ಜಿಮ್ ಟ್ರೇನರ್ ಕಿರುಕುಳಕ್ಕೆ ಬೇಸತ್ತ ವಿವಾಹಿತ ಮಹಿಳೆ; ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹೋಗಿ, ನೀರು ನೋಡಿ ಪ್ರಜ್ಞೆ ತಪ್ಪಿದರು
ಬಳಿಕ ಮಹಿಳೆ ಜಿಮ್ ತರಬೇತುದಾರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಅಹ್ಮದಾಬಾದ್ನ ಸರ್ಖೇಜ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ನುಸ್ರು ಖಾನ್ ತೇಜ್ ಖಾನ್ ಪಠಾಣ್ .

31 ವರ್ಷದ ವಿವಾಹಿತ ಮಹಿಳೆಯೊಬ್ಬರು ಜಿಮ್ ಟ್ರೇನರ್ನಿಂದ ದೈಹಿಕ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆ ಪ್ರಯತ್ನ ಮಾಡಿದ ಘಟನೆ ಗುಜರಾತ್ನಲ್ಲಿ ನಡೆದಿದೆ. ಈ ಜಿಮ್ ತರಬೇತುದಾರ ಯುವತಿಗೆ ದೈಹಿಕವಾಗಿ ಹಿಂಸೆ ನೀಡಿದ್ದ. ಅಷ್ಟೇ ಅಲ್ಲ, ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದರಿಂದ ಹೆದರಿದ ಯುವತಿ ಸಬರಮತಿ ನದಿಗೆ ಹಾರಲು ಹೋಗಿದ್ದಾರೆ. ಆದರೆ ನದಿ ನೀರು ನೋಡುತ್ತಿದ್ದಂತೆ ಹೆದರಿ ಮೂರ್ಚೆ ಹೋಗಿದ್ದರು. ಅದನ್ನು ನೋಡಿದ ಆಟೋ ಚಾಲಕ ಮತ್ತು ಅಲ್ಲಿಯೇ ಅಕ್ಕಪಕ್ಕದಲ್ಲಿದ್ದವರು ಅವಳನ್ನು ಕಾಪಾಡಿ, ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.
ಬಳಿಕ ಮಹಿಳೆ ಜಿಮ್ ತರಬೇತುದಾರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಅಹ್ಮದಾಬಾದ್ನ ಸರ್ಖೇಜ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈತನ ಹೆಸರು ನುಸ್ರು ಖಾನ್ ತೇಜ್ ಖಾನ್ ಪಠಾಣ್ (36). ಆರು ತಿಂಗಳ ಹಿಂದಿನಿಂದ ಯುವತಿಗೆ ಈತನ ಪರಿಚಯವಿದೆ. ಪಠಾಣ್ ಕೇವಲ ಜಿಮ್ ಟ್ರೆನರ್ ಮಾತ್ರವಲ್ಲ, ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತನ್ನ ಸಹೋದರನಿಗೆ ಸಹಾಯ ಮಾಡುತ್ತಿದ್ದ. ಯುವತಿ ಮತ್ತು ಜಿಮ್ ಟ್ರೇನರ್ ಪರಸ್ಪರ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತರು. ಮೊದಮೊದಲು ಹೀಗೆ ಸೋಷಿಯಲ್ ಮೀಡಿಯಾ ಇನ್ಬಾಕ್ಸ್ನಲ್ಲೇ ಮೆಸೇಜ್ ಮಾಡಿಕೊಳ್ಳುತ್ತಿದ್ದ ಇವರು ನಂತರ ಫೋನ್ ನಂಬರ್ ಕೂಡ ಪಡೆದಿದ್ದರು. ಕೊನೆಗೆ ದಾತಾರ್ ದರ್ಗಾ ಎಂಬಲ್ಲಿ ಭೇಟಿಯಾಗಲು ನಿರ್ಧರಿಸಿದ್ದರು.
ಇವರಿಬ್ಬರೂ ಭೇಟಿಯಾದ ಬಳಿಕ ರಿಲೇಶನ್ಶಿಪ್ನಲ್ಲಿದ್ದರು. ಆದರೆ ಇತ್ತೀಚೆಗೆ ಪಠಾಣ್ ಹಣಕ್ಕಾಗಿ ಯುವತಿಯನ್ನು ಪೀಡಿಸುತ್ತಿದ್ದ. ಸದಾ ನಿಂದಿಸುತ್ತಿದ್ದ. ಹಣ ಕೊಡದೆ ಇದ್ದರೆ ನಮ್ಮಿಬ್ಬರ ಸಂಬಂಧವನ್ನು ನಿನ್ನ ಮನೆಯವರಿಗೆ ತಿಳಿಸುತ್ತೇನೆ ಎಂದು ಹೇಳುತ್ತಿದ್ದ. ಈಗಾಗಲೇ ಮದುವೆಯಾಗಿದ್ದ ಮಹಿಳೆ ಆತನ ಮಾತು ಕೇಳಿ ದಿಗಿಲುಗೊಂಡಿದ್ದರು. ಕೊನೆಗೊಂದು ದಿನ ಹೇಳದೆ ಕೇಳದೆ ಮನೆಗೂ ಹೋಗಿ ಆಕೆಗೆ ಬೆದರಿಕೆ ಹಾಕಿದ್ದ. ಹೀಗೆ ಪಠಾಣ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು, ಮನೆಯವರಿಗೆ ಹೆದರಿ ಓಡಿ ಹೋದ ಯುವತಿ ಸಬರಮತಿ ನದಿಗೆ ಹಾರಿ ಸಾಯುವ ನಿರ್ಧಾರ ಮಾಡಿದರು.
ಆಟೋದಲ್ಲಿ ಸಬರಮತಿ ನದಿಯವರೆಗೆ ಹೋಗಿ, ಅಲ್ಲಿ ದಡದ ಮೇಲೆ ಅಂಚಿನಲ್ಲಿ ನಿಂತಿದ್ದರು. ಆದರೆ ಕರೆದುಕೊಂಡು ಹೋದ ಆಟೋದವನಿಗೆ ಏನೋ ಅನುಮಾನ ಬಂದು ಅಲ್ಲಿಯೇ ಬದಿಗೆ ನಿಂತಿದ್ದ. ಆಕೆ ನದಿಯ ನೀರು ನೋಡಿ ಹೆದರಿಕೆಯಿಂದ ಎಚ್ಚರತಪ್ಪಿ ಬಿದ್ದಿದ್ದಾಳೆ. ಅಕ್ಕಪಕ್ಕದವರ ಸಹಾಯದಿಂದ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ಆಟೋ ಚಾಲಕ ನಂತರ ಮನೆಯವರಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಆಕೆಯ ಪತಿ, ಕುಟುಂಬದವರು ನಂತರ ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸ್ಥಳೀಯ ಎಸಿಪಿ ಪಟೇಲ್ ತಿಳಿಸಿದ್ದಾರೆ.