- Kannada News Photo gallery Cricket photos 2026 T20 World Cup Final: India vs New Zealand, Ahmedabad! ICC Knockout History
ಐಸಿಸಿ ನಾಕೌಟ್‌ಗಳಲ್ಲಿ ಭಾರತ- ಕಿವೀಸ್ ಎಷ್ಟು ಬಾರಿ ಮುಖಾಮುಖಿಯಾಗಿವೆ? ಯಾರದ್ದು ಮೇಲುಗೈ?
ICC Knockout History India vs New Zealand: 2026ರ ಟಿ20 ವಿಶ್ವಕಪ್ ಫೈನಲ್ ಪಂದ್ಯವು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನಲ್ಲಿ ನಡೆಯಲಿದೆ. ಹಾಲಿ ಚಾಂಪಿಯನ್ ಭಾರತಕ್ಕೆ ಇದು ಸತತ ಎರಡನೇ ಪ್ರಶಸ್ತಿ ಗೆಲ್ಲುವ ಅವಕಾಶ. ಆದರೆ, ಐಸಿಸಿ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತದ ಇತಿಹಾಸ ಸವಾಲಿನಿಂದ ಕೂಡಿದೆ. ಈ ಹಿಂದಿನ ಐದು ನಾಕೌಟ್‌ಗಳಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ನ್ಯೂಜಿಲೆಂಡ್ 3 ಪಂದ್ಯಗಳನ್ನು ಗೆದ್ದಿದೆ. ಈ ಮಹತ್ವದ ಪಂದ್ಯ ರೋಮಾಂಚನಕಾರಿ ಸೆಣೆಸಾಟಕ್ಕೆ ವೇದಿಕೆ ಕಲ್ಪಿಸಲಿದೆ.
Updated on: Mar 07, 2026 | 3:08 PM

2026 ರ ಟಿ20 ವಿಶ್ವಕಪ್‌ನ ಫೈನಲ್ ಪಂದ್ಯ ಆತಿಥೇಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿಯುವ ಇರಾದೆಯಲ್ಲಿದೆ. ಆದಾಗ್ಯೂ ಕಿವೀಸ್ನಂತಹ ಬಲಿಷ್ಠ ತಂಡವನ್ನು ಮಣಿಸುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ಐಸಿಸಿ ನಾಕೌಟ್‌ಗಳಲ್ಲಿ ಭಾರತದ ವಿರುದ್ಧ ಕಿವೀಸ್ ಮೇಲುಗೈ ಸಾಧಿಸಿರುವುದರಿಂದ ಭಾರತ ಗೆಲುವಿಗಾಗಿ ಸಾಕಷ್ಟು ಬೆವರು ಹರಿಸಬೇಕಿದೆ.

ಐಸಿಸಿ ಟೂರ್ನಮೆಂಟ್‌ಗಳ ನಾಕೌಟ್ ಸುತ್ತಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐದು ಬಾರಿ ಮುಖಾಮುಖಿಯಾಗಿವೆ. ಇವುಗಳಲ್ಲಿ, ಕಿವೀಸ್ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಭಾರತ ಎರಡರಲ್ಲಿ ಗೆಲುವು ಸಾಧಿಸಿದೆ. ಆದಾಗ್ಯೂ, ಟಿ20 ವಿಶ್ವಕಪ್‌ನ ನಾಕೌಟ್ ಹಂತಗಳಲ್ಲಿ ಉಭಯ ತಂಡಗಳು ಪರಸ್ಪರ ಎದುರಾಗುತ್ತಿರುವುದು ಇದೇ ಮೊದಲು. ಇದಕ್ಕೂ ಮೊದಲು ಉಭಯ ತಂಡಗಳು ಏಕದಿನ ಅಥವಾ ಟೆಸ್ಟ್ ಚಾಂಪಿಯನ್‌ಶಿಪ್‌ಗಳ ನಾಕೌಟ್ ಹಂತಗಳಲ್ಲಿ ಮಾತ್ರ ಮುಖಾಮುಖಿಯಾಗಿದ್ದರು.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ಟೂರ್ನಮೆಂಟ್‌ನ ನಾಕೌಟ್ ಹಂತದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದು 2000ದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ. ಸ್ಟೀಫನ್ ಫ್ಲೆಮಿಂಗ್ ನೇತೃತ್ವದ ನ್ಯೂಜಿಲೆಂಡ್ ತಂಡವು ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 264 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 49.4 ಓವರ್‌ಗಳಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆಬೀರಿತ್ತು.

2019ರ ಏಕದಿನ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎರಡೂ ತಂಡಗಳು ಎರಡನೇ ಬಾರಿಗೆ ಐಸಿಸಿ ನಾಕೌಟ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಗೆಲುವಿನ ಸಮೀಪ ಬಂದಿದ್ದ ಟೀಂ ಇಂಡಿಯಾ ಸೋಲಿನ ಆಘಾತಕ್ಕೆ ಒಳಗಾಯಿತು. ಎರಡು ದಿನ ನಡೆದ ಈ ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳಿಗೆ 239 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಭಾರತ 49.3 ಓವರ್‌ಗಳಲ್ಲಿ 221 ರನ್‌ಗಳಿಗೆ ಆಲೌಟ್ ಆಗಿ 18 ರನ್‌ಗಳಿಂದ ಸೋತಿತು.

2019 ರ ನಂತರ, 2021 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗಿದ್ದವು. ಗೆಲುವಿಗೆ ಕೇವಲ 139 ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಪಂದ್ಯವನ್ನು ಗೆದ್ದುಕೊಂಡಿದಲ್ಲದೆ ಚಾಂಪಿಯನ್ ಆಗಿಯೂ ಹೊರಹೊಮ್ಮಿತು.

2021 ರ ನಂತರ, ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 2023 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನಾಲ್ಕನೇ ಬಾರಿಗೆ ಪರಸ್ಪರ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ರೋಹಿತ್ ನೇತೃತ್ವದ ಟೀಂ ಇಂಡಿಯಾ, ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿತು. ವಾಂಖೆಡೆಯಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 397 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ 48.5 ಓವರ್‌ಗಳಲ್ಲಿ 327 ರನ್‌ಗಳಿಗೆ ಆಲೌಟ್ ಆಯಿತು.

ಆ ಬಳಿಕ ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಉಭಯ ತಂಡಗಳು ಐದನೇ ಬಾರಿಗೆ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ ಏಳು ವಿಕೆಟ್‌ಗಳ ನಷ್ಟಕ್ಕೆ 251 ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಭಾರತ ತಂಡವು 49 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ ಗುರಿ ತಲುಪಿತು.
