David Warner: ಹೇಡನ್ರನ್ನು ಹಿಂದಿಕ್ಕಿದ ಡೇವಿಡ್ ವಾರ್ನರ್
David Warner Records: ಈ 38 ರನ್ಗಳೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ವಾರ್ನರ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಮ್ಯಾಥ್ಯೂ ಹೇಡನ್ ಅವರ ಹೆಸರಿನಲ್ಲಿತ್ತು.
Updated on: Dec 26, 2023 | 8:34 AM

ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೂಲಕ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಅದು ಕೂಡ ಓಪನಿಂಗ್ ಬ್ಯಾಟಿಂಗ್ ಮೂಲಕ ಎಂಬುದು ವಿಶೇಷ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 90 ರನ್ ಪೇರಿಸಿದ ಬಳಿಕ ವಾರ್ನರ್ (38) ಔಟಾದರು.

ಈ 38 ರನ್ಗಳೊಂದಿಗೆ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆ ವಾರ್ನರ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಮ್ಯಾಥ್ಯೂ ಹೇಡನ್ ಅವರ ಹೆಸರಿನಲ್ಲಿತ್ತು.

ಆಸ್ಟ್ರೇಲಿಯಾ ತಂಡದ ಮಾಜಿ ಎಡಗೈ ದಾಂಡಿಗ ಮ್ಯಾಥ್ಯೂ ಹೇಡನ್ ಆರಂಭಿಕನಾಗಿ ಕಣಕ್ಕಿಳಿದು ಒಟ್ಟು 8625 ರನ್ ಪೇರಿಸಿದ್ದರು. ಇದೀಗ ಈ ದಾಖಲೆಯನ್ನು ಡೇವಿಡ್ ವಾರ್ನರ್ ಮುರಿದಿದ್ದಾರೆ.

ಆಸ್ಟ್ರೇಲಿಯಾ ಪರ 202 ಟೆಸ್ಟ್ ಇನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ ಆರಂಭಿಕನ ಸ್ಥಾನದಲ್ಲಿ ಒಟ್ಟು 8659 ರನ್ ಕಲೆಹಾಕಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ಆರಂಭಿಕ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತೀ ಹೆಚ್ಚು ರನ್ ಬಾರಿಸಿದ ವಿಶ್ವ ದಾಖಲೆ ಇರುವುದು ಇಂಗ್ಲೆಂಡ್ನ ಅಲಿಸ್ಟರ್ ಕುಕ್ ಹೆಸರಿನಲ್ಲಿ. ಇಂಗ್ಲೆಂಡ್ ತಂಡದ ಮಾಜಿ ನಾಯಕ ಆರಂಭಿಕನಾಗಿ ಕಣಕ್ಕಿಳಿದು ಒಟ್ಟು 11845 ರನ್ ಪೇರಿಸಿ ವಿಶ್ವ ದಾಖಲೆ ನಿರ್ಮಿಸಿಟ್ಟಿದ್ದಾರೆ.

TV9 Kannada
Read More



