National Defence: ಬಸವನಹುಳುವನ್ನು ನಾಚಿಸುತ್ತಿದೆ ಪ್ರಗತಿಯವೇಗ: ಗುಬ್ಬಿಯಲ್ಲಿ ಎಚ್ಎಎಲ್ ಘಟಕ ಆರಂಭವಾಗುವುದು ಎಂದು?
ಮೊದಲ ಹೆಲಿಕಾಪ್ಟರ್ ಅನ್ನು 2018ರ ವೇಳೆಗೆ ಇಲ್ಲಿ ತಯಾರಿಸಲಾಗುವುದು ಎಂದು ಊಹಿಸಲಾಗಿತ್ತು. ಆದರೆ ಪ್ರಗತಿಯ ವೇಗವು ಬಸವನಹುಳುವಿನ ಅವತಾರ ತಾಳಿದ್ದರಿಂದ, ಈ ಗುರಿ ಕೇವಲ ಕಾಗದಗಳಲ್ಲಿ ಉಳಿದಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್‌ನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (Hindustan Aeronautics Limited – HAL) ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಸ್ಥಾಪಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2016ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. 610 ಎಕರೆ ಜಾಗದಲ್ಲಿ ಸ್ಥಾಪನೆಯಾಗುತ್ತಿರುವ ಈ ಹೊಸ ಹೆಲಿಕಾಪ್ಟರ್ ವಿಭಾಗವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕನಿಷ್ಠ 4,000 ಕುಟುಂಬಗಳಿಗೆ ಉದ್ಯೋಗವನ್ನು ನೀಡುತ್ತದೆ ಎಂದು ಘೋಷಿಸಲಾಯಿತು. ಮೊದಲ ಹೆಲಿಕಾಪ್ಟರ್ ಅನ್ನು 2018ರ ವೇಳೆಗೆ ಇಲ್ಲಿ ತಯಾರಿಸಲಾಗುವುದು ಎಂದು ಊಹಿಸಲಾಗಿತ್ತು. ಆದರೆ ಪ್ರಗತಿಯ ವೇಗವು ಬಸವನಹುಳುವಿನ ಅವತಾರ ತಾಳಿದ್ದರಿಂದ, ಇದು ಕೇವಲ ಕಾಗದಗಳಲ್ಲಿ ಉಳಿದಿದೆ. ಇಲ್ಲಿ ಉತ್ಪಾದನೆಯನ್ನು ಪ್ರಾರಂಭಿಸುವ ಗಡುವನ್ನು ಈಗ ಮಾರ್ಚ್ 2022ಕ್ಕೆ ವಿಸ್ತರಿಸಲಾಗಿದೆ. ಎಚ್ಎಎಲ್ ಗುಬ್ಬಿ ಘಟಕದಲ್ಲಿ ಹೆಲಿಕಾಪ್ಟರ್ ಉತ್ಪಾದನೆ ಏಕೆ ತಡವಾಗುತ್ತಿದೆ ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರ ಹುಡುಕಲು ಯತ್ನಿಸಿದ್ದಾರೆ ರಕ್ಷಣಾ ವಿದ್ಯಮಾನಗಳ ವಿಶ್ಲೇಷಕ ಗಿರೀಶ್ ಲಿಂಗಣ್ಣ.
ಭಾರತ ಮತ್ತು ರಷ್ಯಾ ದೇಶಗಳು ಜಂಟಿಯಾಗಿ ಉತ್ಪಾದಿಸಲು ಉದ್ದೇಶಿಸಿರುವ KA 226T ಅವಳಿ ಎಂಜಿನ್ ಹೆಲಿಕಾಪ್ಟರ್ ಮತ್ತು 3 ಟನ್ ತೂಕದ ಹೊಸ ಪೀಳಿಗೆಯ ಹಗುರ ಹೆಲಿಕಾಪ್ಟರ್ (Light Utility Helicopter – LUH) ತಯಾರಿಸಬೇಕೆಂಬ ಯೋಜನೆ ಇದು. ದೇಶದ ಭದ್ರತೆ ಮತ್ತು ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಪ್ರಮುಖ ಪಾತ್ರ ನಿರ್ವಹಿಸುವ ಈ ಯೋಜನೆ ಕುಂಟುತ್ತಾ ಸಾಗಲು ಏನು ಕಾರಣ ಎಂಬುದು ನಿಗೂಢವಾಗಿಯೇ ಇದೆ. ಕರ್ನಾಟಕದಲ್ಲಿ ಕೈಗಾರಿಕಾ ಸ್ಥಾಪನೆಯನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶಕ್ಕೂ ಗುಬ್ಬಿ ಎಚ್ಎಎಲ್ ಘಟಕವು ಪೂರಕವಾಗಿತ್ತು. ಆದರೆ ಅಭಿವೃದ್ಧಿ, ಉದ್ಯೋಗ ಸೃಷ್ಟಿಯ ಜತೆಗೆ, ಸ್ಥಳೀಯ ಮಟ್ಟದಲ್ಲಿ ಕೌಶಲಪೂರ್ಣ ಕಾರ್ಮಿಕ ಮತ್ತು ತಾಂತ್ರಿಕ ಪರಿಣತಿಯ ಬಳಕೆಯನ್ನು ಉತ್ತೇಜಿಸುವ ಆಶಯವನ್ನೂ ಇದು ಹೊಂದಿತ್ತು. ಇದು ಸಾಧ್ಯವಾದರೆ ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುತ್ತದೆ ಎಂಬ ನಿರೀಕ್ಷೆಯೂ ಇತ್ತು.
ಗುಬ್ಬಿ ಘಟಕವು ವರ್ಷದಲ್ಲಿ 30 ಹೆಲಿಕಾಪ್ಟರ್‌ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. 175 ಹಗುರ ಹೆಲಿಕಾಪ್ಟರ್ ಉತ್ಪಾದನೆಗೆ ಆದೇಶವನ್ನು ಎಚ್ಎಎಲ್ ನಿರೀಕ್ಷಿಸುತ್ತಿದೆ. ಇದನ್ನು ಬೆಂಗಳೂರು ಮತ್ತು ತುಮಕೂರು ವಿಭಾಗಗಳಿಂದ ಏಕಕಾಲದಲ್ಲಿ ಉತ್ಪಾದಿಸುವ ಯೋಜನೆ ರೂಪುಗೊಂಡಿದೆ. ಇತ್ತೀಚೆಗಷ್ಟೇ ರಕ್ಷಣಾ ಸಚಿವಾಲಯವು 12 ಹಗುರ ಹೆಲಿಕಾಪ್ಟರ್ ಖರೀದಿಸಲು ಆದೇಶ ನೀಡಿದೆ. ಒಟ್ಟು 500 ಸುಧಾರಿತ ಲಘು ಹೆಲಿಕಾಪ್ಟರ್‌ಗಳನ್ನು ತಯಾರಿಸಲು ರಷ್ಯಾದೊಂದಿಗೆ ಸಹಯೋಗ (Kamov-226T) ವಹಿಸಲು ಭಾರತವು ಉತ್ಸುಕವಾಗಿದೆ.
ಯೋಜನೆಯ ಗುರಿ ದೊಡ್ಡದಿದ್ದರೂ ಅಡೆತಡೆಗಳು ಹಲವು 1) ಎಂಜಿನಿಯರಿಂಗ್ ಕಾಲೇಜುಗಳು ನೀಡುವ ಶಿಕ್ಷಣ ಅಥವಾ ಕೋರ್ಸ್ ಅವರನ್ನು ಕೈಗಾರಿಕೆಗಳಿಗಾಗಿ ಸಿದ್ಧಗೊಳಿಸುತ್ತಿದ್ದರೂ ವಿಶೇಷ ತರಬೇತಿಯು ಇನ್ನೂ ದೂರದ ಕನಸಾಗಿದೆ. ಏರೋಸ್ಪೇಸ್ ಕ್ಷೇತ್ರವು ಹೊಸ ತಂತ್ರಜ್ಞಾನದ ಹರಿವಿನೊಂದಿಗೆ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಈ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಮೀಸಲಾದ ಕೇಂದ್ರವು ಸದ್ಯದ ಅಗತ್ಯವಾಗಿದೆ.
2) ಪೂರಕ ಘಟಕಗಳೊಂದಿಗೆ ನಿರಂತರವಾಗಿ ಬೆಂಬಲಿಸಬೇಕಾದ ಉದ್ಯಮವು ಸುತ್ತಮುತ್ತಲಿನ ಅಗತ್ಯವಾಗಿದೆ. ಜನರಲ್ಲಿ ಈ ಬಗ್ಗೆ ಸ್ವಲ್ಪ ತಿಳಿವಳಿಕೆ ಇದೆ ಅಥವಾ ಅಂತಹ ಘಟಕಗಳು ಬೆರಳೆಣಿಕೆ ಸಂಖ್ಯೆಯಲ್ಲಿವೆ. ಹೀಗಾಗಿ, ಗುಬ್ಬಿ ಘಟಕವು ಬೆಂಗಳೂರಿನಂತಹ ಮಹಾನಗರಗಳನ್ನು ಅವಲಂಬಿಸಬೇಕಾಗುತ್ತದೆ.
3) ಬೆಂಗಳೂರು ನಗರದ ಕೈಗಾರಿಕೆಗಳ ದಟ್ಟಣೆಯನ್ನು ಕಡಿಮೆ ಮಾಡಬೇಕು ಎಂಬ ಪ್ರಯತ್ನಗಳಿಗೆ ವಿವಿಧ ಕಾರಣಗಳಿಂದ ಫಲ ಸಿಗುತ್ತಿಲ್ಲ. ತುಮಕೂರು ನಗರವು ಬೆಂಗಳೂರಿನಿಂದ ಕೇವಲ 70 ಕಿಮೀ ದೂರದಲ್ಲಿದೆ. ರಸ್ತೆಗಳು ಮತ್ತು ರೈಲುಮಾರ್ಗಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರೂ ನೀರಿನ ಸಮಸ್ಯೆ ಸಾಕಷ್ಟಿದೆ. ತುಮಕೂರು ಜಿಲ್ಲೆಯಲ್ಲಿ ‘ಕೈಗಾರಿಕೆಗಳಿಗೆ ಸಾಕಷ್ಟು ನೀರು’ ಇಲ್ಲ.
ತುಮಕೂರು ನಗರಕ್ಕೆ ಸ್ಮಾರ್ಟ್ ಸಿಟಿ ಎಂಬ ಶ್ರೇಯ ಸಿಕ್ಕಿದೆ. ಆದರೆ ಅದರ ಬೆಳವಣಿಗೆಯು ಬೆಂಗಳೂರಿನ ವೇಗವನ್ನು ಅನುಸರಿಸಲು ವಿಫಲವಾಗಿದೆ. ಎಚ್ಎಲ್ನಲ್ಲಿ ಕೆಲಸ ಮಾಡುತ್ತಿರುವ, ಭಾರತದ ನಾನಾ ಭಾಗಗಳಿಂದ ಬಂದಿರುವ ಎಂಜಿನಿಯರ್‌ಗಳು ಮತ್ತು ಉದ್ಯೋಗಿಗಳಿಗೆ ಗುಬ್ಬಿ ಅಥವಾ ತುಮಕೂರಿಗೆ ಹೋಗುವ ಆಸಕ್ತಿಯಿಲ್ಲ. ಯಾವುದೇ ಪ್ರಮುಖ ನದಿಗಳಿಲ್ಲದ ತುಮಕೂರು, ತನ್ನ ಜಿಲ್ಲೆಯ ಜನರಿಗೆ ಕುಡಿಯುವ ನೀರು ಪೂರೈಸುವುದಕ್ಕೂ ಹೇಮಾವತಿ ಜಲಾಶಯದ ಮೇಲೆ ಅವಲಂಬಿತವಾಗಿದೆ.
ಇದನ್ನೂ ಓದಿ: National Defence: ತೇಜಸ್ ಮೇಲೆ ವಾಯುಪಡೆಯ ಭರವಸೆ, ಬದಿಗೆ ಸರಿಯುತ್ತಿದೆ ಮಿರಾಜ್ ವಿಮಾನಗಳ ಬಳಕೆ
ಕರ್ನಾಟಕವು ತುಮಕೂರು ಸೇರಿದಂತೆ ಐದು ಕೇಂದ್ರಗಳಲ್ಲಿ ಕೈಗಾರಿಕಾ ಸಮುಚ್ಚಯಗಳನ್ನು ಅಭಿವೃದ್ಧಿಪಡಿಸಲು ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ತರಲು ಆಶಿಸುತ್ತಿದೆ. ಉದ್ದೇಶ ಒಳ್ಳೆಯದೆ ಇರಬಹುದು. ಆದರೆ ಹೂಡಿಕೆಯನ್ನು ಆಹ್ವಾನಿಸಲು ರಾಜ್ಯವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ? ರಸ್ತೆಗಳು, ನೀರು ಮತ್ತು ಖಚಿತವಾದ ವಿದ್ಯುತ್ ಸರಬರಾಜು ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳು, ಹಾಗೆಯೇ ಏರೋಸ್ಪೇಸ್ ಉದ್ಯಮದಲ್ಲಿ ಛಾಪು ಮೂಡಿಸಲು ತರಬೇತಿ ಪಡೆದ ಮಾನವ ಸಂಪನ್ಮೂಲ ಕೊರತೆ ತುಮಕೂರು ಸೇರಿದಂತೆ ಇಡೀ ರಾಜ್ಯದಲ್ಲಿ ಕಾಣಿಸುತ್ತಿದೆ.
ವಿಶೇಷ ಆರ್ಥಿಕ ವಲಯ (Special Economic Zone – SEZ) ಅಥವಾ ಕೈಗಾರಿಕಾ ಪಾರ್ಕ್ ಅಭಿವೃದ್ಧಿಪಡಿಸುವುದು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಸಮಗ್ರ ಪ್ಯಾಕೇಜ್ನ ಭಾಗವೇ ಆಗಿರಬಹುದು. ಮೂಲಸೌಕರ್ಯ ಮತ್ತು ಸಹಾಯಕ ಘಟಕಗಳನ್ನು ಬೆಂಬಲಿಸಲು ಒಂದು ಸಮಗ್ರ ವಿಧಾನ ಅತ್ಯಗತ್ಯವಾಗಿದೆ. ಇಂಥ ವಿಧಾನಗಳನ್ನು ಅಭಿವೃದ್ಧಿಪಡಿಸಲು ಹಾಗೂ ತಕ್ಕ ಸಿದ್ಧತೆ ಮಾಡಿಕೊಳ್ಳಲು ಗಮನ ನೀಡದಿದ್ದರೆ ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ ಕೇವಲ ಘೋಷಣೆಯಾಗಿಯಷ್ಟೇ ಉಳಿಯುವ ಅಪಾಯವಿದೆ.
(ಲೇಖಕ ಗಿರೀಶ್ ಲಿಂಗಣ್ಣ ಎಡಿಡಿ ಎಂಜಿಯರಿಂಗ್ ಲಿಮಿಟೆಡ್‌ನ ನಿರ್ದೇಶಕರು. ವೈಮಾನಿಕ ಕ್ಷೇತ್ರದಲ್ಲಿ ಈ ಕಂಪನಿ ಸಕ್ರಿಯವಾಗಿದೆ)
ಇದನ್ನೂ ಓದಿ: National Defence: ಅರಬ್ಬಿ ಸಮುದ್ರ ಮತ್ತು ಪಾಕಿಸ್ತಾನದ ಸುಳ್ಳು: ಕರಾಚಿ ಸಮೀಪ ಭಾರತದ ಜಲಾಂತರ್ಗಾಮಿ ಸಂಚರಿಸಿದ್ದು ನಿಜವೇ? ಇದನ್ನೂ ಓದಿ: National Defence: ಸುಖೋಯ್ ಯುದ್ಧ ವಿಮಾನ: ಭಾರತೀಯ ವಾಯುಪಡೆಯ ಸುದೀರ್ಘ ಭರವಸೆ
ಎಚ್ಎಎಲ್ನ ಗುಬ್ಬಿ ಘಟಕ ಉದ್ಘಾಟನೆಯ ವಿಡಿಯೊ ಇಲ್ಲಿದೆ
Published On - 4:35 pm, Sun, 14 November 21