ಸುದರ್ಶನ್ ರೆಡ್ಡಿ ವಿರುದ್ಧ ಪ್ರತಿಭಟಿಸಿದ್ದ ಕಾಂಗ್ರೆಸ್ ಅವರನ್ನೇ ಉಪರಾಷ್ಟ್ರಪತಿ ಅಭ್ಯರ್ಥಿ ಎನ್ನುತ್ತಿದೆ; ಲಹರ್ ಸಿಂಗ್ ಲೇವಡಿ
ಎನ್ಡಿಎ ತಮಿಳುನಾಡಿನ ಸಿ.ಪಿ ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಇಂಡಿಯ ಬ್ಲಾಕ್ ಆಂಧ್ರಪ್ರದೇಶದ ಬಿ. ಸುದರ್ಶನ್ ರೆಡ್ಡಿ ಅವರನ್ನು ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಆದರೆ, ಈ ಹಿಂದೆ ಇದೇ ಸುದರ್ಶನ್ ರೆಡ್ಡಿಯನ್ನು ಕಾಂಗ್ರೆಸ್ ಬಿಜೆಪಿಯ ಯೆಸ್ ಮ್ಯಾನ್ (ಬಿಜೆಪಿ ಹೇಳಿದ್ದೆಲ್ಲವನ್ನೂ ಕೇಳುವವರು) ಎಂದು ಟೀಕಿಸಿದ್ದರು ಎಂದು ಬಿಜೆಪಿ ನಾಯಕ ಲಹರ್ ಸಿಂಗ್ ಲೇವಡಿ ಮಾಡಿದ್ದಾರೆ.

ನವದೆಹಲಿ, ಆಗಸ್ಟ್ 21: ಕಾಂಗ್ರೆಸ್ ನೇತೃತ್ವದ ಇಂಡಿಯ ಬ್ಲಾಕ್ ಉಪರಾಷ್ಟ್ರಪತಿ ಚುನಾವಣೆಗೆ (Vice President Election) ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ್ ರೆಡ್ಡಿ (Sudershan Reddy) ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ನಾಮನಿರ್ದೇಶನ ಮಾಡಿದೆ. ಆದರೆ, ಇದೇ ಸುದರ್ಶನ್ ರೆಡ್ಡಿ ಅವರನ್ನು ಕಾಂಗ್ರೆಸ್ ವಿರೋಧಿಸಿತ್ತು. ಮಾರ್ಚ್ 16, 2013ರಂದು ಮನೋಹರ್ ಪರಿಕ್ಕರ್ ಗೋವಾದ ಮುಖ್ಯಮಂತ್ರಿಯಾಗಿದ್ದಾಗ ಸುದರ್ಶನ್ ರೆಡ್ಡಿ ಅವರನ್ನು ಗೋವಾದ ಮೊದಲ ಲೋಕಾಯುಕ್ತರನ್ನಾಗಿ ನೇಮಿಸಲಾಯಿತು. ಆಗ ಕಾಂಗ್ರೆಸ್ ಅವರ ನೇಮಕವನ್ನು ವಿರೋಧಿಸಿತ್ತು ಮತ್ತು ಪ್ರಮಾಣವಚನ ಸಮಾರಂಭದಲ್ಲಿಯೂ ಭಾಗವಹಿಸಿರಲಿಲ್ಲ.
ಇದೇ ವಿಷಯವನ್ನು ಇಟ್ಟುಕೊಂಡು ಬಿಜೆಪಿ ನಾಯಕ ಲಹರ್ ಸಿಂಗ್ ಲೇವಡಿ ಮಾಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, “2013ರಲ್ಲಿ ಕಾಂಗ್ರೆಸ್ ನಾಯಕರು ಜೆ.ಎಸ್. ಸುದರ್ಶನ್ ರೆಡ್ಡಿ ಅವರನ್ನು ಮನೋಹರ್ ಪರಿಕ್ಕರ್ ಅವರ “ಯೆಸ್ ಮ್ಯಾನ್” ಎಂದು ಕರೆದಿದ್ದರು. ಅವರು ಗೋವಾದಲ್ಲಿ ಲೋಕಾಯುಕ್ತರಾಗಿ ನೇಮಕಗೊಂಡಾಗ ಕಾಂಗ್ರೆಸ್ ವಿರೋಧಿಸಿತ್ತು. ಆಗ ಕಾಂಗ್ರೆಸ್ ಅವರ ಸ್ವಾತಂತ್ರ್ಯ ಮತ್ತು ಸಮಗ್ರತೆಯನ್ನು ಅನುಮಾನಿಸಿತ್ತು. ಸುದರ್ಶನ್ ರೆಡ್ಡಿ ಮನೋಹರ್ ಪರಿಕ್ಕರ್ ಅವರ ಪರವಾಗಿದ್ದಾರೆ ಎಂದು ಅವರನ್ನು ಗೋವಾದ ಲೋಕಾಯುಕ್ತರಾಗಿ ನೇಮಿಸಲಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿತ್ತು. ಈಗ ಅದೇ ಕಾಂಗ್ರೆಸ್ ಅವರನ್ನು ಹೊಗಳುತ್ತಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Video: ಪ್ರಧಾನಿ ಮೋದಿ, ಎನ್ಡಿಎ ನಾಯಕರ ಸಮ್ಮುಖದಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಸಿಪಿ ರಾಧಾಕೃಷ್ಣನ್ ನಾಮಪತ್ರ ಸಲ್ಲಿಕೆ
ದುಃಖಕರವೆಂದರೆ, ಕಳೆದ ದಶಕಗಳಲ್ಲಿ ನ್ಯಾಯಾಧೀಶರು ಮತ್ತು ಸಾಂವಿಧಾನಿಕ ಅಧಿಕಾರಿಗಳ ಮೇಲೆ ಪ್ರತಿಕೂಲ ಹಣೆಪಟ್ಟಿ ಕಟ್ಟುವುದು ಮತ್ತು ಒತ್ತಡ ಹೇರುವುದು ಕಾಂಗ್ರೆಸ್ ಪಕ್ಷದ ಸ್ವಭಾವವಾಗಿದೆ. 2013ರಲ್ಲಿ ಸುದರ್ಶನ್ ರೆಡ್ಡಿ ಅವರನ್ನು ಬಿಜೆಪಿ ಪರವಾಗಿರುವ ವ್ಯಕ್ತಿ ಎಂದು ಟೀಕಿಸಿದ್ದ ಇದೇ ಕಾಂಗ್ರೆಸ್ ಈಗ ಅವರ ನಿವೃತ್ತಿಯ ಬಳಿಕ ಅವರನ್ನು ಅವರ ಸಿದ್ಧಾಂತಗಳಿಗಾಗಿ ಹೊಗಳುತ್ತಾ ಉಪರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ ಎಂದು ಲಹರ್ ಸಿಂಗ್ ವ್ಯಂಗ್ಯವಾಡಿದ್ದಾರೆ.
I read this news item in the morning, today, and laughed. In 2013, Congress leaders called Js. Sudershan Reddy as Shri. Manohar Parrikar Ji’s “yes man”. This was when he was appointed Lokayukta in Goa. The Congress had doubted his independence and integrity then. Did they mean… pic.twitter.com/IeR5FvuwEN
— Lahar Singh Siroya (@LaharSingh_MP) August 21, 2025
ಸೆಪ್ಟೆಂಬರ್ 9ರಂದು ದೇಶದಲ್ಲಿ ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಸಿಪಿ ರಾಧಾಕೃಷ್ಣನ್ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಸುದರ್ಶನ್ ರೆಡ್ಡಿ ವಿಪಕ್ಷಗಳ ಅಭ್ಯರ್ಥಿಯಾಗಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




