Odinangala : ವರ್ಷಾಂತ್ಯ ವಿಶೇಷ : ‘ಓದಿನಂಗಳ’ದೊಳಗೆ ‘ಉರಿವ ಜಾತ್ರೆ’ ಹೂಡಿದ್ದಾರೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ

|

Updated on: Dec 31, 2021 | 11:02 AM

Books : ‘ಈ ವರ್ಷಕ್ಕೆ ಈ ಪುಸ್ತಕ ಇಷ್ಟವಾಯಿತು ಎನ್ನುವುದಕ್ಕೆ ಇದೇನೂ ಕ್ಯಾಲೆಂಡರ್‌ ಅಲ್ಲವಲ್ಲ! ವರ್ಷದ ಮೆಚ್ಚಿನ ಪುಸ್ತಕಗಳ ಪಟ್ಟಿ ನೋಡಿದಾಗ ಹೀಗೆ ಪಟ್ಟಿ ಮಾಡುವವರು ವರ್ಷದಲ್ಲಿ ಬಂದ ಎಲ್ಲ ಪುಸ್ತಕಗಳನ್ನು ಓದಿರಲಾರರು ಮಾತ್ರವಲ್ಲ ತಮ್ಮ ಪಟ್ಟಿಯ ಪುಸ್ತಕಗಳನ್ನೂ ಓದಿರಲಾರರು ಅನ್ನಿಸುತ್ತದೆ.’ ಬಾಲಸುಬ್ರಹ್ಮಣ್ಯ ಕಂಜರ್ಪಣೆ

Odinangala : ವರ್ಷಾಂತ್ಯ ವಿಶೇಷ : ‘ಓದಿನಂಗಳ’ದೊಳಗೆ ‘ಉರಿವ ಜಾತ್ರೆ’ ಹೂಡಿದ್ದಾರೆ ಬಾಲಸುಬ್ರಹ್ಮಣ್ಯ ಕಂಜರ್ಪಣೆ
ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮತ್ತು ಕವಿ ವೆಂಕಟ್ರಮಣ ಗೌಡ
Follow us on

Kannada Literature | ಓದಿನಂಗಳ 2021 : ಅಂತರಂಗದಿಂದ ಬಹಿರಂಗಕ್ಕೆ, ಬಹಿರಂಗದಿಂದ ಅಂತರಂಗಕ್ಕೆ ನಮ್ಮನ್ನು ನಾವು ನೇಯ್ದುಕೊಳ್ಳಲು ಇರುವ ಹಲವಾರು ಆತ್ಮಾವಲೋಕನದ ಮಾರ್ಗಗಳಲ್ಲಿ ಸಾಹಿತ್ಯವೂ ಒಂದು. ಒಮ್ಮೆ ಈ ‘ರುಚಿ’ಗೆ ಬಿದ್ದರೆ ಮುಗಿಯಿತು. ಪುಸ್ತಕಗಳೇ ನಮ್ಮನೆ ದೇವರು ಎಂದು ಜೀವಿಸುತ್ತಿರುವ ಅಸಂಖ್ಯಾತ ಮನಸ್ಸುಗಳೊಂದಿಗೆ ನಾವು ನಮಗರಿವಿಲ್ಲದೆಯೇ ಬೆಸೆದುಕೊಳ್ಳುತ್ತಾ ಹೋಗುತ್ತೇವೆ. ಎಂಥಾ ದೊಡ್ಡ ಜಾತ್ರೆಯಲ್ಲಿ, ಥರಾವರಿ ಆಟಿಕೆಗಳಲ್ಲಿ ಮಗು ಮನಸ್ಸು ನೆಡುವುದು ಒಂದೇ ಒಂದು ಆಟಿಕೆಯಲ್ಲಿ ಮಾತ್ರ. ಅದೇ ಆಟಿಕೆ ಯಾಕೆ, ಎಂಬ ಪ್ರಶ್ನೆಗೆ ಉತ್ತರವಿದೆಯೇ?; ಹೊಸ ವರ್ಷದ ಹೊಸ್ತಿಲೊಳಗೆ ನಿಂತು ಹಿಂದಿರುಗಿ ನೋಡಿದರೆ, ಈ ಎರಡು ವರ್ಷಗಳಲ್ಲಿ ಕನ್ನಡದಲ್ಲಿ ಸಾಹಿತ್ಯಕೃತಿಗಳ ಪ್ರಕಟಣೆ ವಿಪುಲ. ಅಂತೆಯೇ ಕನ್ನಡದ ಕೆಲ ವಿಮರ್ಶಕರಿಗೆ, ಈ ವರ್ಷ ನೀವು ಓದಿದ ಪುಸ್ತಕಗಳ ಪೈಕಿ ಯಾವುದೇ ಭಾಷೆಯ, ಯಾವುದೇ ಪ್ರಕಾರದ, ಯಾವುದೇ ವರ್ಷ ಪ್ರಕಟವಾದ ನಿಮಗಿಷ್ಟವಾದ ಒಂದು ಕೃತಿಯ ಬಗ್ಗೆ ನಿಮ್ಮ ಒಳನೋಟಗಳನ್ನು ಕಟ್ಟಿಕೊಡಬಹುದೆ? ಎಂದು ವಿನಂತಿಸಿಕೊಳ್ಳಲಾಯಿತು. ಅವರು ಬರೆದು ಕಳಿಸಿದ್ದು ನಿಮ್ಮ ಓದಿಗೆ. ಒಪ್ಪಿಸಿಕೊಳ್ಳಿ. 

*
ಕೃತಿ : ಉರಿವ ಜಾತ್ರೆ (ಕವನಗಳು)
ಕವಿ : ವೆಂಕಟ್ರಮಣ ಗೌಡ
ಪುಟ : 124
ಬೆಲೆ : ರೂ. 125
ಪ್ರಕಾಶನ : ಋತ ಪ್ರಕಾಶನ, ಬೆಂಗಳೂರು

*
ವಿಮರ್ಶಕ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಕವಿ ವೆಂಕಟ್ರಮಣ ಗೌಡ ಅವರ ‘ಉರಿವ ಜಾತ್ರೆʼಯ ಬಗ್ಗೆ.

*

ಒಂದು ಪುಸ್ತಕ ಯಾಕೆ ನನ್ನನ್ನು ಮತ್ತೆ ಮತ್ತೆ ಓದಿಸುತ್ತದೆ ಎಂಬುದು ನನಗಿನ್ನೂ ಅರ್ಥವಾಗಿಲ್ಲ. ಕುಡುಕುತನದ ಹಾಗೆ ಸಂತೋಷವಾದಾಗ, ಸಂಕಟವಾದಾಗ, ಒಂಟಿತನ ಬಾಧಿಸಿದಾಗ ಓದುವ ಪುಸ್ತಕದ ಆಯ್ಕೆ ನನ್ನದು. ಈ ವರ್ಷಕ್ಕೆ ಈ ಪುಸ್ತಕ ಇಷ್ಟವಾಯಿತು ಎನ್ನುವುದಕ್ಕೆ ಇದೇನೂ ಕ್ಯಾಲೆಂಡರ್‌ ಅಲ್ಲವಲ್ಲ! ವರ್ಷದ ಮೆಚ್ಚಿನ ಪುಸ್ತಕಗಳ ಪಟ್ಟಿ ನೋಡಿದಾಗ ಹೀಗೆ ಪಟ್ಟಿ ಮಾಡುವವರು ವರ್ಷದಲ್ಲಿ ಬಂದ ಎಲ್ಲ ಪುಸ್ತಕಗಳನ್ನು ಓದಿರಲಾರರು ಮಾತ್ರವಲ್ಲ ತಮ್ಮ ಪಟ್ಟಿಯ ಪುಸ್ತಕಗಳನ್ನೂ ಓದಿರಲಾರರು ಅನ್ನಿಸುತ್ತದೆ.

ನನಗೆ ಅನೇಕ ಸ್ನೇಹಿತರು ತಮ್ಮ ಕೃತಿಗಳನ್ನು ಸ್ನೇಹ, ಗೌರವ, ವಿಶ್ವಾಸ, ಪರಿಚಯಪೂರ್ವಕವಾಗಿ ಕಳುಹಿಸುತ್ತಿರುತ್ತಾರೆ. ಅವೆಲ್ಲವೂ ನನಗೆ ಇಷ್ಟವಾಗುತ್ತವೆಯೆಂದೇನೂ ಇಲ್ಲ. ಆದರೆ ಓದುವ ಪ್ರಯತ್ನಮಾಡುತ್ತೇನೆ. ಕೆಲವನ್ನಂತೂ ಪರೀಕ್ಷೆಗೆ ಓದಿದಂತೆ ಕಷ್ಟಪಟ್ಟು ಓದಬೇಕಾಗುತ್ತದೆ. ಇನ್ನು ಕೆಲವನ್ನು ಅಧ್ಯಯನಕ್ಕೆ ಮತ್ತೆ ಕೆಲವನ್ನು ವಿಮರ್ಶೆಗಾಗಿ ಓದಬೇಕಾಗುತ್ತದೆ. ಇವುಗಳಲ್ಲಿ ಅನೇಕ ಒಳ್ಳೆಯ ಕೃತಿಗಳಿವೆ.

ನನ್ನನ್ನೂ ಈಗಲೂ ಓದಿಸುವ ಪುಸ್ತಕವೆಂದರೆ ಡಿವಿಜಿಯವರ ‘ಮಂಕುತಿಮ್ಮನ ಕಗ್ಗʼ. ಅದು ಕಾವ್ಯ ಹೌದೋ ಅಲ್ಲವೋ ಎಂಬ ಚರ್ಚೆಯೇ (ಕುರ್ತಕೋಟಿಯವರ ಮೂಲಕ) ಮುನ್ನೆಲೆಗೆ ಬಂದು ಅದನ್ನು ಯಾರೂ ಪ್ರಶ್ನಿಸದೆಯೇ ಉಳಿದು ಅದರ ಸತ್ವವೂ ಬೆಡಗೂ ವಿಮರ್ಶೆಯ ರಂಗಸ್ಥಳದಲ್ಲಿ ಹಿಂದೆ ಸರಿಯಿತು. ಯಾವುದಾದರೂ ಒಂದು ಪುಸ್ತಕ ಸದಾ ನನನೊಂದಿಗೇ ಇರಬೇಕು ಎಂದರೆ ನನ್ನ ಆಯ್ಕೆ ಶಾಶ್ವತ ಮೌಲ್ಯಗಳ ಈ ಕಗ್ಗ.

ಇರಲಿ: ಇದರ ಕುರಿತು ಬೇಕಾದಷ್ಟು ವ್ಯಾಖ್ಯಾನಗಳು ಬಂದಿವೆ. ಅದನ್ನು ಪುನರಪಿ ಜಠರೇ ಶಯನಂ ಮಾಡುವುದು ಬೇಡ.

ನನ್ನದು ಯಾವತ್ತೂ ‘ದ ರೋಡ್‌ ನಾಟ್‌ ಟೇಕನ್ʼ. ಸವೆದ ದಾರಿಯಲ್ಲಿ ನಡೆಯುವುದೆಂದರೆ ವ್ಯಕ್ತಿಗತ ಅಭಿಮಾನವನ್ನು ಪ್ರಕಟಿಸುವುದು. ಕೆಲವೊಮ್ಮೆ ಸಾಹಿತ್ಯ/ಸಾಹಿತ್ಯೇತರ ಕಾರಣಗಳಿಗಾಗಿ ಖುಷಿಪಡಿಸುವುದು. ಅದು ನನಗಿಷ್ಟವಿಲ್ಲ. ಆದ್ದರಿಂದ ನಾನು ಈಚೆಗೆ ಓದಿದ ಪುಸ್ತಕಗಳಲ್ಲಿ ಒಂದರ ಕುರಿತು ನನ್ನ ಚಲ್ಲಾಪಿಲ್ಲಿ ಚಿಂತನೆಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ, ಅಷ್ಟೇ: ಇದು ನಿಮ್ಮ ಆಯ್ಕೆಯಾಗಬೇಕೆಂದೇನೂ ಇಲ್ಲ ಅಥವಾ ನನ್ನ ಆಯ್ಕೆಯನ್ನು ನೀವು ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಮೆಚ್ಚಿದವನಿಗೆ ಮಸಣ ಸುಖ ಎಂಬ ಮಾತು ಬಂದಿರುವುದು ಈ ಕಾರಣಕ್ಕೇ ಇರಬಹುದೇನೋ? ಅವರವರ ಭಾವಕ್ಕೆ ಅವರವರ ಭಕುತಿಗೆ. ಲೋಕೋ ಭಿನ್ನ ರುಚಿಃ!

ವೆಂಕಟ್ರಮಣ ಗೌಡ ಎಂಬ ಯುವ ಸಾಹಿತಿಯ ನಾಲ್ಕನೇ ಕೃತಿ ‘ಉರಿವ ಜಾತ್ರೆʼ ಎಂಬ ಕವನ ಸಂಕಲನ ನನಗೆ ಮೆಚ್ಚಿಕೆಯಾಯಿತು. (ಅವರ ಬಿಡಿ ಕವಿತೆಗಳನ್ನು ಓದಿದ್ದೆನಾದರೂ ಈ ಮೊದಲಿನ ಸಂಕಲನಗಳನ್ನು ಓದಿರಲಿಲ್ಲ.)

ಒಂದು ಸಂಕಲನ ಮೆಚ್ಚಿಕೆಯಾಯಿತು ಎಂದಾಕ್ಷಣ ಅದರಲ್ಲಿರುವುದೆಲ್ಲವೂ ಸೊಗಸು ಎಂದೇನೂ ತಿಳಿಯಬೇಕಾಗಿಲ್ಲ. ಆದರೆ ಇಲ್ಲಿ ಕೆಲವು ಒಳ್ಳೆಯ ಸಾಲುಗಳಿವೆ. ‘ಮುಂದೇನು?ʼ ಎಂಬ ಒಂದು ಪುಟ್ಟ ಕವಿತೆಯನ್ನು ಇಲ್ಲಿ ನಿಮಗೆ ಓದಿಸುತ್ತೇನೆ:

“ಒಂದೂರಲ್ಲಿ ಒಬ್ಬ ರಾಜ
ಹೂಂ… ಮುಂದೆ?
ಮುಂದೇನು?
ಅವನು ಇರುವವರೆಗೂ
ಇನ್ನೇನೂ ಆಗದು”

ಇಷ್ಟೇ. ಈ ಐದು ಸಾಲುಗಳಲ್ಲಿ ಚರಿತ್ರೆಯನ್ನು, ವರ್ತಮಾನವನ್ನು, ಭವಿಷ್ಯವನ್ನು ಕವಿ ಕಟ್ಟಿಕೊಟ್ಟಿದ್ದಾರೆ ಅನ್ನಿಸುತ್ತದೆ. ಸಾಮಾಜಿಕ, ರಾಜಕೀಯ ಭಾಷ್ಯವಿದು. ಎಷ್ಟು ಸಾಲು ಬರೆದರೆ ಕಾವ್ಯ ಅನ್ನಿಸುತ್ತದೆ ಎಂಬುದರ ವ್ಯಾಖ್ಯಾನ ಸಾಹಿತ್ಯದಲ್ಲಿ ಇಲ್ಲ; ಸಲ್ಲ. ಇನ್ನೊಂದೆಡೆ (‘ಎಷ್ಟು ಸಣ್ಣಗೆ ಕತ್ತರಿಸಿದರೂʼ ಎಂಬ ಕವಿತೆಯಲ್ಲಿ) ಕವಿ ಹೇಳುತ್ತಾರೆ:

“ನೆನಪುಗಳ ತುಂಬ ಮನುಷ್ಯರು ಮನುಷ್ಯರನ್ನು ಮರೆವ ಕಥೆ
ಕಾಡುವುದು ಶಾಪಗ್ರಸ್ತ ಒನಕೆ; ತೇಯ್ದು ತೇಯ್ದು ದಣಿದರೂ”
ತೇಯ್ದು ತೇಯ್ದು ‘ಸವೆದರೂʼ ಅಲ್ಲ, ‘ದಣಿದರೂʼ!

ಮತ್ತೊಂದೆಡೆ (‘ಕಣಿʼ ಎಂಬ ಕವಿತೆಯಲ್ಲಿ) ಕವಿ ಬದುಕಿನ ಶೈಲಿಗೂ ಮನಸ್ಸು ಮುದುಡುವುದಕ್ಕೂ ಸಂಬಂಧವಿಲ್ಲ ಎಂಬುದನ್ನು ಹೀಗೆ ಸೂಚಿಸುತ್ತಾರೆ:

“ಚಂದಿರನ ನಗುವಲ್ಲಿ ತಾರೆಗಳ ಕೇಕೆಯಲಿ
ಅರಮನೆಯು ಮೀಯುವಾಗ
ಅಂತಃಪುರದಲ್ಲೇಕೆ ಮನಸುಗಳು ಅನುಗೊಳ್ಳಲಿಲ್ಲ?”

ನಮ್ಮೆಲ್ಲ ಸಂವೇದನೆಗಳ ವಾಸ್ತವ ಸತ್ಯದ ಕುರಿತ ಸಂಶಯವು ‘ಕಾಮನಬಿಲ್ಲುʼ ಎಂಬ ಕವಿತೆಯಲ್ಲಿ
“ಇರದ ಸತ್ಯವು ಬೆರಗಿನ ಬೆರಳ ನೆರಳಾಗುವುದು” ಎಂದು ವ್ಯಕ್ತವಾಗುತ್ತದೆ. ಇದನ್ನೇ ಅವರು ‘ಕನ್ನಡಿಯನರಸುತ್ತ ಬಿಂಬಗಳಲಿ ಸಿಲುಕಿʼ ಎಂಬ ಕವಿತೆಯಲ್ಲಿ

“ಸುತ್ತಲ ಚಿತ್ತಾರಗಳ ಭಾರಕ್ಕೇ
ಬಳಲಿದಂತಿರುವ ಕನ್ನಡಿ”

ಎಂದು ಹೇಳುತ್ತಾರೆ.

‘ಮೋಹಿನಿ ವಿಲಾಸʼ ಎಂಬ ಕವಿತೆಯಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ:

“ಕಾಯಬಲ್ಲುದನು ಕೊಂದ ಮೇಲೆ
ಕೊಲ್ಲುವ ದಿಗ್ಭ್ರಾಂತಿಯೊಂದೇ
ನಮ್ಮೊಳಗೆ ಹೊರಗೆ”

ಅವರ ಕವಿತೆಗಳಲ್ಲಿ ಒಡಲ ಬೆಂಕಿ ಜೀವವ ಕಾಯುತ್ತದೆ. ಮಕ್ಕಳ ನಿದ್ದೆಯಲ್ಲಿ ನಕ್ಷತ್ರಗಳೆಲ್ಲ ಕಣ್ಣೀರಾಗುತ್ತವೆ. ನೆರಳಿಲ್ಲದ ರಾತ್ರಿ ಕನ್ನಡಿ ಪ್ರತಿಫಲಿಸುವುದಿಲ್ಲ. ಕವಿಗೆ ಫಳಫಳ ನಕ್ಷತ್ರಗಳ, ಒಳಗಿನ ಸುಳ್ಳುಗಳ ಉರಿವ ಉಲ್ಕೆಗಳ ಬೆತ್ತಲ ಎಣಿಸಬೇಕೆನ್ನಿಸುತ್ತದೆ. ನೋವನ್ನೇ ಒಡೆದಿಡುತ್ತಿರುವ ಈ ರಾತ್ರಿ ಬಹುಶಃ ಕೊನೆಯಾಗುವುದೇ ಇಲ್ಲ. ಬೆಳಗಾಗುವುದರ ಸುಳಿವೇ ಇಲ್ಲ.
ಅವರ ಪ್ರಾಯಃ ಎಲ್ಲ ಕವಿತೆಗಳಲ್ಲಿ ಈ ಭಾವ ಉಕ್ಕಿದೆ.

“ಬದುಕಿನ ರುಚಿ ಸೋರಿಹೋಗಿ
ಮಾತನಾಡುವವನನ್ನು ಆಲಿಸಲು
ಸ್ವತಃ ಮಾತನಾಡುತ್ತಿರುವವನೂ ಇರುವುದಿಲ್ಲ”

ಈ ಪುಟ್ಟ ಪುಸ್ತಕ ನನಗೆ ಖುಷಿ ಕೊಟ್ಟಿದೆ. ಓದುತ್ತ ಮತ್ತೆ ಓದುತ್ತ ನಿರಾಳನಿದ್ರೆ ಬರುವವರೆಗೂ ಪುಸ್ತಕ ನನ್ನ ಕೈಯ್ಯಲ್ಲಿತ್ತು. ಎಚ್ಚರಾದಾಗ ಕೈಯ್ಯಿಂದ ಜಾರಿ ಕೆಳಗಿತ್ತು.

ವೆಂಕಟ್ರಮಣ ಗೌಡರ ಕವಿತೆಗಳು : Poetry : ಅವಿತಕವಿತೆ ; ‘ಒಂದು ವಿಶ್ವಾಸವನ್ನು ಕಾಯಲು ಎಂಥ ಸುಂದರ ಕಾವಲು’

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಗಂಗಳ’ದಲ್ಲಿ ತಾರಿಣಿ ಶುಭದಾಯಿನಿ ಕಾಣಿಸಿದ ‘ಕೌಬಾಯ್ಸ್​ ಮತ್ತು ಕಾಮ ಪುರಾಣ’