ಬಂಗಾಳದಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದು ಸೀಟು ಕೊಡಲಾರೆ; ಷರತ್ತು ಮುಂದಿಟ್ಟ ಮಮತಾ ಬ್ಯಾನರ್ಜಿ
ಕಾಂಗ್ರೆಸ್ ಪಕ್ಷದ ವಿರುದ್ಧ ಮತ್ತೊಮ್ಮೆ ಗುಡುಗಿದ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಆ ಪಕ್ಷಕ್ಕೆ ನಾವು ಒಂದೇ ಒಂದು ಸೀಟು ಕೊಡುವುದಿಲ್ಲ ಎಂದಿದ್ದಾರೆ. ನಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಬೇಕಾದರೆ ಕಾಂಗ್ರೆಸ್ ಪಕ್ಷ ಸಿಪಿಎಂನಿಂದ ದೂರವಿರಬೇಕು ಎಂದು ಪಶ್ಚಿಮ ಬಂಗಾಳದ ಸಿಎಂ ಷರತ್ತೊಂದನ್ನು ಮುಂದಿಟ್ಟಿದ್ದಾರೆ.
ಮಾಲ್ಡಾ (ಪಶ್ಚಿಮ ಬಂಗಾಳ)ಜನವರಿ 31: ಬಂಗಾಳದಲ್ಲಿ ಇಂಡಿಯಾ (INDIA bloc) ಮೈತ್ರಿಕೂಟ ಬಗ್ಗೆ ಮಮತಾ ಬ್ಯಾನರ್ಜಿ (Mamata Banerjee) ಮತ್ತೊಮ್ಮೆ ಸಿಡಿದೆದ್ದಿದ್ದಾರೆ. ಈ ಬಾರಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೊಸ ಷರತ್ತೊಂದನ್ನು ಕಾಂಗ್ರೆಸ್ (Congress) ಮುಂದಿಟ್ಟಿದ್ದಾರೆ. ಅದೇನೆಂದರೆ ಕಾಂಗ್ರೆಸ್ ಪಕ್ಷ ಟಿಎಂಸಿ ಜತೆ ಯಾವುದೇ ಮೈತ್ರಿಯನ್ನು ಬಯಸುವುದಾದರೆ ಅವರು ಸಿಪಿಎಂನಿಂದ ದೂರವಾಗಬೇಕು ಎಂಬುದು. ಸೀಟು ಹಂಚಿಕೆ ಮಾತುಕತೆಯ ಸಂದರ್ಭದಲ್ಲಿ ತೃಣಮೂಲದ ಎರಡು ಸ್ಥಾನಗಳ ಪ್ರಸ್ತಾಪವನ್ನು ಕಾಂಗ್ರೆಸ್ ತಿರಸ್ಕರಿಸಿದೆ.ನಾವು ಅವರಿಗೆ ಒಂದೇ ಒಂದು ಸೀಟು ಕೂಡಾ ಕೊಡುವುದಿಲ್ಲ ಎಂದಿದ್ದಾರೆ ಮಮತಾ ಬ್ಯಾನರ್ಜಿ.
ಸಿಪಿಎಂ ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದೆ. ನನ್ನನ್ನು ನಿರ್ದಯವಾಗಿ ಥಳಿಸಲಾಯಿತು. ನನ್ನ ಹಿತೈಷಿಗಳ ಆಶೀರ್ವಾದದಿಂದ ಮಾತ್ರ ನಾನು ಬದುಕಿದ್ದೇನೆ. ನಾನು ಎಂದಿಗೂ ಎಡಪಕ್ಷಗಳನ್ನು ಕ್ಷಮಿಸಲಾರೆ, ಸಿಪಿಎಂ ಪಕ್ಷವನ್ನು ಕ್ಷಮಿಸುವುದಿಲ್ಲ . ಹಾಗಾಗಿ ಇಂದು ಸಿಪಿಎಂ ಜೊತೆ ಇರುವವರು ಬಿಜೆಪಿಯಲ್ಲೂ ಇರಬಹುದು. ನಾನು ಅವರನ್ನು ಕ್ಷಮಿಸುವುದಿಲ್ಲ ಎಂದು ಮಾಲ್ಡಾದಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬಿಹಾರದ ನಂತರ ಬಂಗಾಳವನ್ನು ಮರುಪ್ರವೇಶಿಸಿದ ದಿನದಂದು ಅವರ ಈ ಹೇಳಿಕೆಗಳು ಬಂದಿವೆ.
ನಿಮಗೆ ವಿಧಾನಸಭೆಯಲ್ಲಿ ಒಬ್ಬನೇ ಒಬ್ಬ ಎಂಎಲ್‌ಎ ಇಲ್ಲ ಎಂದು ನಾನು ಕಾಂಗ್ರೆಸ್‌ಗೆ ಹೇಳಿದ್ದೇನೆ, ನಾವು ನಿಮಗೆ ಎರಡು ಸಂಸದೀಯ ಸ್ಥಾನಗಳನ್ನು ನೀಡುತ್ತೇವೆ. ನಿಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ. ಆದರೆ ಅವರಿಗೆ ಹೆಚ್ಚಿನ ಸ್ಥಾನಗಳು ಬೇಕು. ನೀವು ಎಡಪಕ್ಷಗಳ ಸಹವಾಸವನ್ನು ತೊರೆಯುವವರೆಗೆ ನಾನು ನಿಮಗೆ ಒಂದೇ ಒಂದು ಸ್ಥಾನವನ್ನು ನೀಡುವುದಿಲ್ಲ ಎಂದು ಟಿಎಂಸಿ ನಾಯಕಿ ಹೇಳಿದ್ದಾರೆ.
ಸಿಪಿಎಂ ಈ ಹಿಂದೆ ತೃಣಮೂಲ ಜತೆಗಿನ ಮೈತ್ರಿಯನ್ನು ತಳ್ಳಿಹಾಕಿತ್ತು. ಜೂನ್‌ನಲ್ಲಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು “ಮಮತಾ ಬ್ಯಾನರ್ಜಿ ಮತ್ತು ಸಿಪಿಎಂ ಕೈ ಜೋಡಿಸುವುದಿಲ್ಲ, ಬಿಜೆಪಿ ಮತ್ತು ಟಿಎಂಸಿ ವಿರುದ್ಧ ಹೋರಾಡಲು ಬಂಗಾಳದಲ್ಲಿ ಎಡ ಮತ್ತು ಕಾಂಗ್ರೆಸ್ ಜೊತೆಗೆ ಜಾತ್ಯತೀತ ಪಕ್ಷಗಳು ಇರುತ್ತವೆ ಎಂದಿದ್ದಾರೆ.
ಒಂದು ವಾರದ ಹಿಂದೆ ತೃಣಮೂಲ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ನಡೆದಿದ್ದು ತಮ್ಮ ಪಕ್ಷವು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಚುನಾವಣೆಯ ನಂತರ ಮೈತ್ರಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಘೋಷಿಸಿದ್ದರು.
ತೃಣಮೂಲ ಕಾಂಗ್ರೆಸ್‌ನ ಕಠಿಣ ಚೌಕಾಶಿ ಮತ್ತು ಅದರ ರಾಜ್ಯ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರ ಹೇಳಿಕೆಗಳಿಂದ ಮಮತಾ ಬ್ಯಾನರ್ಜಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ, ಕಾಂಗ್ರೆಸ್‌ಗೆ ನೀಡಲಾಗುತ್ತಿರುವ ಎರಡು ಸ್ಥಾನಗಳು ಹೇಗಾದರೂ ಪಕ್ಷದ ಭದ್ರಕೋಟೆ ಎಂದು ವಾದಿಸಿದ ಚೌಧರಿ, ಮತ್ತು ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆಗಳನ್ನು ಗೆಲ್ಲಲು ಸಜ್ಜಾಗಿದೆ ಎಂದು ಹೇಳಿದರು. ತೃಣಮೂಲ ನಾಯಕಿ ಮೇಲೆ ವಾಗ್ದಾಳಿ ಮಾಡಿದ ಚೌಧರಿ, ಮಮತಾ “ಅವಕಾಶವಾದಿ” ನಾಯಕಿ ಎಂದು ಕರೆದಿದ್ದರು.
ಮಮತಾ ಬ್ಯಾನರ್ಜಿ ಅವರ ಆಕ್ರೋಶದ ನಂತರ, ಕಾಂಗ್ರೆಸ್ ನಾಯಕತ್ವವು ತ್ವರಿತವಾಗಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು ಮಮತಾ ಬ್ಯಾನರ್ಜಿ ಇಲ್ಲದೆ ಇಂಡಿಯಾ ಬಣವನ್ನು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ರಾಹುಲ್ ಗಾಂಧಿಯ ಭಾರತ್ ಜೋಡೋ ನ್ಯಾಯ್ ಯಾತ್ರೆ ಹೋದಲ್ಲೆಲ್ಲಾ ಮಮತಾ ಬ್ಯಾನರ್ಜಿ ಪಾದಯಾತ್ರೆ
ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆಗಿನ ಹಗ್ಗಜಗ್ಗಾಟದಲ್ಲಿರುವ ಪ್ರಾದೇಶಿಕ ಶಕ್ತಿಗಳಲ್ಲಿ ತೃಣಮೂಲ ಕೂಡ ಒಂದು. ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯದ ಎಲ್ಲಾ 13 ಲೋಕಸಭಾ ಸ್ಥಾನಗಳಿಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಸೀಟು ಹಂಚಿಕೆ ಮಾತುಕತೆ ನಡುವೆ 16 ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಏತನ್ಮಧ್ಯೆ, ಯಾದವ್ ತಾನು ಪಕ್ಷಕ್ಕೆ ಉತ್ತಮವಾದದ್ದನ್ನು ಮಾಡುತ್ತಿದ್ದೇನೆ, ಅದಕ್ಕೆ ಕಾಂಗ್ರೆಸ್ ಅನುಮತಿ ಅಗತ್ಯವಿಲ್ಲ ಎಂದು ಒತ್ತಿ ಹೇಳಿದರು.
ಇಂಡಿಯಾ ಮೈತ್ರಿಕೂಟದಿಂದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ನಿರ್ಗಮನ ಮತ್ತು ಮೈತ್ರಿಯನ್ನು ಹೈಜಾಕ್ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಅದರ ಆರೋಪವು ಬಿಜೆಪಿ ವಿರುದ್ಧದ ದೊಡ್ಡ ಹೋರಾಟಕ್ಕೆ ತಯಾರಿ ನಡೆಸುತ್ತಿರುವಾಗ ಹಳೆಯ ಪಕ್ಷಕ್ಕೆ ಹೊಡೆತ ನೀಡಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ