ಪ್ರಧಾನಿ ಮೋದಿಯವರಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಯಾರು? ಆಕೆ ವಿರುದ್ಧ ಟ್ರೋಲ್ ದಾಳಿ ನಡೆದಿದ್ದೇಕೆ?

ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಅವಳನ್ನು ಪಾಕಿಸ್ತಾನಿ ಪೋಷಕರ ಮಗಳು ಎಂದು ಲೇಬಲ್ ಮಾಡಿದ್ದಾರೆ. ಇನ್ನು ಕೆಲವರು ಆಕೆ "ಇಸ್ಲಾಮಿಸ್ಟ್‌ಗಳ ಹಕ್ಕುಗಳನ್ನು ಪ್ರತಿಧ್ವನಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿಯವರಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಯಾರು? ಆಕೆ ವಿರುದ್ಧ ಟ್ರೋಲ್ ದಾಳಿ ನಡೆದಿದ್ದೇಕೆ?
ಸಬ್ರಿನಾ ಸಿದ್ದಿಕಿ Image Credit source: Instagram
Follow us
ರಶ್ಮಿ ಕಲ್ಲಕಟ್ಟ
|

Updated on:Jun 28, 2023 | 2:26 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕ ಪ್ರವಾಸದಲ್ಲಿದ್ದಾಗ ಜೂನ್ 22 ರಂದು ಶ್ವೇತಭವನದಲ್ಲಿ (White house) ಅಧ್ಯಕ್ಷ ಜೋ ಬೈಡನ್ (Joe Biden) ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಅಮೆರಿಕ ಮೂಲದ ವರದಿಗಾರ್ತಿ ಸಬ್ರಿನಾ ಸಿದ್ದಿಕಿ (Sabrina Siddiqui)ಅವರು ಪ್ರಧಾನಿ ಮೋದಿ ಅವರಲ್ಲಿ ಭಾರತದಲ್ಲಿನ ‘ಅಲ್ಪಸಂಖ್ಯಾತರು’ ಮತ್ತು ಅವರ ಸುಧಾರಣೆಗಾಗಿ ಅವರ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಪ್ರಶ್ನೆ ಕೇಳಿದ್ದಾರೆ. ಈ ಸುದ್ದಿಗೋಷ್ಠಿ ಮುಕ್ತಾಯವಾಗುತ್ತಿದ್ದಂತೆ ಅಮೆರಿಕದಲ್ಲಿ ಮೋದಿಯವರಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತೆಯ ವಿರುದ್ಧ  ಕೆಲವು ನೆಟ್ಟಿಗರು ಹರಿಹಾಯ್ದಿದ್ದಾರೆ.ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನಿಂದನೆ, ಟ್ರೋಲ್ ಮಾಡಿ ಆಕೆಗೆ ಆನ್​​ಲೈನ್ ಕಿರುಕುಳ ನೀಡಿದ್ದಾರೆ.2014 ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ  ನಂತರ ಮೋದಿ ಭಾಗವಹಿಸಿದ ಮೊದಲ ಸುದ್ದಿಗೋಷ್ಠಿ ಇದಾಗಿದೆ.

ಸಬ್ರಿನಾ ಸಿದ್ದಿಕಿ ವಿರುದ್ಧ ಆನ್ ಲೈನ್​​ನಲ್ಲಿ ನಿಂದನೆ; ಕಾರಣವೇನು?

ಪತ್ರಿಕಾಗೋಷ್ಠಿಯಲ್ಲಿ, ಸಬ್ರಿನಾ ಸಿದ್ದಿಕಿ ಅವರು ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಅದರ ಪರಿಣಾಮವಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿದೆ ಎಂದು ಸೂಚಿಸುವ ಪ್ರಶ್ನೆ ಕೇಳಿದ್ದಾರೆ. ಭಿನ್ನಾಭಿಪ್ರಾಯ ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ, ಧಾರ್ಮಿಕ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವುದಕ್ಕಾಗಿ ಪ್ರಧಾನಿ ಮೋದಿಯವರ ಸರ್ಕಾರವನ್ನು ಟೀಕಿಸಿದ ಮಾನವ ಹಕ್ಕುಗಳ ಸಂಘಟನೆಗಳು ವ್ಯಕ್ತಪಡಿಸಿದ ಆತಂಕಗಳನ್ನು ಸಬ್ರಿನಾ ಉಲ್ಲೇಖಿಸಿದ್ದಾರೆ. ಭಾರತವು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆಪಡುತ್ತಿದೆ, ಆದರೆ ನಿಮ್ಮ ಸರ್ಕಾರವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವನ್ನು ಹೊಂದಿದೆ. ಅದರ ಟೀಕಾಕಾರರನ್ನು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಹೇಳುವ ಅನೇಕ ಮಾನವ ಹಕ್ಕುಗಳ ಗುಂಪುಗಳಿವೆ. ನೀವು ಯಾವ ಕ್ರಮಗಳು ಕೈಗೊಂಡಿದ್ದೀರಿ. ನಿಮ್ಮ ದೇಶದಲ್ಲಿ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ಸುಧಾರಿಸಲು ಮತ್ತು ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಸಿದ್ಧವಾಗಿದೆಯೇ? ಎಂದು ಸಿದ್ದಿಕಿ ಕೇಳಿದ್ದರು.

ಮೋದಿಯವರ ಪ್ರತಿಕ್ರಿಯೆ ಹೇಗಿತ್ತು?

ತಮ್ಮ ಆಡಳಿತದ ಮೂಲಭೂತ ಮೂಲಾಧಾರವು “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ತತ್ವವಾಗಿದೆ. ಇದು ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಎಲ್ಲಾ ವ್ಯಕ್ತಿಗಳಲ್ಲಿ ನಂಬಿಕೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಮೂಹಿಕ ಪ್ರಯತ್ನವನ್ನು ಸೂಚಿಸುತ್ತದೆ. ನಮ್ಮದು ಪ್ರಜಾಪ್ರಭುತ್ವ ದೇಶ. ಭಾರತ ಮತ್ತು ಅಮೆರಿಕ ತಮ್ಮ ಡಿಎನ್‌ಎಯಲ್ಲಿ ಪ್ರಜಾಪ್ರಭುತ್ವವನ್ನು ಹೊಂದಿವೆ. ಪ್ರಜಾಪ್ರಭುತ್ವವು ನಮ್ಮ ಆತ್ಮದಲ್ಲಿದೆ. ನಾವು ಅದನ್ನು ಬದುಕುತ್ತೇವೆ. ಅದನ್ನು ನಮ್ಮ ಸಂವಿಧಾನದಲ್ಲಿ ಬರೆಯಲಾಗಿದೆ. ಆದ್ದರಿಂದ ಜಾತಿ, ಧರ್ಮ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯದ ಪ್ರಶ್ನೆಯೇ ಇಲ್ಲ. ಅದಕ್ಕಾಗಿಯೇ ಭಾರತವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ತತ್ವವನ್ನು ನಂಬುತ್ತದೆ ಮತ್ತು ಅದರೊಂದಿಗೆ ಮುಂದುವರಿಯುತ್ತದೆ. ಇವುಗಳು ನಮ್ಮ ಅಡಿಪಾಯ ತತ್ವಗಳಾಗಿವೆ. ಇದು ನಾವು ಹೇಗೆ ಕಾರ್ಯನಿರ್ವಹಿಸುತ್ತೇವೆ ಮತ್ತು ನಾವು ಭಾರತದಲ್ಲಿ ನಮ್ಮ ಜೀವನವನ್ನು ಹೇಗೆ ನಡೆಸುತ್ತೇವೆ ಎಂಬುದರ ಆಧಾರವಾಗಿದೆ. ಸರ್ಕಾರವು ಒದಗಿಸುವ ಪ್ರಯೋಜನಗಳು ಎಲ್ಲರಿಗೂ ಲಭ್ಯವಿರುತ್ತವೆ, ಆ ಪ್ರಯೋಜನಗಳಿಗೆ ಅರ್ಹರಾಗಿರುವ ಎಲ್ಲರಿಗೂ ಲಭ್ಯವಿರುತ್ತದೆ ಎಂದು ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

ಅಂದಿನಿಂದ, ಸಬ್ರಿನಾ ಸಿದ್ದಿಕಿ ಅವರು ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಕ್ಕಾಗಿ ಆನ್‌ಲೈನ್ ಟ್ರೋಲಿಂಗ್, ಕಿರುಕುಳ ಮತ್ತು ಟ್ವಿಟರ್ ನಲ್ಲಿ ನಿಂದನೆಗೆ ಗುರಿಯಾಗಿದ್ದಾರೆ. ಸಿದ್ದಿಕಿ ಅವರ ಪಾಕಿಸ್ತಾನದ ಸಂಪರ್ಕ ಮತ್ತು ಆಕೆ ಮುಸ್ಲಿಂ ಎಂಬುದನ್ನು ಹಲವರು ಎತ್ತಿತೋರಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಅವಳನ್ನು ಪಾಕಿಸ್ತಾನಿ ಪೋಷಕರ ಮಗಳು ಎಂದು ಲೇಬಲ್ ಮಾಡಿದ್ದಾರೆ. ಇನ್ನು ಕೆಲವರು ಆಕೆ “ಇಸ್ಲಾಮಿಸ್ಟ್‌ಗಳ ಹಕ್ಕುಗಳನ್ನು ಪ್ರತಿಧ್ವನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಸಿದ್ದಿಕಿ ಮುಸ್ಲಿಂ ಎಂಬ ಕಾರಣದಿಂದಾಗಿ ಆಕೆ ಆನ್ ಲೈನ್ ಕಿರುಕುಳಕ್ಕೊಳಗಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ವೇತಭವನ, ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರ ಸರ್ಕಾರದ ಮಾನವ ಹಕ್ಕುಗಳ ದಾಖಲೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕಾಗಿ ಅಮೆರಿಕದ ಪತ್ರಕರ್ತೆಗೆ ಕಿರುಕುಳ ನೀಡುತ್ತಿರುವುದು “ಸ್ವೀಕಾರಾರ್ಹವಲ್ಲ” ಎಂದು ಹೇಳಿದೆ. ಆನ್‌ಲೈನ್ ದಾಳಿ ನಡೆಯುತ್ತಿರುವಾಗಲೇ ಸಿದ್ದಿಕಿ ತನ್ನ ಭಾರತ ಮೂಲದ ತಂದೆಯೊಂದಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಹುರಿದುಂಬಿಸುತ್ತಿರುವ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರಮೋದಿಯಲ್ಲಿ ಪ್ರಶ್ನೆ ಕೇಳಿದ್ದ ಪತ್ರಕರ್ತೆಗೆ ಆನ್​​ಲೈನ್​​ನಲ್ಲಿ ನಿಂದನೆ; ಅಮೆರಿಕದ ಶ್ವೇತಭವನದಿಂದ ಖಂಡನೆ

ಸಬ್ರಿನಾ ಸಿದ್ದಿಕಿ ಯಾರು?

ಸಬ್ರಿನಾ ಸಿದ್ದಿಕಿ ವಾಲ್ ಸ್ಟ್ರೀಟ್ ಜರ್ನಲ್ (WSJ) ನಲ್ಲಿ ಕೆಲಸ ಮಾಡುವ ಹಿರಿಯ ವರದಿಗಾರ್ತಿ. ಈಕೆ ಶ್ವೇತಭವನ ಮತ್ತು ಅಮೆರಿಕ ಅಧ್ಯಕ್ಷರಿಗೆ ಸಂಬಂಧಪಟ್ಟ ವಿಷಯಗಳನ್ನು ಸುದ್ದಿ ಮಾಡುತ್ತಾರೆ. ನಿರ್ದಿಷ್ಟವಾಗಿ ಜೋ ಬೈಡನ್ ಮತ್ತು ರಾಷ್ಟ್ರೀಯ ರಾಜಕೀಯ ವ್ಯವಹಾರಗಳ ಬಗ್ಗೆ ಇವರು ವರದಿ ಮಾಡುತ್ತಾರೆ. ಮುಸ್ಲಿಂ ಅಮೆರಿಕನ್ ಆಗಿರುವ ಇವರು ವಾಷಿಂಗ್ಟನ್, ಡಿಸಿಯಲ್ಲಿ ವೈಟ್ ಹೌಸ್ ವರದಿಗಾರ್ತಿಯಾಗಿ ಹೆಸರು ಮಾಡಿದ್ದಾರೆ.

ಈಕೆ ಸಿಎನ್ ಎನ್ ರಾಜಕೀಯ ವಿಶ್ಲೇಷಕರೂ ಆಗಿದ್ದಾರೆ. 2019 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ಗೆ ಸೇರುವ ಮೊದಲು, ಸಬ್ರಿನಾ ಗಾರ್ಡಿಯನ್‌ ಪತ್ರಿಕೆಗಾಗಿ ಶ್ವೇತಭವನ ಮತ್ತು 2016 ರ ಅಧ್ಯಕ್ಷೀಯ ಚುನಾವಣೆಯ ವರದಿ ಮಾಡಿದ್ದರು. ಅವರು ಈ ಹಿಂದೆ ಹಫಿಂಗ್ಟನ್ ಪೋಸ್ಟ್ ಮತ್ತು ಬ್ಲೂಮ್‌ಬರ್ಗ್‌ನಲ್ಲಿ ರಾಜಕೀಯ ವಿಷಯವನ್ನು ಸುದ್ದಿ ಮಾಡುತ್ತಿದ್ದರರು. ಈ ಬಗ್ಗೆ ವರದಿ ಮಾಡುವ ಮೂಲಕ ಖ್ಯಾತರಾಗಿದ್ದರು. ಇವರ ಬ್ಲೂಮ್‌ಬರ್ಗ್‌ನಲ್ಲಿ ವೈಟ್ ಹೌಸ್ ತಂಡದ ಭಾಗವಾಗಿಯೂ ಸೇವೆ ಸಲ್ಲಿಸಿದರು.

ಕೌಟುಂಬಿಕ ಹಿನ್ನಲೆ

ಪಾಕಿಸ್ತಾನಿ ಪೋಷಕರಿಗೆ ಜನಿಸಿದ ಸಿದ್ದಿಕಿ ತನ್ನ ಸಾಂಸ್ಕೃತಿಕ ಪರಂಪರೆಯೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ. ಆಕೆಯ ತಂದೆ ಭಾರತದಲ್ಲಿ ಜನಿಸಿದ್ದು, ಬೆಳೆದದ್ದು ಪಾಕಿಸ್ತಾನದಲ್ಲಿ. ತಾಯಿ ಪಾಕಿಸ್ತಾನಿ. ಆಕೆಯ ಬೇರುಗಳು ಪಾಕಿಸ್ತಾನಿ ಆಗಿದ್ದರೂ ಸಿದ್ದಿಕಿ ಜನಿಸಿದ್ದು ಅಮೆರಿಕದಲ್ಲಿ . ಸಿದ್ದಿಕಿ ಅವರು ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಪದವೀಧರರಾಗಿದ್ದಾರೆ. ಅವರ ಪತಿ ಮುಹಮ್ಮದ್ ಅಲಿ ಸೈಯದ್ ಜಾಫ್ರಿ . ಇವರಿಗೆ ಸೋಫಿ ಎಂಬ ಹೆಸರಿನ ಮಗಳಿದ್ದು ಈ ಕುಟುಂಬ ವಾಷಿಂಗ್ಟನ್‌ನಲ್ಲಿ ನೆಲೆಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:21 pm, Wed, 28 June 23