ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತದೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದಾರೆ. ‘ನಿಮ್ಮ ರಕ್ತ ಕ್ಯಾಮೆರಾಗಳ ಮುಂದೆ ಮಾತ್ರ ಕುದಿಯುವುದೇಕೆ?’ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಪಾಕಿಸ್ತಾನ, ಭಯೋತ್ಪಾದನೆ ಮತ್ತು ಡೊನಾಲ್ಡ್ ಟ್ರಂಪ್ ಬಗ್ಗೆ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದು, ಪಾಕಿಸ್ತಾನದ ವಿರುದ್ಧದ ಮಿಲಿಟರಿ ಯುದ್ಧವನ್ನು ನಿಲ್ಲಿಸಲು ಒಪ್ಪುವ ಮೂಲಕ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರತಿಷ್ಠೆಯ ಜೊತೆ ರಾಜಿ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತದೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
Rahul Gandhi

Updated on: May 22, 2025 | 9:23 PM

ನವದೆಹಲಿ, ಮೇ 22: “ನನ್ನ ಮೈಯಲ್ಲಿ ಹರಿಯುತ್ತಿರುವುದು ರಕ್ತವಲ್ಲ, ಕುದಿಯುತ್ತಿರುವ ಸಿಂಧೂರ” ಎಂದು ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮ್ಮ ಭಾಷಣದಲ್ಲಿ ಹೇಳಿದ್ದರು. ಇದಕ್ಕೆ ಟೀಕಾಪ್ರಹಾರ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), “ಕ್ಯಾಮೆರಾಗಳ ಮುಂದೆ ಮಾತ್ರ ನಿಮ್ಮ ರಕ್ತ ಕುದಿಯುವುದೇಕೆ?” ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ವಿರುದ್ಧದ ಮಿಲಿಟರಿ ಯುದ್ಧವನ್ನು ನಿಲ್ಲಿಸಲು ಒಪ್ಪುವ ಮೂಲಕ ಮೋದಿ ಭಾರತದ ಪ್ರತಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. “ಮೋದಿಯವರೇ, ಸುಳ್ಳು ಭಾಷಣಗಳನ್ನು ನಿಲ್ಲಿಸಿ. ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನದ ಹೇಳಿಕೆಯನ್ನು ನೀವು ಏಕೆ ನಂಬಿದ್ದೀರಿ? ಟ್ರಂಪ್‌ಗೆ ತಲೆಬಾಗುವ ಮೂಲಕ ನೀವು ಭಾರತದ ಹಿತಾಸಕ್ತಿಗಳನ್ನು ಏಕೆ ತ್ಯಾಗ ಮಾಡಿದ್ದೀರಿ? ಕ್ಯಾಮೆರಾಗಳ ಮುಂದೆ ಮಾತ್ರ ಏಕೆ ನಿಮ್ಮ ರಕ್ತ ಕುದಿಯುತ್ತಿದೆ? ನೀವು ಭಾರತದ ಪ್ರತಿಷ್ಠೆಯೊಂದಿಗೆ ರಾಜಿ ಮಾಡಿಕೊಂಡಿದ್ದೀರಿ!” ಎಂದು ಅವರು ಎಕ್ಸ್​ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಭಯೋತ್ಪಾದನೆ ಅಥವಾ ಮಿಲಿಟರಿ ಕ್ರಮಕ್ಕೆ ಯಾವುದೇ ಬೆಂಬಲ ನೀಡುವುದಿಲ್ಲ ಎಂಬ ಪಾಕಿಸ್ತಾನದ ಭರವಸೆಯನ್ನು ಭಾರತ ಗಮನಿಸಿದೆ ಎಂದು ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕರು ಇಂದು ರಾಜಸ್ಥಾನದ ಬಿಕಾನೇರ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದಾಗ ಪ್ರಧಾನಿ ಮೋದಿಯವರು ಮಾಡಿದ ಭಾಷಣವನ್ನು ಉಲ್ಲೇಖಿಸುತ್ತಾ, “ಮೋದಿ ತಮ್ಮ ಭಾಷಣದಲ್ಲಿ ತಮ್ಮ ಮನಸ್ಸು ತಂಪಾಗಿರುತ್ತದೆ, ಆದರೆ ರಕ್ತ ಮಾತ್ರ ಬಿಸಿಯಾಗಿರುತ್ತದೆ. ಈಗ, ಅದು ರಕ್ತವಲ್ಲ, ಕುದಿಯುತ್ತಿರುವ ಸಿಂಧೂರ” ಎಂದು ಹೇಳಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ವಿವಾದಾತ್ಮಕ ಪೋಸ್ಟ್; ಬಾಗಲಕೋಟೆಯ ಯುವಕನ ಬಂಧನ


ಸಶಸ್ತ್ರ ಪಡೆಗಳು ಬಲವಾಗಿ ಬೆಳೆಯುತ್ತಿರುವಾಗ ಮತ್ತು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುತ್ತಿರುವಾಗ ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಿದ್ದಕ್ಕಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಗಳಲ್ಲಿ ವ್ಯಾಪಾರವನ್ನು ಬಳಸಿಕೊಂಡು ಮಧ್ಯಸ್ಥಿಕೆ ವಹಿಸಿ, ಕದನ ವಿರಾಮಕ್ಕೆ ಕಾರಣರಾದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಂಡ ನಂತರ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ವಿಷಯದ ಬಗ್ಗೆಯೂ ಕಾಂಗ್ರೆಸ್ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿ ಆಧುನಿಕ ಯುಗದ ಮೀರ್ ಜಾಫರ್; ಬಿಜೆಪಿಯಿಂದ ತೀವ್ರ ವಾಗ್ದಾಳಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಮಾತುಕತೆ ನಡೆದಿದೆ ಎಂದು ಹೇಳುವ ಮೂಲಕ ವಿದೇಶಾಂಗ ಸಚಿವಾಲಯವು ಈ ಹೇಳಿಕೆಯನ್ನು ತಳ್ಳಿಹಾಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಇನ್ನೂ ಟ್ರಂಪ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿಲ್ಲ. ಈ ಮೌನವನ್ನು ಕಾಂಗ್ರೆಸ್ ಪ್ರಶ್ನಿಸುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us