ಚಿಕ್ಕಬಳ್ಳಾಪುರಕ್ಕೆ ಬಂತು ವಿಶೇಷ ತಳಿಯ ದುಬಾರಿ ಕುದುರೆ: ನೋಡಲು ಮುಗಿಬಿದ್ದ ಜನ
ಗುಜರಾತ್‌ನಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾರ್ವಾಡಿ ತಳಿಯ ದುಬಾರಿ ಕುದುರೆಯ ಆಗಮನವಾಗಿದೆ. ಈ ದುಬಾರಿ ಕುದುರಿಗೆ ಅದ್ದೂರಿಯಾಗಿ ಸ್ವಾಗತ ಕೋರಲಾಗಿದೆ. ಮಾರ್ವಾಡಿ ಎಂಬ ಅಪರೂಪದ ಈ ತಳಿಯನ್ನು ಉದ್ಯಮಿ ಒಬ್ಬರು ಅತ್ಯಂತ ದುಬಾರಿ ಬೆಲೆಗೆ ಖರೀದಿಸಿದ್ದಾರೆ. ಇದರ ಬೆಲೆ ಕೇಳಿದರೆ ನಿಜಕ್ಕೂ ಶಾಕ್ ಆಗುತ್ತದೆ. ಕುದುರೆ ಫೋಟೋಸ್ ಇಲ್ಲಿವೆ.
Updated on: Jul 20, 2025 | 9:44 PM

ರಾಜ-ಮಹಾರಾಜರು ಯುದ್ದದಲ್ಲಿ ಬಳಸುತ್ತಿದ್ದ ತಳಿಯ ಕುದುರೆಯೊಂದನ್ನು ಬರೋಬ್ಬರಿ 1 ಕೋಟಿ 11 ಲಕ್ಷ ರೂ ಕೊಟ್ಟು ಖರೀದಿ ಮಾಡಲಾಗಿದೆ. ಕುದುರೆಯ ಮೈಕಟ್ಟು, ಎತ್ತರ, ನೋಟ ವೈಯಾರಕ್ಕೆ ಜನರು ಮನಸೋತಿದ್ದಾರೆ. ದುಬಾರಿ ಕುದುರೆ ತಮ್ಮೂರಿಗೆ ಬರ್ತಿದ್ದಂತೆ ರೆಡ್ ಕಾರ್ಪೆಟ್ ಹಾಕಿ, ಕೆಕ್ ಕತ್ತರಿಸಿ, ಪಟಾಕಿ ಸಿಡಿಸಿ ಅದ್ದೂರಿ ಸ್ವಾಗತ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ವರಲಕೊಂಡ ಗ್ರಾಮದ ಬಳಿಯಿರುವ ಬೆಂಗಳೂರು ಮೂಲದ ಉದ್ಯಮಿ ಶಫೀಕ್ ಅವರಿಗೆ ಕುದುರೆ ಸವಾರಿ ಹಾಗೂ ಸಾಕುವ ಹವ್ಯಾಸ ಹೊಂದಿದ್ದು, ಈಗ ದೂರದ ಗುಜರಾತ್‌ನಿಂದ ಮಾರ್ವಾರಿ ತಳಿಯ ನ್ಯಾಷನಲ್ ಲೆವೆಲ್ ಕಾಂಪಿಟೇಶನ್ನಲ್ಲಿ ಎರಡು ಬಾರಿ ಚಾಂಪಿಯನ್ ಆಗಿರುವ 1 ಕೋಟಿ 11 ಲಕ್ಷ ರೂ. ಮೌಲ್ಯದ ಕುದುರೆಯನ್ನ ಖರೀದಿಸಿದ್ದಾರೆ. ಈ ಕುದುರೆ ಅವರ ಪಾರ್ಮ ಹೌಸ್ಗೆ ಹೊಸ ಕಳೆ ತಂದಿದೆ.

ಉದ್ಯಮಿ ಶಫೀಕ್ ತಮ್ಮದೇ ಸ್ವಂತ ಜಾಗದಲ್ಲಿ ಹಾರ್ಸ್ ರೈಡಿಂಗ್ಗಾಗಿ ಒಂದಷ್ಟು ಜಾಗ ಮೀಸಲಿರಿಸಿ, ಆ ಜಾಗದಲ್ಲಿ ಬೆಂಗಳೂರಿನ ತಮ್ಮ ಸ್ನೇಹಿತರು, ಪರಿಚಯಸ್ಥರು ಹಾಗೂ ಹಳ್ಳಿ ಗಾಡಿನ ಯುವಕರಿಗೆ ಹಾರ್ಸ್ ರೈಡಿಂಗ್ ಮಾಡುವ ಕಲೆಯನ್ನ ಕರಗತ ಮಾಡಿಸುತ್ತಿದ್ದಾರೆ.

ರೋಲೆಕ್ಸ್ ಎಂಬ ಹೆಸರಿನ ಈ ಕುದುರೆ, ಮಾರ್ವಾಡಿ ತಳಿಯ ಕುದುರೆ ಆಗಿದೆ. ಸೇವಾಡಿಯಾ ಮಠ್ ಅನ್ನೋ ರಾಯಲ್ ಬ್ಲಡ್ ಲೈನ್ಗೆ ಸೇರಿದೆ. ಸದ್ಯ ಮೂರುವರೆ ವರ್ಷದ ಈ ಕುದುರೆಯ ಮಸ್ತಾದ ದೇಹಕಟ್ಟು ಹಾಗೂ ಸುರಸುಂದರಿಯರನ್ನ ಮೀರಿಸುವ ಅದರ ನಡಿಗೆ, ಕಾಲು ಪಾದ ಊರುವ ಭಂಗಿಗಳಿಂದಲೇ ಎಲ್ಲರನ್ನ ತನ್ನತ್ತ ಆಕರ್ಷಿಸುತ್ತದೆ.

ರೋಲೆಕ್ಸ್ ಎರಡು ಬಾರಿ ನ್ಯಾಷನಲ್ ಲೆವೆಲ್ ಕಾಂಪಿಟೇಶನ್ನಲ್ಲಿ ಚಾಂಪಿಯನ್ ಆಗಿದ್ದಾನೆ. ಪ್ರತಿದಿನ ಈ ಕುದುರೆಗೆ 12 ಲೀಟರ್ ಹಾಲು, 1 ಡಜನ್ ಮೊಟ್ಟೆ ಸೇರಿದಂತೆ ಹಸಿರು ಹುಲ್ಲು ಹಾಗೂ ಎರಡು ಬಾರಿ ಬಾಡಿ ಮಸಾಜ್, ಜಿಮ್ ವರ್ಕೌಟ್ ಎಲ್ಲವೂ ಮಾಡಿಸಲಾಗುತ್ತದೆ.

ದೇಶದಲ್ಲಿ ನಶಿಸಿ ಹೋಗುತ್ತಿರುವ ಅಪರೂಪದ ಕುದುರೆ ತಳಿಗಳನ್ನ ಉಳಿಸುವ ಸಲುವಾಗಿಯೇ ಈ ಕುದುರೆಯನ್ನು ದುಬಾರಿ ಹಣ ಕೊಟ್ಟು ಖರೀದಿ ಮಾಡಿದ್ದಾಗಿ ಕುದುರೆ ಮಾಲೀಕರು ಹೇಳಿದ್ದಾರೆ. ಕೋಟಿ ಬೆಲೆಯ ಕುದುರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನ ನೋಡಲು ಮುಗಿಬಿದ್ದರು.




