ಆತಿಥ್ಯಕ್ಕೆ ಐಎಎಸ್, ವಿಪಕ್ಷ ಶಾಸಕರ ಅಮಾನತು; ಕರ್ನಾಟಕ ಶಾಸಕಾಂಗ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯ್ತೇ ವಿದ್ಯಮಾನ?

ಎರಡು ರಾಷ್ಟ್ರೀಯ ಪಕ್ಷಗಳಿಗೆ ಶಾಸಕಾಂಗದ ಚರ್ಚೆಯ ಅವಶ್ಯಕತೆ ಮರೆತು ಹೋಗಿ, ಅಧಿವೇಶನ ಕೂಡ ಮುಂದಿನ ವರ್ಷದ ಚುನಾವಣೆಯ ಶಸ್ತ್ರಾಭ್ಯಾಸದ ಭಾಗವಾಗಿ ಕಂಡಿದ್ದರಿಂದ ಹಲವಾರು ದಾಖಲೆಗಳು ಮೊದಲ ಅಧಿವೇಶನದಲ್ಲಿ ಆಗಿದ್ದು ನಿಚ್ಚಳ. ಧರಣಿನಿರತ ಶಾಸಕರು ಎದುರಾಳಿ ಪಕ್ಷದ ಹುಳುಕನ್ನು ತೋರಿಸಿ ಜನರ ಬೆಂಬಲ ಗಳಿಸಲು ಏನೆಲ್ಲಾ ಚತುರತೆ ತೋರುತ್ತಿದ್ದಾರೆ ಮತ್ತು ಆಡಳಿತ ಪಕ್ಷ ಕೂಡ ಏನೆಲ್ಲ ಪಟ್ಟು ಹಾಕಬಹುದು ಎಂಬುದರ ಝಲಕ್ ನೋಡಲು ದೊರೆಯಿತು.

ಆತಿಥ್ಯಕ್ಕೆ ಐಎಎಸ್, ವಿಪಕ್ಷ ಶಾಸಕರ ಅಮಾನತು; ಕರ್ನಾಟಕ ಶಾಸಕಾಂಗ ಇತಿಹಾಸಕ್ಕೆ ಕಪ್ಪುಚುಕ್ಕೆಯಾಯ್ತೇ ವಿದ್ಯಮಾನ?
ವಿಧಾನಸಭೆ ಅಧಿವೇಶನದ ಸಂಗ್ರಹ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
|

Updated on:Jul 22, 2023 | 11:01 AM

ಸರ್ಕಾರವೊಂದು ಹೊಸದಾಗಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ಅಧಿವೇಶನದಲ್ಲಿಯೇ (Karnataka Assembly Session) ವಿರೋಧ ಪಕ್ಷದ ಶಾಸಕರನ್ನು ಅಮಾನತು ಮಾಡಿದ ಘಟನೆ ಕರ್ನಾಟಕದ ಶಾಸಕಾಂಗದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿಯಲಿದೆ. ಮೈಕ್ ಕಿತ್ತಿದ್ದು, ಅಂಗಿ ಹರಿದುಕೊಂಡಿದ್ದು, ಕಾಗದ ಪತ್ರ ಹರಿದು ಪೀಠದಲ್ಲಿ ಕುಳಿತವರ ಮೇಲೆ ಎಸೆದಿದ್ದು ಈ ಹಿಂದೆ ಕೂಡ ನಡೆದಿದೆ. ಅದನ್ನು ವಿಶ್ಲೇಷಿಸುವ ಉದ್ಧೇಶ ಈ ಲೇಖನದ್ದಲ್ಲ.

ಮೊದಲ ಅಧಿವೇಶನದ ಸಂದರ್ಭದಲ್ಲಿ ರಾಜಧಾನಿಯಲ್ಲಿ ನಡೆದ ರಾಜಕೀಯ ಚಟುವಟಿಕೆಗೆ ಅಥವಾ ಸಮಾರಂಭಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿದ್ದು ತಪ್ಪು ಎಂದು ಹೇಳುತ್ತಾ ಸದನದ ಬಾವಿಗಿಳಿದ ಬಿಜೆಪಿ ಶಾಸಕರ ವರ್ತನೆ ಅತಿರೇಕದ್ದಾಗಿತ್ತು ಎಂದು ಸಭಾಧ್ಯಕ್ಷ ಯು.ಟಿ. ಖಾದರ್ 10 ಜನ ಶಾಸಕರನ್ನು ಅಮಾನತು ಮಾಡಿದ ಘಟನೆ ಒಂದು ದಾಖಲೆ ಆಯ್ತು. ಈ ಕುರಿತಾಗಿ ನೋಡೋಣ. ಖಾದರ್​ ಅವರ ಕ್ರಮವನ್ನು ಒಪ್ಪಿಕೊಳ್ಳದ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಅಧಿವೇಶನದಿಂದ ಹೊರಗುಳಿದು ಪ್ರತಿಭಟಿಸಿವೆ. ಮೊದಲ ಅಧಿವೇಶನದಲ್ಲಿಯೇ ನಡೆದ ಈ ಸರಣಿ ಬೆಳವಣಿಗೆ ಕೂಡ ಕರ್ನಾಟಕಕ್ಕೆ ಹೊಸದು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಶಾಸಕಾಂಗದಲ್ಲಿ ಅತ್ಯವಶ್ಯಕವಾಗಿ ನಡೆಯಬೇಕಾದ ಮುಕ್ತ ಚರ್ಚೆಯ ಅವಶ್ಯಕತೆ ಮರೆತು ಹೋಗಿ, ಅಧಿವೇಶನನ್ನೇ  ಮುಂದಿನ ವರ್ಷದ ಚುನಾವಣೆಯ ಶಸ್ತ್ರಾಭ್ಯಾಸದ ಭಾಗವಾಗಿ ಮಾಡಿಕೊಂಡಿದ್ದು ಕೂಡ ಒಂದು ದಾಖಲೆ. ಧರಣಿ ನಿರತ ಶಾಸಕರು ಎದುರಾಳಿ ಪಕ್ಷದ ಹುಳುಕನ್ನು ತೋರಿಸಿ ಜನರ ಬೆಂಬಲ ಗಳಿಸಲು ಏನೆಲ್ಲಾ ಚತುರತೆ ತೋರಿದರು. ಮುಂದಿನ ದಿನಗಳಲ್ಲಿ ಆಡಳಿತ ಪಕ್ಷ ಕೂಡ ಏನೆಲ್ಲ ಪಟ್ಟು ಹಾಕಬಹುದು ಎಂಬುದರ ಝಲಕ್ ನೋಡಲು ದೊರೆಯಿತು ಈ ಅಧಿವೇಶನ.

ಐಎಎಸ್ ರಾದ್ಧಾಂತ

ಈಗ ಈ ಐಎಎಸ್ ರಾದ್ಧಾಂತಕ್ಕೆ ಬರೋಣ. ರಾಜ್ಯಕ್ಕೆ ಬರುವ ಅತಿಥಿಗಳನ್ನು ಸ್ವಾಗತಿಸಲು ಮತ್ತು ಅವರಿಗೆ ಆತಿಥ್ಯ ನೀಡಲು ಐಎಎಸ್ ಅಧಿಕಾರಿಗಳನ್ನು ಕಳುಹಿಸಬಾರದು ಎಂದು ಯಾವ ಕಾನೂನಿನಲ್ಲಿಯೂ ಸ್ಪಷ್ಟವಾಗಿ ಹೇಳಿಲ್ಲ. ಜನ ಸಾಮಾನ್ಯರ ಹಿತಾಸಕ್ತಿಯ ದೃಷ್ಟಿಯಿಂದ ವಿಶ್ಲೇಷಿಸಿದರೆ, ಚುನಾಯಿತವಾಗಿ ಆಯ್ಕೆಯಾಗಿ ಬಂದು ಸರಕಾರ ನಡೆಯಿಸಲು ಕುಳಿತಿಕೊಳ್ಳುವ ಪಕ್ಷವೊಂದು ಕಾನೂನಿನಲ್ಲಿ ಉಲ್ಲೇಖವಾಗಿರುವುದನ್ನಷ್ಟೇ ಮಾಡಬೇಕು ಎಂದು ಎಲ್ಲಿಯೂ ಇಲ್ಲ. ಕಾನೂನಿನಲ್ಲಿ ಸ್ಪಷ್ಟತೆ ಇಲ್ಲದಿರುವಾಗ ಅದನ್ನು ಒಂದು ಸರಕಾರ ಮಾಡಬಾರದು ಎಂದು ಕೋರ್ಟು ಹೇಳಬೇಕೇ ಹೊರತು ಮತ್ಯಾರು ಅಲ್ಲ. ಸಂವಿಧಾನದಲ್ಲಾಗಲೀ ಅಥವಾ ಅಧಿಕಾರಿಗಳ ಸೇವಾ ಕಾನೂನಿನಲ್ಲಿ ಸ್ಪಷ್ಟವಾಗಿ ನಮೂದಾಗಿರದ ವಿಷಯ ಇಟ್ಟುಕೊಂಡು ಬಿಜೆಪಿ ಹೋರಾಟಕ್ಕೆ ಇಳಿದಿದ್ದು ಮೊಂಡುತನ ಎಂದು ಮೇಲ್ನೋಟಕ್ಕೆ ಅನ್ನಿಸಿದರೆ ಆಶ್ಚರ್ಯ ಇಲ್ಲ. ಜನರ ಆಶೋತ್ತರ ಪೂರೈಸುವ ಉತ್ತರದಾಯಿತ್ವ ಹೊಂದಿದ್ದು, ಐಎಎಸ್ ಅಧಿಕಾರಿಗಳ ಸೇವೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳುವ ಅಧಿಕಾರ ತನಗೆ ಇದೆ ಎಂದು ಬಹುಮತ ಪಡೆದ ಸರ್ಕಾರವೊಂದು ಭಾವಿಸಬಹುದು. ಜನರ ಇಚ್ಛೆಯೂ ಅದೇ ಆಗಿದೆ ಎಂದು ಹೇಳಿಕೊಂಡು ನುಣುಚಿಕೊಳ್ಳಬಹುದು. ಇಲ್ಲಿ ಕೂಡ ಅದೇ ಆದಂತೆ ಕಾಣುತ್ತಿದೆ.

ಈ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರೋಧ ಪಕ್ಷವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿದ್ದು ಎರಡು ಕಾರಣಕ್ಕೆ. ಅವುಗಳಲ್ಲಿ ಮುಖ್ಯವಾದದ್ದು, ಹೈಕಮಾಂಡ್ ತನ್ನ ನಡೆ ಬಗ್ಗೆ ಏನು ಹೇಳಬಹುದೋ ಎಂಬ ಆತಂಕ ಅವರಲ್ಲಿದ್ದಂತೆ ಕಂಡಿತು. ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡುವ ರೀತಿಯಲ್ಲಿ ವಿರೋಧ ಪಕ್ಷ ನಡೆದುಕೊಂಡರೂ ಮುಖ್ಯಮಂತ್ರಿಯಾದವರು ಖಂಡಿಸಲಿಲ್ಲ ಎಂದು ಹೈಕಮಾಂಡ್ ಹೇಳಿಬಿಡಬಹುದು ಎಂಬ ಆತಂಕ ಅವರದ್ದಾಗಿರಬಹುದು. ಸಿದ್ದರಾಮಯ್ಯ ಬರೀ ಬಿಜೆಪಿಯನ್ನು ಮಾತ್ರ ಅಲ್ಲ, ಒಂದು ಹೆಜ್ಜೆ ಮುಂದೆ ಹೋಗಿ ಪ್ರಧಾನಿಯವರನ್ನೂ ಹಿಗ್ಗಾ ಮುಗ್ಗಾ ಜಾಡಿಸಿದರು. ವಿರೋಧ ಪಕ್ಷದ ಸದಸ್ಯರು ಧರಣಿ ಕುಳಿತಾಗಲೇ, ಬಜೆಟ್ ಮೇಲಿನ ಚರ್ಚೆಗೆ ನೀಡುವ ಉತ್ತರದ ಮೂಲಕ ರಾಜ್ಯದ ಜನರಿಗೆ ಇನ್ನೊಂದಿಷ್ಟು ಸಂದೇಶ ತಲುಪಿಸುವ ಅವರ ಇನ್ನೊಂದು ತಂತ್ರ ಕೂಡ ವಿಫಲವಾಗಿತ್ತು. ಹಾಗಾಗಿ ಅವರು, ವಿರೋಧ ಪಕ್ಷವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಂತೆ ಕಾಣುತ್ತಿತ್ತು. ಬಿಜೆಪಿಯನ್ನು ಮತ್ತು ಪ್ರಧಾನಿಯನ್ನು ತೆಗಳುವ ಮೂಲಕ ಅವರು ಹೈಕಮಾಂಡನ್ನು ಖುಷಿಪಡಿಸಿದರು. ಸಿದ್ದರಾಮಯ್ಯನವರ ಭಾಷಣದ ಓಘಕ್ಕೆ ಅವರ ಪಕ್ಷದ ಸದಸ್ಯರು ಮತ್ತು ಮಂತ್ರಿಮಂಡಳದ ಸದಸ್ಯರು ಮಾತಿನ ಪಟ್ಟಿಗೆ ತಲೆದೂಗುತ್ತಿದ್ದರು. ಆಗಾಗ ಮೇಜು ಕುಟ್ಟಿ ಸ್ವಾಗತಿಸುತ್ತಿದ್ದರು. ಈ ಘಟನೆ ಹೇಗಿತ್ತು ಎಂದರೆ, ಮರುದಿನ ರಂಗದ ಮೇಲೆ ನಡೆಯಬೇಕಿರುವ ನಾಟಕದ ಪ್ರಥಮ ಪ್ರದರ್ಶನಕ್ಕೆ, ಹಿಂದಿನ ದಿನ ರಂಗದ ಮೇಲೆ ಸಂಪೂರ್ಣ ನಾಟಕ ಆಡಿದಂತಿತ್ತುಅವರ ಭಾಷಣ. ಎದುರಿಗೆ ನೋಡುಗರು ಯಾರೂ ಇಲ್ಲದಿದ್ದರೂ, ವಿರೋಧ ಪಕ್ಷ ಇಲ್ಲದ ಖಾಲಿ ಬೆಂಚನ್ನು ಉದ್ದೇಶಿಸಿ ಮಾತಾಡಿದ್ದು ಒಂದು ರೀತಿಯ ಆಭಾಸವೇ ಆಗಿಹೋಯಿತು.

ನಿಜವಾಗಿಯೂ ನಡೆದಿದ್ದೇನು?

ನಿಜಕ್ಕಾದರೂ ಹಿರಿಯ ಐಎಎಸ್ ಅಧಿಕಾರಿಗಳನ್ನು ಈ ಕೆಲಸಕ್ಕೆ (ರಾಜಕೀಯ ಗಣ್ಯರ ಸ್ವಾಗತಕ್ಕೆ) ಕಳುಹಿಸಬೇಕು ಎನ್ನುವುದು ಸಿದ್ಧರಾಮಯ್ಯ ಅಥವಾ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಉದ್ದೇಶವೇ ಆಗಿರಲಿಲ್ಲ. ಇದು, ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳ ನಿರ್ಧಾರವಾಗಿತ್ತು. ಆದರೆ, ಅವರಿಬ್ಬರ ತೀರ್ಮಾನ ಸಿದ್ಧರಾಮಯ್ಯ ಅವರಿಗೆ ಮುಜುಗರ ಉಂಟುಮಾಡಲು ಕಾರಣವಾಯಿತು. ಇತ್ತೀಚಿನ ದಿನಗಳಲ್ಲಿ, ಆಡಳಿತಕ್ಕೆ ಬರುವ ಪಕ್ಷಗಳನ್ನು ಓಲೈಸಲು ಐಎಎಸ್ ಅಧಿಕಾರಿಗಳು ಏನು ಬೇಕಾದರೂ ಮಾಡುವ ಸಂಪ್ರದಾಯ ಹೊಸದಲ್ಲಿ . ಈ ರೀತಿಯ ಕೆಲಸ ಮಾಡಬಾರದು ಎಂದು ಕಾನೂನಿನಲ್ಲಿ ಎಲ್ಲಿಯೂ ಹೇಳಿಲ್ಲ. ಹಾಗಾಗಿ ಇಂಥ ಕೆಲಸವನ್ನು ಅವರಿಂದ ಮಾಡಿಸಿದ್ದು, ಕಾನೂನಿನ ಪ್ರಕಾರ ತಪ್ಪಲ್ಲ ಎಂದು ಹೇಳಿದರೆ ಮುಗಿಯಿತೇ? ಆದರೆ ರಾಜಕೀಯ ಕಾರ್ಯಕ್ರಮಕ್ಕೆ ಬಂದ ರಾಷ್ಟ್ರೀಯ ನಾಯಕರ ಆತಿಥ್ಯಕ್ಕೆ ಕಳಿಸುವ ಮೂಲಕ ಅಧಿಕಾರಿಗಳನ್ನು ಚಾಕರಿ ಮಾಡುವ ಭಟ್ಟಂಗಿಗಳನ್ನಾಗಿ ಮಾಡಿದ್ದು ಈ ಕಾಲಘಟ್ಟದ ವಿನೂತನ ಪ್ರಯೋಗವೇ ಸರಿ.

ಸರಿ? ತಪ್ಪು!

ಅತಿಥಿ ದೇವೋಭವ ಎನ್ನುವ ನಾಡು ನಮ್ಮದು. ಬಂದ ಅತಿಥಗಳ ಆತಿಥ್ಯಕ್ಕೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿದ್ದು ತಪ್ಪಲ್ಲ. ಈ ಹಿಂದೆ ಏನೆಲ್ಲ ನಡೆದಿತ್ತು ಎಂಬುದು ನೆನಪಿಲ್ಲವೇ? ಹಾಗಾಗಿ ನಾವು ಮಾಡಿದ್ದು ತಪ್ಪಲ್ಲ ಎನ್ನುವ ಧಾಟಿಯಲ್ಲಿ ಹಲವಾರು ಮಂತ್ರಿಗಳು ವ್ಯಾಖ್ಯಾನ ಮಾಡಿದ್ದಾರೆ. ಇಡೀ ಘಟನಾವಳಿಯನ್ನು ಒಂದು ಉದಾಹರಣೆಯೊಂದಿಗೆ ನೋಡಿದರೆ ಈ ನೈತಿಕ ದ್ವಂದ್ವಕ್ಕೆ ಉತ್ತರ ಸಿಗಬಹುದು.

ಅವರು ಒಂದು ರಾಜ್ಯದ ಮಾಜಿ ಮುಖ್ಯಮಂತ್ರಿ. ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ ಜೈಲಿಗೆ ಹೋಗಿ ಬಂದವರು. ಅವರು ಬಂದಿದ್ದು ರಾಜಕೀಯ ಕಾರ್ಯಕ್ರಮಕ್ಕೆ. ಅವರನ್ನು ರಾಜ್ಯದ ಅತಿಥಿ ಎಂದು ಹೇಳಿ, ಅವರ ಸೇವೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸುವುದು ಎಷ್ಟು ಸರಿ? ಈಗ ಒಂದು ಹೆಜ್ಜೆ ಮುಂದೆ ಹೋಗಿ ಮುಂದೆ ಏನಾಗಬಹುದು ಎಂದು ನೋಡೋಣ; ಮುಂದೊಂದು ದಿನ ಇನ್ನೂ ದೊಡ್ಡ ಅಪರಾಧ-ಕೊಲೆ ಅಥವಾ ಭಯೋತ್ಪಾದನೆ- ಮಾಡಿ ಶಿಕ್ಷೆಗೊಳಗಾಗಿ ಆ ಶಿಕ್ಷೆ ಪೂರೈಸಿದ ಓರ್ವ ಮಹಾನುಭಾವ ರಾಜಕೀಯ ನಾಯಕನ ರೂಪದಲ್ಲೇ ಬರುತ್ತಾನೆ ಎಂದು ಊಹಿಸೋಣ. ಅಂಥವರನ್ನು ರಾಜ್ಯದ ಅತಿಥಿಯನ್ನಾಗಿ ಸ್ವೀಕರಿಸಬೇಕು ಎಂದು ಹೇಳುವ ಧಾರ್ಷ್ಟ್ಯ ಅಂದು ಅಧಿಕಾರದಲ್ಲಿರುವ ಪಕ್ಷವೊಂದಕ್ಕೆ ಬಂದರೆ ಆಶ್ಚರ್ಯ ಇಲ್ಲ. ಆಗ ಏನಾಗಬಹುದು?  ಈ ಹಿನ್ನೆಲೆಯಲ್ಲಿ ನೋಡಿದರೆ, ಮೊನ್ನೆ ಮಾಡಿದ್ದು ಒಂದು ಅನುಚಿತ ಕ್ರಮ. ಇಂತಹ ಸಲಹೆಗಳನ್ನು ಐಎಎಸ್​ ಅಧಿಕಾರಿಗಳೋ, ಮಂತ್ರಿಮಂಡಳದಸ ಸದಸ್ಯರೋ ಕೊಡಬಹುದು. ಅಂತಹ  ಸಲಹೆ ಕೊಟ್ಟಾಗ ನಾಯಕರಾದವರು ಅದನ್ನು ಕಣ್ಣು ಮುಚ್ಚಿಕೊಂಡು ಒಪ್ಪಿಕೊಂಡರೆ ಏನಾಗಬಹುದು ಎಂಬುದನ್ನು ಮೊನ್ನೆ ನೋಡಿದಂತಾಯ್ತು.

ರಾಜಕೀಯಕ್ಕೆ ಸಂಬಂಧಿಸಿದ ಮತ್ತಷ್ಟು ವಿಶ್ಲೇಷಣೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:16 pm, Fri, 21 July 23