೆ ತರಲು ‘ಸ್ವಾಗತ್’ ಎಂಬ ದೂರು ಪರಿಹಾರ ವ್ಯವಸ್ಥೆಯನ್ನು ಜಾರಿಗೆ ತಂದರು. ಇದಕ್ಕೆ ವಿಶ್ವಸಂಸ್ಥೆಯ ಪ್ರಶಸ್ತಿ ಕೂಡ ಲಭಿಸಿತು.
ನಗರಾಭಿವೃದ್ಧಿ ಮತ್ತು ಪ್ರವಾಸೋದ್ಯಮ:
ಅಹಮದಾಬಾದ್‌ನ ಕಲುಷಿತ ಸಬರಮತಿ ನದಿಯನ್ನು ಜಾಗತಿಕ ಮಟ್ಟದ ಸುಂದರ ಪ್ರವಾಸಿ ಮತ್ತು ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸಿದರು. ಬಾಲಿವುಡ್ನ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರನ್ನೊಳಗೊಂಡ ಪ್ರಚಾರ ಅಭಿಯಾನದ ಮೂಲಕ ‘ರನ್ ಆಫ್ ಕಚ್’ ಮತ್ತು ಗಿರ್ ಅರಣ್ಯದ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದರು. ನರೇಂದ್ರ ಮೋದಿಯವರ ಆಡಳಿತ ವೈಖರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯು ಗುಜರಾತ್ ಅನ್ನು ಆರ್ಥಿಕವಾಗಿ ಪ್ರಬಲ ರಾಜ್ಯವನ್ನಾಗಿ ಮಾಡಿತು. ಇದು ನಂತರ ಅವರು 2014ರಲ್ಲಿ ಭಾರತದ ಪ್ರಧಾನ ಮಂತ್ರಿಯಾಗಲು ಮುಖ್ಯ ಆಧಾರವಾಯಿತು.
ಗೋಧ್ರಾ ದುರಂತ ಮತ್ತು ಕೋಮು ಗಲಭೆಗಳು:
ನರೇಂದ್ರ ಮೋದಿಯವರ ರಾಜಕೀಯ ಬದುಕು ಆರಂಭವಾದ ಕೂಡಲೇ ಅವರ ಮುಂದೆ ದೊಡ್ಡದೊಂದು ಸವಾಲು ಬಂದು ನಿಂತಿತ್ತು. ಅದು ಅವರ ರಾಜಕೀಯ ವೃತ್ತಿ ಬದುಕಿನಲ್ಲಿ ಕಪ್ಪುಚುಕ್ಕೆಯಾಗಿಬಿಟ್ಟಿತು. ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳುಗಳಲ್ಲಿ (ಫೆಬ್ರವರಿ 2002) ಗೋಧ್ರಾದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ‘ರಾಮಸೇವಕರು’ (ಕರಸೇವಕರು) ಪ್ರಯಾಣಿಸುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲು ಗುಜರಾತ್‌ನ ಗೋಧ್ರಾ ರೈಲ್ವೆ ನಿಲ್ದಾಣಕ್ಕೆ ತಲುಪಿತು. ಅಲ್ಲಿ ನಡೆದ ಮಾತಿನ ಚಕಮಕಿಯ ನಂತರ, ಗೋಧ್ರಾ ನಿಲ್ದಾಣದ ಬಳಿ ಸುಮಾರು 1,000ಕ್ಕೂ ಹೆಚ್ಚು ಜನರಿದ್ದ ಸಶಸ್ತ್ರ ಗುಂಪು ರೈಲಿನ ಬೋಗಿಗೆ ಬೆಂಕಿ ಹಚ್ಚಿತು. ಈ ಭೀಕರ ದುರಂತದಲ್ಲಿ 27 ಮಹಿಳೆಯರು ಮತ್ತು 10 ಮಕ್ಕಳು ಸೇರಿದಂತೆ ಒಟ್ಟು 59 ಜನರು ಸಜೀವ ದಹನವಾದರು.
ಗೋಧ್ರಾ ರೈಲು ದುರಂತದ ಬೆನ್ನಲ್ಲೇ, ಗುಜರಾತ್‌ನ ವಿವಿಧ ಭಾಗಗಳಲ್ಲಿ ತೀವ್ರ ಕೋಮು ಗಲಭೆಗಳು ಮತ್ತು ಹಿಂಸಾಚಾರ ಭುಗಿಲೆದ್ದವು. ಅಹಮದಾಬಾದ್, ವಡೋದರಾ, ನರೋಡಾ ಪಟಿಯಾ ಮತ್ತು ಗುಲ್ಬರ್ಗ್ ಸೊಸೈಟಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬೃಹತ್ ಮಟ್ಟದ ಗಲಭೆ, ಲೂಟಿ ಮತ್ತು ಕೊಲೆಗಳು ನಡೆದವು. ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಗಲಭೆಗಳಲ್ಲಿ 790ಕ್ಕೂ ಹೆಚ್ಚು ಮುಸ್ಲಿಮರು ಮತ್ತು 254 ಹಿಂದೂಗಳು ಪ್ರಾಣ ಕಳೆದುಕೊಂಡರು ಹಾಗೂ ಸಾವಿರಾರು ಜನರು ನಿರಾಶ್ರಿತರಾದರು
ಬಳಿಕ, ಈ ಘಟನೆಯ ತನಿಖೆಗೆ ಸರ್ಕಾರ ನಾನಾವತಿ ಆಯೋಗವನ್ನು ನೇಮಿಸಿತು. ಈ ಆಯೋಗವು ಗೋಧ್ರಾ ರೈಲು ದುರಂತವು ಆಕಸ್ಮಿಕವಲ್ಲ, ಬದಲಾಗಿ ಮುಂಚಿತವಾಗಿಯೇ ಯೋಜಿಸಲಾದ ‘ಪೂರ್ವನಿಯೋಜಿತ ಸಿಕ್ರೇಟ್ ಪಿತೂರಿ’ ಎಂದು ತೀರ್ಪು ನೀಡಿತು. 2011ರ ಫೆಬ್ರವರಿಯಲ್ಲಿ ವಿಶೇಷ ತನಿಖಾ ನ್ಯಾಯಾಲಯವು ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು.
ಗಲಭೆಗಳನ್ನು ನಿಯಂತ್ರಿಸುವಲ್ಲಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಮತ್ತು ಗಲಭೆಗೆ ಕುಮ್ಮಕ್ಕು ನೀಡಿದೆ ಎಂದು ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಆರೋಪಿಸಿದ್ದವು. ಈ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿತು. ಸುದೀರ್ಘ ತನಿಖೆಯ ನಂತರ, ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳಿಲ್ಲ ಎಂದು ಎಸ್‌ಐಟಿ ವರದಿ ನೀಡಿತು. ಈ ವರದಿಯನ್ನು ಆಧರಿಸಿ 2022ರಲ್ಲಿ ಸುಪ್ರೀಂ ಕೋರ್ಟ್ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ‘ಕ್ಲೀನ್ ಚಿಟ್’ ನೀಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:34 pm, Wed, 16 September 26