ಬಾಬರ್ ಆಝಂ ಆರ್ಭಟಕ್ಕೆ ವಿರಾಟ್ ಕೊಹ್ಲಿಯ ವಿಶ್ವ ದಾಖಲೆಯೇ ಧ್ವಂಸ..!
Babar Azam World Record: ಟಿ20 ಕ್ರಿಕೆಟ್ನಲ್ಲಿ ಬಾಬರ್ ಆಝಂ ಅವರ ದಾಖಲೆಯ ನಾಗಾಲೋಟ ಮುಂದುವರೆದಿದೆ. ಕೆಲ ದಿನಗಳ ಹಿಂದೆಯಷ್ಟೇ ರೋಹಿತ್ ಶರ್ಮಾ ಅವರ ವಿಶ್ವ ದಾಖಲೆ ಮುರಿದಿದ್ದ ಬಾಬರ್ ಆಝಂ ಇದೀಗ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಭರ್ಜರಿ ದಾಖಲೆಯೊಂದನ್ನು ಅಳಿಸಿ ಹಾಕಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
Updated on: Nov 02, 2025 | 9:58 AM

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪಾಕಿಸ್ತಾನ್ ತಂಡದ ಬಾಬರ್ ಆಝಂ (Babar Azam) ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ದಾಖಲೆಗಳ ಸರದಾರ ವಿರಾಟ್ ಕೊಹ್ಲಿಯ (Virat Kohli) ವರ್ಲ್ಡ್ ರೆಕಾರ್ಡ್ ಮುರಿಯುವ ಮೂಲಕ ಎಂಬುದು ವಿಶೇಷ.

ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ 47 ಎಸೆತಗಳಲ್ಲಿ 9 ಫೋರ್ಗಳೊಂದಿಗೆ 68 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ಗಳಿಸಿದ ವಿಶ್ವ ದಾಖಲೆಯನ್ನು ಬಾಬರ್ ಆಝಂ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿತ್ತು. ಟೀಮ್ ಇಂಡಿಯಾ ಪರ 117 ಟಿ20 ಇನಿಂಗ್ಸ್ ಆಡಿರುವ ಕಿಂಗ್ ಕೊಹ್ಲಿ 39 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಬಾಬರ್ ಆಝಂ ಯಶಸ್ವಿಯಾಗಿದ್ದಾರೆ. ಪಾಕಿಸ್ತಾನ್ ಪರ 124 ಟಿ20 ಇನಿಂಗ್ಸ್ ಆಡಿರುವ ಬಾಬರ್ 40 ಬಾರಿ 50+ ಸ್ಕೋರ್ಗಳಿಸಿದ್ದಾರೆ. ಈ ಮೂಲಕ ಟಿ20 ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಅತ್ಯಧಿಕ ಬಾರಿ ಫಿಫ್ಟಿ ಪ್ಲಸ್ ಸ್ಕೋರ್ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಬಾಬರ್ ಆಝಂ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು. ರೋಹಿತ್ ಶರ್ಮಾ (4231 ರನ್ಸ್) ಹೆಸರಿನಲ್ಲಿದ್ದ ಈ ವಿಶ್ವ ದಾಖಲೆಯನ್ನು ಮುರಿದು ಇದೀಗ ಬಾಬರ್ ಆಝಂ 4302 ರನ್ಗಳೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.
