
ಮುಂಬೈ, ಸೆಪ್ಟೆಂಬರ್ 17: ಸುಶಾಂತ್ ಸಿಂಗ್ ರಜಪೂತ್ ಅವರ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವಿನ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದ ಬೆನ್ನಲ್ಲೇ, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸಿಬಿಐ ವಿರುದ್ಧ ವ್ಯಂಗ್ಯವಾಡಿದ್ದಾರೆ. ಈ ಪ್ರಕರಣದಲ್ಲಿ ಉದ್ಧವ್ ಠಾಕ್ರೆಯ ಮಗ ಆದಿತ್ಯ ಠಾಕ್ರೆ ಹೆಸರೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ರಾಜಕೀಯ ಕೆಸರೆರಚಾಟಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಈ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಯ ಹೆಸರುಗಳನ್ನು ಏಕೆ ಎಳೆದು ತಂದಿಲ್ಲ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ತಮ್ಮ ಪುತ್ರ ಹಾಗೂ ಶಾಸಕ ಆದಿತ್ಯ ಠಾಕ್ರೆ ಅವರಿಗೆ ಈ ದುರಂತದೊಂದಿಗೆ ನಂಟು ಕಲ್ಪಿಸುವ ಯತ್ನಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. “ಇಂತಹ ಆಧಾರರಹಿತ ಆರೋಪಗಳು ಮುಂದುವರಿದರೆ ಎಷ್ಟು ಕಾಲ ಸಹಿಸಿಕೊಳ್ಳಬೇಕು? ಈ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಹೆಸರುಗಳು ಏಕೆ ಬಿಟ್ಟುಹೋಗಿವೆ ಎಂದು ನನಗೆ ಆಶ್ಚರ್ಯವಾಗುತ್ತಿದೆ” ಎಂದು ವ್ಯಂಗ್ಯವಾಗಿ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: ಸುಶಾಂತ್ ಮ್ಯಾನೇಜರ್ ದಿಶಾ ಸಾಲಿಯಾನ್ ಸಾವು ಪ್ರಕರಣ: ಸಿಬಿಐ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ, ದಿನೋ ಮೊರಿಯಾ ಹೆಸರು
ಪ್ರಸಿದ್ಧ ಸೆಲೆಬ್ರಿಟಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ಜೂನ್ 2020ರ ಸಾವಿನ ಕುರಿತು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ತನಿಖೆಗೆ ಬಾಂಬೆ ಹೈಕೋರ್ಟ್ ಆದೇಶಿಸಿದ ನಂತರ ಈ ವಿವಾದ ಮತ್ತೆ ಕಾವು ಪಡೆದುಕೊಂಡಿದೆ. ತಮಗೂ ದಿಶಾ ಸಾಲಿಯಾನ್‌ಗೂ ಯಾವುದೇ ಸಂಬಂಧವಿಲ್ಲ ಹಾಗೂ ಅವರನ್ನು ಎಂದಿಗೂ ಭೇಟಿಯಾಗಿಲ್ಲ ಎಂದು ಆದಿತ್ಯ ಠಾಕ್ರೆ ಸ್ಪಷ್ಟಪಡಿಸಿದ್ದಾರೆ.
ತಮ್ಮ ಕುಟುಂಬದ ವಿರುದ್ಧ ಚಾರಿತ್ರ್ಯ ಹರಣ ಮಾಡುವ ಕೆಲಸ ನಿಲ್ಲದಿದ್ದರೆ, ಸುಳ್ಳು ಆರೋಪಗಳನ್ನು ಹರಡುವವರ ವಿರುದ್ಧ ಶೀಘ್ರದಲ್ಲೇ ಕಾನೂನು ಸಮರ ಆರಂಭಿಸುವುದಾಗಿ ಉದ್ಧವ್ ಠಾಕ್ರೆ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ‘ಚಾರಿತ್ರ್ಯವಧೆ ಮಾಡುವ ಷಡ್ಯಂತ್ರ’; ದಿಶಾ ಸಾಲಿಯಾನ್ ಸಾವಿನ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದ ಆದಿತ್ಯ ಠಾಕ್ರೆ
2020ರ ಜೂನ್ 8ರಂದು ಮುಂಬೈನ ಕಟ್ಟಡವೊಂದರ 14ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯಾನ್ ಮೃತಪಟ್ಟಿದ್ದರು. ಈ ಘಟನೆ ನಡೆದ 6 ದಿನಗಳ ನಂತರ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಫ್ಲ್ಯಾಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಮುಂಬೈ ಪೊಲೀಸರು ದಿಶಾ ಸಾಲಿಯಾನ್ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದರು. ಉಚ್ಚ ನ್ಯಾಯಾಲಯದ ನಿರ್ದೇಶನದ ನಂತರ ಇತ್ತೀಚೆಗೆ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡ ಸಿಬಿಐ, ಸತೀಶ್ ಸಾಲಿಯಾನ್ ನೀಡಿರುವ ಹೇಳಿಕೆಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದೆ. ತನಿಖಾ ಸಂಸ್ಥೆಯು ಕೊಲೆ, ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಸಂಚು, ಸಾಕ್ಷ್ಯ ನಾಶ ಮತ್ತು ಸುಳ್ಳು ಮಾಹಿತಿ ನೀಡಿದ ಆರೋಪಗಳ ಅಡಿಯಲ್ಲಿ ಎಫ್‌ಐಆರ್ ಹೂಡಿದೆ.
ಈ ಎಫ್‌ಐಆರ್‌ನಲ್ಲಿ ಆದಿತ್ಯ ಠಾಕ್ರೆ, ನಟ ದಿನೋ ಮೋರಿಯಾ ಮತ್ತು ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಅಪರಾಧಿಗಳನ್ನು ರಕ್ಷಿಸಲು ಸಾರ್ವಜನಿಕ ಹಣ, ಅಧಿಕಾರ ಮತ್ತು ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣವನ್ನು ಮುಚ್ಚಿಹಾಕಲು ಉದ್ಧವ್ ಠಾಕ್ರೆ ಮತ್ತು ಇತರರು ನೆರವಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ