- Kannada News Photo gallery Cricket photos Delhi take on Andhra at the BCCI's Centre of Excellence ground in Bengaluru
15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಎಲ್ಲಿ?
Vijay Hazare Trophy 2025: ಡಿಸೆಂಬರ್ 24 ರಂದು ಶುರುವಾಗಲಿರುವ ದೆಹಲಿ ಮತ್ತು ಆಂಧ್ರ ಪ್ರದೇಶ್ ನಡುವಣ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ. ಈ ಮೂಲಕ ಕೊಹ್ಲಿ 15 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಅವರು 2010 ರಲ್ಲಿ ಕೊನೆಯ ಬಾರಿ ದೇಶೀಯ ಏಕದಿನ ಪಂದ್ಯವಾಡಿದ್ದರು.
Updated on: Dec 24, 2025 | 7:53 AM

ವಿಜಯ ಹಝಾರೆ ಟೂರ್ನಿಗೆ ಇಂದಿನಿಂದ ಚಾಲನೆ ದೊರೆಯಲಿದೆ. ಮೊದಲ ದಿನವೇ 32 ತಂಡಗಳು ಕೂಡ ಕಣಕ್ಕಿಳಿಯಲಿವೆ. ಈ ಮೂವತ್ತೆರಡು ತಂಡಗಳಲ್ಲಿ ಎಲ್ಲರ ಕಣ್ಣು ನೆಟ್ಟಿರುವುದು ದೆಹಲಿ ಮತ್ತು ಆಂಧ್ರ ನಡುವಣ ಪಂದ್ಯದ ಮೇಲೆ. ಏಕೆಂದರೆ ಈ ಮ್ಯಾಚ್ ಮೂಲಕ ವಿರಾಟ್ ಕೊಹ್ಲಿ (Virat Kohli) ವಿಜಯ ಹಝಾರೆ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಕೂಡ ಬರೋಬ್ಬರಿ 15 ವರ್ಷಗಳ ಬಳಿಕ.

ಅಂದರೆ ವಿರಾಟ್ ಕೊಹ್ಲಿ ಕೊನೆಯ ಬಾರಿ ವಿಜಯ ಹಝಾರೆ ಟೂರ್ನಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ ಐದು ಮ್ಯಾಚ್ಗಳಲ್ಲಿ ಬ್ಯಾಟ್ ಬೀಸಿದ್ದ ಕೊಹ್ಲಿ 45.80 ಸರಾಸರಿಯಲ್ಲಿ 229 ರನ್ ಗಳಿಸಿದ್ದರು. ಈ ವೇಳೆ ಎರಡು ಅರ್ಧಶತಕಗಳನ್ನು ಸಹ ಬಾರಿಸಿದ್ದರು. ಇದೀಗ ದಶಕಗಳ ಬಳಿಕ ಮತ್ತೊಮ್ಮೆ ದೆಹಲಿ ಪರ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ.

ಆದರೆ ಈ ಮ್ಯಾಚ್ ನಡೆಯುವುದು ಎಲ್ಲಿ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿಗದಿಯಾಗಿದ್ದ ಈ ಪಂದ್ಯವನ್ನು ಸುರಕ್ಷತಾ ಕಾರಣಗಳಿಂದಾಗಿ ಸ್ಥಳಾಂತರ ಮಾಡಲಾಗಿದೆ. ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದ ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಯಾವುದೇ ಪಂದ್ಯಗಳನ್ನು ಆಯೋಜಿಸಲಾಗಿಲ್ಲ.

ಇದಾಗ್ಯೂ ಈ ಬಾರಿಯ ವಿಜಯ ಹಝಾರೆ ಟೂರ್ನಿಯ ಮೂಲಕ ಮತ್ತೆ ಪಂದ್ಯ ಆಯೋಜಿಸಲು ಕೆಎಸ್ಸಿಎ ಮುಂದಾಗಿತ್ತು. ಅದರಂತೆ ಸೋಮವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ಪರಿಶೀಲನೆಯ ವರದಿಯು ನಕಾರತ್ಮಕವಾಗಿದ್ದ ಕಾರಣ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ದೆಹಲಿ-ಆಂಧ್ರ ನಡುವಣ ಪಂದ್ಯ ಆಯೋಜಿಸಲು ಅನುಮತಿ ನಿರಾಕರಿಸಿದ್ದರು.

ಇದೀಗ ಈ ಮ್ಯಾಚ್ ಅನ್ನು ಬೆಂಗಳೂರಿನ ಬಂಡೆ ಕೊಡಿಗೆಹಳ್ಳಿಯಲ್ಲಿರುವ ಬಿಸಿಸಿಐ ಸೆಂಟರ್ ಆಫ್ ಎಕ್ಸ್ಲೆನ್ಸ್ ನಲ್ಲಿರುವ ಮೈದಾನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಅದರಂತೆ ಇಂದು ವಿರಾಟ್ ಕೊಹ್ಲಿ ವಿಜಯ ಹಝಾರೆ ಟೂರ್ನಿಯ ಪಂದ್ಯಕ್ಕಾಗಿ ಸೆಂಟರ್ ಆಫ್ ಎಕ್ಸ್ಲೆನ್ಸ್ ಮೈದಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಅದು ಕೂಡ ಬರೋಬ್ಬರಿ 15 ವರ್ಷಗಳ ಬಳಿಕ ಎಂಬುದು ವಿಶೇಷ.
