ಲಖ್ಪತಿ ದೀದಿ ಫಲಾನುಭವಿಗಳೊಂದಿಗೆ ಮೋದಿ ವಿಶೇಷ ಸಂವಾದ: ಟಿಪ್ಪಣಿ ಮಾಡಿಕೊಂಡ ಪ್ರಧಾನಿ
ಮಾರ್ಚ್ 8ರಂದು, ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರು ಲಖ್ಪತಿ ದೀದಿ ಯೋಜನೆಯ ಫಲಾನುಭವಿ ಮಹಿಳೆಯರೊಂದಿಗೆ ವಿಶೇಷ ಸಂವಾದ ನಡೆಸಿದರು. ಯೋಜನೆಯ ಯಶಸ್ಸು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಚರ್ಚಿಸಲಾಯಿತು. ಮಹಿಳೆಯರು ತಮ್ಮ ಯಶಸ್ಸಿನ ಕಥೆಗಳನ್ನು ಹಂಚಿಕೊಂಡರು. ವ್ಯಾಪಾರ ವಿಸ್ತರಣೆ ಮತ್ತು ಆನ್‌ಲೈನ್ ಮಾರುಕಟ್ಟೆಗೆ ಬಗ್ಗೆ ಪ್ರಧಾನಿ ಮೋದಿ ಸಲಹೆ ನೀಡಿದರು.

ಗುಜರಾತ್, ಮಾರ್ಚ್ 08: ಅಂತಾರಾಷ್ಟ್ರೀಯ ಮಹಿಳಾ ದಿನದಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಜರಾತ್‌ನ ನವ್ಸಾರಿ ಜಿಲ್ಲೆಯಲ್ಲಿ ಲಖ್ಪತಿ ದೀದಿ ಯೋಜನೆಯ (Lakhpati Didi) ಫಲಾನುಭವಿಗಳೊಂದಿಗೆ ವಿಶೇಷ ಸಂವಾದ ನಡೆಸಿದರು. ಸಿಇಒಗಳೊಂದಿಗೆ ನಡೆಸುವ ಅಂದರೆ ಬೋರ್ಡ್ ರೂಮ್ ಶೈಲಿಯಲ್ಲಿ ಸಂವಾದ ನಡೆದದ್ದು ಮತ್ತಷ್ಟು ವಿಶೇಷವಾಗಿತ್ತು. ಈ ಸಂವಾದ ವೇಳೆ ಪ್ರಧಾನಿ ಮೋದಿ ಅವರು ಚರ್ಚೆಯ ಮುಖ್ಯ ಅಂಶಗಳನ್ನು ತನ್ನ ನೋಟ್ಪ್ಯಾಡ್ನಲ್ಲಿ ಟಿಪ್ಪಣಿ ಮಾಡಿಕೊಂಡರು.
ವಿಶೇಷ ಸಂವಾದದಲ್ಲಿ ಹೆಚ್ಚಿನ ಮಹಿಳೆಯರು ತಾವು ಲಖ್ಪತಿ ದೀದಿ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಾಗಿದ್ದು ನಿಮ್ಮಿಂದ ಎಂದು ಹೇಳಿದ್ದಾರೆ. ಲಖ್ಪತಿ ದೀದಿಗಳ ಫಲಾನುಭವಿಗಳ ಸಕಾರಾತ್ಮಕ ಅನುಭವಿ ಮಾತುಗಳನ್ನು ಆಲಿಸಿದ ಪ್ರಧಾನಿ ಮೋದಿ, 3 ಕೋಟಿ ಲಖ್ಪತಿ ದೀದಿಗಳ ಗುರಿಯನ್ನು ಶೀಘ್ರದಲ್ಲೇ ದಾಟಲಾಗುವುದು ಮತ್ತು ಮುಂಬರುವ ಸಮಯದಲ್ಲಿ 5 ಕೋಟಿ ಗುರಿಯನ್ನು ಸಹ ಸಾಧಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: Video: ಗುಜರಾತ್‌ನಲ್ಲಿ ‘ಲಖ್ಪತಿ ದೀದಿ’ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ
ಸಂವಾದದಲ್ಲಿ ಭಾಗಿಯಾಗಿದ್ದ ಮಹಿಳೆಯೊಬ್ಬರು ಮಾತನಾಡಿ, ಮುಂದಿನ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಲಖ್ಪತಿ ದೀದಿ ಯೋಜನೆ ಬದಲು ಕರೋಡ್‌ಪತಿ ದೀದಿ ಯೋಜನೆಯ ಫಲಾನುಭವಿಗಳಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಬ್ಬ ಡ್ರೋನ್ ಪೈಲಟ್ ಅವರು ವಿಮಾನವನ್ನು ಹಾರಿಸಲು ಸಾಧ್ಯವಿಲ್ಲ, ಆದರೆ ಪ್ರಧಾನಿ ಮೋದಿ ಅವರ ಕಾರಣದಿಂದಾಗಿ, ಅವರಿಗೆ ಡ್ರೋನ್ ಪೈಲಟ್ ಆಗುವ ಅವಕಾಶ ಸಿಕ್ಕಿದೆ ಎಂದು ಹೇಳಿದರು. ತನ್ನ ಮನೆ ಮತ್ತು ಹಳ್ಳಿಯಲ್ಲಿ, ತನ್ನನ್ನು ಅತ್ತಿಗೆ ಎಂದು ಕರೆಯುವ ಬದಲು ಪೈಲಟ್ ಎಂದು ಕರೆಯಲಾಗುತ್ತದೆ ಎಂದು ಮತ್ತೋರ್ವ ಮಹಿಳೆ ಹೇಳಿದ್ದಾರೆ.
ವ್ಯಾಪಾರ ವಿಸ್ತರಣೆ ಯೋಜನೆಯ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ, ತಮ್ಮ ವ್ಯವಹಾರವನ್ನು ಆನ್ಲೈನ್ಗೆ ತರುವಂತೆ ಲಖ್ಪತಿ ದೀದಿ ಯೋಜನೆಯ ಫಲಾನುಭವಿಗಳಿಗೆ ಸಲಹೆ ನೀಡಿದರು. ಆ ಮೂಲಕ ಮಾರುಕಟ್ಟೆಗೆ ಪ್ರವೇಶವನ್ನು ಹೊಂದಬಹುದು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಅಭಿವೃದ್ಧಿ ಹೊಂದಿದ ಭಾರತದ ಹಾದಿಯಲ್ಲಿ ಸಾಗಲು ಸಹಕಾರಿಯಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಪ್ರಧಾನಿ ಮೋದಿಯವರ ‘ಎಕ್ಸ್’ ಖಾತೆಯನ್ನು ನಿರ್ವಹಿಸಲಿರುವ ಈ ಮಹಿಳೆರ್ಯಾರು?
ಮಾರುಕಟ್ಟೆಯನ್ನು ಉತ್ತೇಜಿಸಲು ಪ್ರಧಾನಿಯವರ ಉಪಕ್ರಮವನ್ನು ಶ್ಲಾಘಿಸಿದ ಮಹಿಳೆಯೊಬ್ಬರು, ಗುಜರಾತ್‌ನ ತಮ್ಮ ಖಖ್ರಾ ಜನಪ್ರಿಯವಾಗಿದೆ ಎಂದು ಹೇಳಿದರು. ಈ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇಂತಹ ಪ್ರಯತ್ನಗಳಿಂದ ಖಖ್ರಾ ಗುಜರಾತ್‌ಗೆ ಸೀಮಿತವಾಗಿಲ್ಲ, ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:13 pm, Sat, 8 March 25