ವಿಚಾರಣೆ ವಿಳಂಬದ ಕಾರಣಕ್ಕೆ ಕಸಬ್‌ನಂತಹ ಉಗ್ರನಿಗೂ ಜಾಮೀನು ನೀಡುತ್ತೀರಾ? ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಪ್ರಶ್ನೆ

ಸುಪ್ರೀಂ ಕೋರ್ಟ್‌ಗೆ ಪ್ರಶ್ನಿಸಿರುವ ಕೇಂದ್ರ ಸರ್ಕಾರ ಯುಎಪಿಎ (UAPA) ಕಾಯ್ದೆಯಡಿ ಜಾಮೀನು ನೀಡುವುದಕ್ಕೆ ಸಂಬಂಧಿಸಿದ ಹಳೆಯ ತೀರ್ಪನ್ನು ಮರುಪರಿಶೀಲಿಸಲು ನ್ಯಾಯಪೀಠಕ್ಕೆ ಕೋರಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಪ್ರಶ್ನೆಯ ಕುರಿತು ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠಗಳಿಂದ ಬಂದ ಆದೇಶಗಳ ಹಿನ್ನೆಲೆಯಲ್ಲಿ ಈ ವಿಷಯವನ್ನು ಉನ್ನತ ನ್ಯಾಯಪೀಠಕ್ಕೆ ಉಲ್ಲೇಖಿಸುವಂತೆ ಕೇಂದ್ರ ಸರ್ಕಾರ ಬಲವಾಗಿ ಒತ್ತಾಯಿಸಿದೆ.

ವಿಚಾರಣೆ ವಿಳಂಬದ ಕಾರಣಕ್ಕೆ ಕಸಬ್‌ನಂತಹ ಉಗ್ರನಿಗೂ ಜಾಮೀನು ನೀಡುತ್ತೀರಾ? ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಪ್ರಶ್ನೆ
Kasab
Image Credit source: x

Updated on: May 22, 2026 | 4:25 PM

ನವದೆಹಲಿ, ಮೇ 22: ಕೇಂದ್ರ ಸರ್ಕಾರ ಇಂದು ಸುಪ್ರೀಂ ಕೋರ್ಟ್‌ನಲ್ಲಿ (Supreme Court) ‘ಯುಎಪಿಎ’ (UAPA – ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ದಾಖಲಾಗುವ ಭಯೋತ್ಪಾದನಾ ಪ್ರಕರಣಗಳ ತನಿಖೆ ಮತ್ತು ಜಾಮೀನು ನಿಯಮಗಳ ಕುರಿತು ಕಳವಳ ವ್ಯಕ್ತಪಡಿಸಿದೆ. ವಿಚಾರಣೆ ವಿಳಂಬವಾಗುತ್ತಿದೆ ಎಂಬ ಒಂದೇ ಒಂದು ಕಾರಣಕ್ಕೆ ಗಂಭೀರ ಸ್ವರೂಪದ ಉಗ್ರಗಾಮಿ ಪ್ರಕರಣಗಳಲ್ಲಿ ಸಿಲುಕಿರುವ ಆರೋಪಿಗಳಿಗೆ ಸುಲಭವಾಗಿ ಜಾಮೀನು ನೀಡುವುದು ದೇಶದ ಭದ್ರತೆಗೆ ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಉದಾಹರಣೆ ನೀಡಿದ ಕೇಂದ್ರ ಸರ್ಕಾರದ ಪರ ವಕೀಲರು, “ಒಂದು ವೇಳೆ ಇದೇ ತರ್ಕವನ್ನು ಬಳಸುವುದಾದರೆ ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನ ವಿಚಾರಣೆ ವಿಳಂಬವಾಗಿದ್ದರೆ ಆತನಿಗೂ ಜಾಮೀನು ನೀಡಬೇಕಾಗುತ್ತಿತ್ತೇ?” ಎಂದು ಪ್ರಶ್ನಿಸಿದ್ದಾರೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ ಬಿ ವರಾಲೆ ಅವರ ಪೀಠವು 2020 ರ ದೆಹಲಿ ಗಲಭೆ ಪ್ರಕರಣದ ಆರೋಪಿಗಳಾದ ತಸ್ಲೀಮ್ ಅಹ್ಮದ್ ಮತ್ತು ಖಾಲಿದ್ ಸೈಫಿ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆ ನಡೆಸುತ್ತಿತ್ತು. ಅವರ ಜಾಮೀನು ಅರ್ಜಿ ಮತ್ತು ಉಲ್ಲೇಖದ ಪ್ರಶ್ನೆಯ ಮೇಲಿನ ಆದೇಶವನ್ನು ಕಾಯ್ದಿರಿಸಿದ ಪೀಠವು, ಆ ದಿನದ ನಂತರ ಅಥವಾ ಮೇ 25ರಂದು ಆದೇಶವನ್ನು ಪ್ರಕಟಿಸುವುದಾಗಿ ಹೇಳಿದೆ.

ಇದನ್ನೂ ಓದಿ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ: ಏಪ್ರಿಲ್ 7ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಗಳ ವಿಚಾರಣೆ

2021ರ ಪ್ರಸಿದ್ಧ ‘ಯೂಸುಫ್ ಅಲಿ ಉರ್ಫ್ ನಜೀಬ್’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿತ್ತು. ಅದರ ಪ್ರಕಾರ, ಯುಎಪಿಎ ಕಾಯ್ದೆಯಡಿ ಜಾಮೀನು ನೀಡುವುದಕ್ಕೆ ಕಠಿಣ ನಿಯಮಗಳಿದ್ದರೂ ಒಬ್ಬ ಆರೋಪಿಯ ವಿಚಾರಣೆ ದೀರ್ಘಕಾಲದವರೆಗೆ ವಿಳಂಬವಾದರೆ ಮತ್ತು ಆತ ದೀರ್ಘಕಾಲ ಜೈಲಿನಲ್ಲಿದ್ದರೆ, ಸಂವಿಧಾನದ ವಿಧಿ 21ರ ಅಡಿಯಲ್ಲಿ ಸಿಗುವ ‘ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ’ ಹಕ್ಕನ್ನು ಆಧರಿಸಿ ನ್ಯಾಯಾಲಯಗಳು ಆತನಿಗೆ ಜಾಮೀನು ನೀಡಬಹುದು ಎಂದು ಹೇಳಲಾಗಿತ್ತು.

ಕೇಂದ್ರ ಸರ್ಕಾರವು ಈ ತೀರ್ಪನ್ನು ಪ್ರಶ್ನಿಸಿದೆ. ಯುಎಪಿಎ ಕಾಯ್ದೆಯು ದೇಶದ ಸಾರ್ವಭೌಮತ್ವ ಮತ್ತು ಸುರಕ್ಷತೆಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಸಾಮಾನ್ಯ ಕಾನೂನುಗಳಂತೆ ನೋಡಬಾರದು. ಹಾಗಾಗಿ, ಈ ತೀರ್ಪನ್ನು ಮರುಪರಿಶೀಲಿಸಲು 5 ಅಥವಾ ಅದಕ್ಕಿಂತ ಹೆಚ್ಚು ನ್ಯಾಯಾಧೀಶರ ಉನ್ನತ ಪೀಠಕ್ಕೆ ಈ ವಿಷಯವನ್ನು ವರ್ಗಾಯಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

ಕೇಂದ್ರ ಸರ್ಕಾರದ ಪ್ರಮುಖ ವಾದಗಳೆಂದರೆ,

ದೇಶದ ಭದ್ರತೆ ಮೊದಲು:

ಭಯೋತ್ಪಾದನಾ ಪ್ರಕರಣಗಳಲ್ಲಿ ಸಾಕ್ಷ್ಯಗಳ ಸಂಗ್ರಹಣೆ, ಅಂತಾರಾಷ್ಟ್ರೀಯ ಲಿಂಕ್‌ಗಳ ತನಿಖೆ ಮತ್ತು ನೂರಾರು ಸಾಕ್ಷಿಗಳ ವಿಚಾರಣೆ ಇರುವುದರಿಂದ ಸಹಜವಾಗಿಯೇ ವಿಚಾರಣೆ ವಿಳಂಬವಾಗುತ್ತದೆ. ಅದನ್ನು ನೆಪವಾಗಿಟ್ಟುಕೊಂಡು ಉಗ್ರರಿಗೆ ನಿಯಮಗಳ ಸಡಿಲಿಕೆ ನೀಡಬಾರದು.

ಇದನ್ನೂ ಓದಿ: Supreme Court: ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಲೈಂಗಿಕ ಶಿಕ್ಷಣ ನೀಡಬೇಕು; ಸುಪ್ರೀಂ ಕೋರ್ಟ್‌ ಆದೇಶ

ಕಾನೂನಿನ ಕಠಿಣತೆ:

ಯುಎಪಿಎ ಕಾಯ್ದೆಯ ಮೂಲ ಉದ್ದೇಶವೇ ದೇಶವಿರೋಧಿ ಕೃತ್ಯಗಳನ್ನು ತಡೆಯುವುದಾಗಿದೆ. ತನಿಖೆ ತಡವಾಗುತ್ತಿದೆ ಎಂಬ ಕಾರಣಕ್ಕೆ ಆರೋಪಿಗಳು ಹೊರಬಂದರೆ ಸಾಕ್ಷ್ಯ ನಾಶಪಡಿಸುವ ಅಥವಾ ಮತ್ತೆ ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಇರುತ್ತದೆ.

ಸುಪ್ರೀಂ ಕೋರ್ಟ್ ಈ ಗಂಭೀರ ವಿಷಯವನ್ನು ಆಲಿಸಿದ್ದು, ಯುಎಪಿಎ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಭದ್ರತೆ ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವ ಅಗತ್ಯವನ್ನು ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರದ ಈ ಮನವಿಯ ಕುರಿತು ಸುಪ್ರೀಂ ಕೋರ್ಟ್ ಮುಂಬರುವ ದಿನಗಳಲ್ಲಿ ತನ್ನ ಅಂತಿಮ ತೀರ್ಮಾನವನ್ನು ಪ್ರಕಟಿಸಲಿದೆ. ವಿವಾದಾತ್ಮಕ ಕಾಯ್ದೆಯಡಿಯ ಜಾಮೀನು ನಿಯಮಗಳು ಇನ್ಮುಂದೆ ಮತ್ತಷ್ಟು ಕಠಿಣವಾಗಲಿವೆಯೇ ಇಲ್ಲವೇ ಎಂಬುದನ್ನು ಈ ತೀರ್ಪು ನಿರ್ಧರಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us