World Elephant Day 2021: ಇಂದು ವಿಶ್ವ ಆನೆಗಳ ದಿನ..: ಹೇಗೆ ಶುರುವಾಯ್ತು ಗಜರಾಜನ ದಿನಾಚರಣೆ? ಇಲ್ಲಿದೆ ಮಾಹಿತಿ
ಆನೆಗಳು ಸಹಜ ಜೀವನ ನಡೆಸಲು ಮನುಷ್ಯರು ಅನುವು ಮಾಡಿಕೊಡಬೇಕು. ಆ ಪ್ರಾಣಿಗಳಿಗೆ ಅಗತ್ಯವಿರುವ ಪ್ರದೇಶ, ಸುರಕ್ಷತೆಯನ್ನು ಒದಗಿಸಿಕೊಡಬೇಕು. ಅವುಗಳಿಗೂ ಉತ್ತಮ ಜೀವನ ನಡೆಸುವ ಹಕ್ಕು ಪ್ರಕೃತಿ ಕೊಟ್ಟಿದೆ.
ಆನೆ (Elephant )..ಈ ಪ್ರಾಣಿ ಸದಾ ಒಂದು ಅಚ್ಚರಿ. ಅದರ ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಬೃಹದಾಕಾರದ ಶರೀರ..ಘೀಳಿಡುವ ಶೈಲಿಗಳಿಂದ ಸದಾ ವಿಭಿನ್ನವಾಗಿ ನಿಲ್ಲುವ ಪ್ರಾಣಿ ಇದು. ಅದು ಮುದ್ದೂ ಹೌದು..ಭಯವನ್ನೂ ಹುಟ್ಟಿಸಬಲ್ಲದು. ಗಜರಾಜನೆಂದೇ ಕರೆಯಲ್ಪಡುವ ಆನೆಗೆ ಒಂದು ಗತ್ತಿದೆ. ಅಂಥ ಆನೆಗಾಗಿ ಒಂದು ದಿನವನ್ನೂ ಕೂಡ ಆಚರಿಸಲಾಗುತ್ತದೆ. ಇಡೀ ವಿಶ್ವದಾದ್ಯಂತ ಪ್ರತಿವರ್ಷ ಆಗಸ್ಟ್ 12ರಂದು ಆನೆಗಳ ದಿನ(World Elephant Day 2021)ವನ್ನಾಗಿ ಆಚರಿಸಲಾಗುತ್ತದೆ. ಈ ವಿಶ್ವ ಆನೆಗಳ ದಿನಾಚರಣೆ (World Elephant Day 2021) ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್ 12ರಂದು. ಅದರಲ್ಲೂ ಏಷ್ಯಿನ್ ಮತ್ತು ಆಫ್ರಿಕನ್ ಆನೆಗಳಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿ ತೋರಿಸಲು, ಅದರ ಬಗ್ಗೆ ಅರಿವು ಮೂಡಿಸಲು ಆನೆಗಳ ದಿನಾಚರಣೆ ಪ್ರಾರಂಭಿಸಲಾಯಿತು.
ಅಂದರೆ ಆಫ್ರಿಕನ್ ಮತ್ತು ಏಷ್ಯನ್ ಆನೆಗಳನ್ನು ಬೇಟೆಯಾಡುವುದು ಹೆಚ್ಚಾಯಿತು. ಹಾಗೇ, ಅವುಗಳ ಸಹಜ ನೆಲೆಗೆ ದಕ್ಕೆ ಬಂದಿತು. ಮಾನವರೊಂದಿಗೆ ಆನೆಗಳ ಸಂಘರ್ಷ ಹೆಚ್ಚಾಯಿತು. ವಿವಿಧ ಕಾರಣಗಳಿಗಾಗಿ ಆನೆಗಳನ್ನು ಸೆರೆಹಿಡಿಯುವ ಪ್ರವೃತ್ತಿ ಹೆಚ್ಚಾಯಿತು. ಹೀಗೆ ಆನೆಗಳಿಗೆ ಒದಗಿದ ದುರ್ದೆಸೆಯನ್ನು ಕಡಿಮೆಮಾಡಿ, ಅವುಗಳಿಗೂ ಸುರಕ್ಷಿತ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂಬ ಅರಿವು ಮೂಡಿಸಲು ಈ ವಿಶ್ವ ಆನೆಗಳ ದಿನದ ಆಚರಣೆ ಶುರುವಾಯಿತು.
ಇತಿಹಾಸ ಆಗಲೇ ಹೇಳಿದಂತೆ ವಿಶ್ವ ಆನೆಗಳ ದಿನಾಚರಣೆ ಮೊದಲು ಪ್ರಾರಂಭವಾಗಿದ್ದು 2012ರ ಆಗಸ್ಟ್ 12ರಂದು. ಕೆನಡಿಯನ್ ಸಿನಿಮಾ ಮೇಕರ್ ಪ್ಯಾಟ್ರಿಕಾ ಸಿಮ್ ಮತ್ತು ಥೈಲ್ಯಾಂಡ್ ಮೂಲದ ಆನೆಗಳ ಮರು ಪರಿಚಯ ಪ್ರತಿಷ್ಠಾನ ಜತೆಗೂಡಿ ಆನೆಗಳ ದಿನ ಆಚರಣೆಗೆ ಮುಂದಡಿ ಇಟ್ಟರು. ಅದು ಕೇವಲ ದಿನವಾಗಿರಲಿಲ್ಲ..ಅದೊಂದು ಚಳವಳಿಯಾಗಿ ಬದಲಾಗಿತ್ತು. ವಿಶ್ವ ಆನೆಗಳ ದಿನ ಪ್ಯಾಟ್ರಿಕಾ ಸಿಮ್ ನೇತೃತ್ವದಲ್ಲೇ ಶುರುವಾಯಿತು. ಆಕೆ ಸ್ಥಾಪಿಸಿದ ವಿಶ್ವ ಆನೆಗಳ ಸಮಾಜ (World Elephant Society) ಈ ವಿಶ್ವ ಆನೆಗಳ ದಿನವನ್ನು ನಿರ್ವಹಣೆ ಮಾಡಿತ್ತು. ಈ ಸಂಸ್ಥೆ ಹಲವು ವರ್ಷಗಳಿಂದಲೂ ಆನೆಗಳ ಸುರಕ್ಷತೆ, ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನೇ ಮಾಡಿಕೊಂಡು ಬಂದಿದೆ.
ಮಹತ್ವವೇನು? ಆನೆಗಳು ಸಹಜ ಜೀವನ ನಡೆಸಲು ಮನುಷ್ಯರು ಅನುವು ಮಾಡಿಕೊಡಬೇಕು. ಆ ಪ್ರಾಣಿಗಳಿಗೆ ಅಗತ್ಯವಿರುವ ಪ್ರದೇಶ, ಸುರಕ್ಷತೆಯನ್ನು ಒದಗಿಸಿಕೊಡಬೇಕು. ಅವುಗಳಿಗೂ ಉತ್ತಮ ಜೀವನ ನಡೆಸುವ ಹಕ್ಕು ಪ್ರಕೃತಿ ಕೊಟ್ಟಿದೆ. ಬೇಟೆಯಾಡುವುದು..ಸೆರೆ ಹಿಡಿಯವಂಥ ಕೆಲಸಗಳನ್ನು ಮಾಡಬಾರದು ಎಂಬುದನ್ನು ಸಾರುವುದೇ ಈ ವಿಶ್ವ ಆನೆಗಳ ದಿನದ ಪ್ರಮುಖ ಉದ್ದೇಶ ಮತ್ತು ಇದೇ ಕಾರಣಕ್ಕೆ ಆಗಸ್ಟ್ 12 ಆನೆಗಳ ದಿನವಾಗಿ ಮಹತ್ವ ಪಡೆದುಕೊಂಡಿದೆ. ಈ ಬಗ್ಗೆ ಕೆನಡಿಯನ್ ಸಿನಿಮಾ ಮೇಕರ್ ಸಿಮ್ ತಮ್ಮ ವೆಬ್ಸೈಟ್ನಲ್ಲಿ ಬರೆದುಕೊಂಡಿದ್ದಾರೆ.
ದಂತ ಮತ್ತು ಇತರ ಕಾರಣಕ್ಕಾಗಿ ಆನೆಗಳ ಬೇಟೆಯನ್ನು ನಿಲ್ಲಿಸಬೇಕು. ಕಾಡಾನೆಗಳ ಆವಾಸಗಳನ್ನು ರಕ್ಷಿಸಬೇಕು. ಅಲ್ಲಿ ಮನುಷ್ಯ ಹಸ್ತಕ್ಷೇಪ ಮಾಡಬಾರದು. ನಮ್ಮ ದೇಶೀಯ ಆನೆಗಳ ಸುರಕ್ಷತೆಗಾಗಿ ಮತ್ತು ಅವು ಮುಕ್ತವಾಗಿ ಬದುಕಲು ಅಭಯಾರಣ್ಯಗಳ ವ್ಯವಸ್ಥೆ ಇನ್ನಷ್ಟು ಹೆಚ್ಚಬೇಕು. ಆನೆಗಳ ಒಳಿತು ಕಾಯಲು ಹೆಚ್ಚೆಚ್ಚು ಸಂಘಟನೆಗಳು ಹುಟ್ಟಬೇಕು. ಈ ಎಲ್ಲ ಅರಿವು ಮೂಡಿಸಲೆಂದೇ ವಿಶ್ವ ಆನೆಗಳ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಅಪಾಯದಲ್ಲಿ ಆನೆಗಳು ಆನೆಗಳು ಅಪಾಯದಲ್ಲಿ ಇರುವುದು ಅಕ್ಷರಶಃ ಸತ್ಯ. ಮನುಷ್ಯ ಪ್ರಕೃತಿಯಲ್ಲಿರುವ ಪ್ರತಿ ಜೀವಿ, ವಸ್ತುಗಳ ಮೇಲೆಯೂ ದಾಳಿ ಮಾಡುತ್ತಿದ್ದಾನೆ. ಆನೆ ದಂತದಿಂದ ದುಡ್ಡು ಮಾಡಬಹುದು ಎಂದು ಅರಿತ ಮನುಜ ಅದಕ್ಕಾಗಿ ಆನೆಗಳನ್ನೇ ಹತ್ಯೆ ಮಾಡುತ್ತಿದ್ದಾನೆ. ಇನ್ನು ಅವುಗಳನ್ನು ಸೆರೆ ಹಿಡಿದು ಸರ್ಕಸ್ ಕಂಪನಿಗಳಲ್ಲಿ ದುಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಈಗೀಗಂತೂ ಆನೆಗಳು ಅರಣ್ಯದಲ್ಲಿ ತಮ್ಮ ವಾಸಸ್ಥಾನಗಳನ್ನು ಕಳೆದುಕೊಂಡು ಕಾಡಂಚಿನ ಊರಿಗೆ ದಂಡುದಂಡಾಗಿ ಬರಲು ಶುರು ಮಾಡಿವೆ. ಅದೆಷ್ಟೋ ಬೆಳೆಗಳನ್ನೂ ನಾಶ ಮಾಡುತ್ತಿವೆ. ಮನುಷ್ಯರು ಬಲಿಯಾಗುವ ಘಟನೆಗಳೂ ಹೆಚ್ಚುತ್ತಿದೆ.
ಇದನ್ನೂ ಓದಿ: ಕೊಪ್ಪಳ: 17 ಲಕ್ಷ ಹಣ, ಬೈಕ್ ಬಿಟ್ಟು ಪರಾರಿಯಾಗಿದ್ದ ಅಪರಿಚಿತರ ಗುರುತು ಪತ್ತೆ, ಅವರ ಹಿಂದಿತ್ತು ನಕಲಿ ಚಿನ್ನದ ಮಾಫಿಯಾ!
ಒಲಂಪಿಕ್ಸ್ನಲ್ಲಿ ಕಂಚಿನ ಪದಕ.. ತಾಯಿಯ ಮಡಿಲಲ್ಲಿ ನೆಮ್ಮದಿಯ ನಿದ್ರೆ! ನೆಟ್ಟಿಗರ ಹೃದಯ ಗೆದ್ದ ಮನ್ಪ್ರೀತ್ ಸಿಂಗ್ ಫೋಟೋ