Modi in WITT 2024: ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ದೇಶವನ್ನು ಮುನ್ನಡೆಸಬೇಕಿದೆ: ಪ್ರಧಾನಿ ಮೋದಿ
ಟಿವಿ 9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಾಗಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ 10 ವರ್ಷಗಳ ಕಠಿಣ ಪರಿಶ್ರಮದಿಂದಾಗಿ ದೇಶ ಮುನ್ನಡೆ ಸಾಧಿಸಿದ ಬಗ್ಗೆ ತಿಳಿಸಿದರು. ಅಲ್ಲದೆ, ಮೊದಲ ಕೈಗಾರಿಕಾ ಕ್ರಾಂತಿ, ಎರಡನೇ ಹಾಗೂ ಮೂರನೇ ಕೈಗಾರಿಕಾ ಕ್ರಾಂತಿಯಲ್ಲಿ ದೇಶ ಹಿಂದುಳಿದಿತ್ತು. ಆದರೆ, ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಮುನ್ನಡೆ ಸಾಧಿಸಬೇಕಾಗಿದೆ ಎಂದರು.
ಮೊದಲ ಕೈಗಾರಿಕಾ ಕ್ರಾಂತಿ, ಎರಡನೇ ಹಾಗೂ ಮೂರನೇ ಕೈಗಾರಿಕಾ ಕ್ರಾಂತಿಯಲ್ಲಿ ದೇಶ ಹಿಂದುಳಿದಿತ್ತು. ಆದರೆ, ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ನಾವು ಹಿಂದುಳಿಯಬೇಕಾಗಿಲ್ಲ. ಬದಲಾಗಿ ಮುನ್ನಡೆ ಸಾಧಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. Tv9 ನೆಟ್ವರ್ಕ್ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಶೃಂಗಸಭೆಯಲ್ಲಿ ಭಾಗವಾಗಿಸಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ದೊಡ್ಡ ಡಿಜಿಟಲ್ ಕ್ರಾಂತಿಯಾಗಿದೆ ಎಂದರು.
ಭಾರತ ಅಭಿವೃದ್ಧಿ ಹೊಂದುತ್ತಿರುವ ಬಗ್ಗೆ ಮಾತನಾಡಿದ ಮೋದಿ, ಭಾರತವು ದೊಡ್ಡ ಜಿಗಿತಕ್ಕೆ ಸಿದ್ಧವಾಗಿದೆ ಎಂದು ಇಡೀ ಜಗತ್ತು ನೋಡುತ್ತಿದೆ. ಇದಕ್ಕಾಗಿ ಕಳೆದ 10 ವರ್ಷಗಳಲ್ಲಿ ಸಿದ್ಧತೆಗಳನ್ನು ಮಾಡಲಾಗಿದೆ ಎಂದರು. ಹಿಂದಿನ ಸರ್ಕಾರದ ಬಗ್ಗೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ದೇಶದ ಜನರ ಸಾಮರ್ಥ್ಯಗಳನ್ನು ನಂಬಿರಲಿಲ್ಲ. ಜನರನ್ನು ಸೋಮಾರಿಗಳು ಎಂದು ಕೆಂಪು ಕೋಟೆಯಿಂದ ಕರೆಯಲಾಗುತ್ತಿತ್ತು. ಆದರೆ, ಕಳೆದ 10 ವರ್ಷಗಳಲ್ಲಿ ದೇಶದ ಜನರ ಚಿಂತನೆ ಬದಲಾಗಿದೆ. ಪ್ರತಿಯೊಬ್ಬ ಭಾರತೀಯನೂ ನಾನು ಏನು ಬೇಕಾದರೂ ಮಾಡಬಲ್ಲೆ, ನನಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಯೋಚಿಸಲು ಆರಂಭಿಸಿದ್ದಾನೆ ಎಂದರು.
ಕಳೆದ 40-50 ವರ್ಷಗಳಿಂದ ಬಾಕಿ ಉಳಿದಿದ್ದ ಕಾಮಗಾರಿಗಳನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿದೆ. ಹಿಂದಿನ ಸರ್ಕಾರಗಳು ಶಂಕುಸ್ಥಾಪನೆ ಮಾಡಿದ ನಂತರ ಬಾಕಿ ಉಳಿದಿದ್ದ ಅನೇಕ ಯೋಜನೆಗಳನ್ನು ಪಟ್ಟಿ ಮಾಡಲಾಗಿತ್ತು. 2014ರ ನಂತರ ಎಲ್ಲ ಯೋಜನೆಗಳ ಕಾಮಗಾರಿ ಆರಂಭಿಸಿ ಒಂದೊಂದಾಗಿ ಪೂರ್ಣಗೊಳಿಸಲಾಗಿದೆ ಎಂದರು.
ಇದನ್ನೂ ಓದಿ: WITT Global Summit: 10 ವರ್ಷದಲ್ಲಿ ಬಾಕಿ ಇದ್ದ 17 ಲಕ್ಷ ಕೋಟಿ ರೂ. ಯೋಜನೆಗಳ ಕಡತಗಳನ್ನು ನಾನೇ ಪರಿಶೀಲಿಸಿದ್ದೇನೆ: ಮೋದಿ
60ರ ದಶಕದಲ್ಲಿ ಸರ್ದಾರ್ ಸರೋವರ ಯೋಜನೆಯ ಅಡಿಗಲ್ಲು ಹಾಕಲಾಯಿತ್ತು. ಅದರ ಕೆಲಸವೂ ಬಾಕಿ ಉಳಿದಿತ್ತು. ಆ ಅಣೆಕಟ್ಟಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿದ್ದೇವೆ. 2002 ರಲ್ಲಿ ಶಂಕುಸ್ಥಾಪನೆ ಮಾಡಿದ್ದ ಅಟಲ್ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿ ಉದ್ಘಾಟಿಸಿದ್ದೇವೆ. ಹೀಗೆ ಅಂದಿನ ಸರ್ಕಾರ ಬಾಕಿ ಉಳಿಸಿದ್ದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಿದ ಇನ್ನಿತರ ಯೋಜನೆಗಳ ಮಾಹಿತಿ ನೀಡಿದ ಮೋದಿ, ಪ್ರತಿ ತಿಂಗಳು ಪ್ರಧಾನಮಂತ್ರಿ ಕಚೇರಿಯಲ್ಲಿ ಎಲ್ಲಾ ಯೋಜನೆಗಳ ಕಡತಗಳೊಂದಿಗೆ ಕುಳಿತು ಕಾಮಗಾರಿ ಎಷ್ಟರಮಟ್ಟಿಗೆ ತಲುಪಿದೆ ಎಂಬುದನ್ನು ಪರಿಶೀಲಿಸುತ್ತಿದ್ದೆ ಎಂದು ಹೇಳಿದರು.
ಆಧುನಿಕ ಭಾರತದ ಬಗ್ಗೆ ಮಾತನಾಡಿದ ಮೋದಿ, ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯು ಐದನೇ ಸ್ಥಾನಕ್ಕೆ ಬಂದಿದೆ. ಭಾರತ ಇಡೀ ಜಗತ್ತನ್ನು ಮುನ್ನಡೆಸುತ್ತಿದೆ. ದೇಶದ ಜನರನ್ನು ಸಂಕಷ್ಟದಲ್ಲಿ ಇರಿಸಲು ಈ ಹಿಂದಿನ ಸರ್ಕಾರ ಯತ್ನಿಸಿತ್ತು. ಆದರೆ ನಮ್ಮ ಸರ್ಕಾರ ಇದಕ್ಕೆ ಅವಕಾಶ ನೀಡಿಲ್ಲ. ಮೋದಿಯ ಗ್ಯಾರಂಟಿಯ ಬಗ್ಗೆ ಪ್ರತಿಯೊಬ್ಬರಿಗೂ ಸಿಗಲೇಬೇಕು. ನಾವು, ದೇಶವೇ ಪ್ರಥಮ ಎಂಬ ಸಿದ್ದಾಂತದಿಂದ ದೇಶ ನಡೆಸುತ್ತಿದ್ದೇವೆ. ತ್ರಿವಳಿ ತಲಾಖ್ ಅಂತಹ ಹಲವಾರು ಜನಪರ ಕಾರ್ಯಗಳನ್ನು ಮಾಡಿದೆ. 5ಜಿ ನೆಟ್ವರ್ಕ್ ಕ್ಷೇತ್ರದಲ್ಲಿ ಯೂರೋಪ ದೇಶವನ್ನು ಹಿಂದೆ ಹಾಕಿದೆ. ಭಾರತ ಮುಂದಿನ ಭವಿಷ್ಯದ ಹೆಚ್ಚು ಹೆಚ್ಚು ಆಲೋಚನೆ ಮಾಡುತ್ತಿದೆ ಎಂದರು.
ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ