ಒಂದೇ ದಿನ ಮೂರು ಸ್ಫೋಟಕ ಸೆಂಚುರೀಸ್..!
Vijay Hazare Trophy 2025: ವಿಜಯ ಹಝಾರೆ ಟೂರ್ನಿಯ ಮೊದಲ ದಿನವೇ ಬರೋಬ್ಬರಿ 22 ಶತಕಗಳು ಮೂಡಿಬಂದಿವೆ. ಈ ಇಪ್ಪತ್ತೆರಡು ಸೆಂಚುರಿಗಳಲ್ಲಿ ಮೂರು ವಿಸ್ಫೋಟಕ ಶತಕಗಳು ಕೂಡ ಸೇರಿವೆ. ಅಂದರೆ ವಿಜಯ ಹಝಾರೆ ಟೂರ್ನಿಯ ದಾಖಲೆಯ ಎರಡು ಸೆಂಚುರಿಗಳು ಒಂದೇ ದಿನ ಮೂಡಿಬಂದಿವೆ.
Updated on: Dec 25, 2025 | 10:00 AM

ಲಿಸ್ಟ್ ಎ ಕ್ರಿಕೆಟ್ನಲ್ಲಿ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಭಾರತದ ನಾಲ್ವರು ಶತಕ ಸಿಡಿಸಿದ್ದಾರೆ. ಈ ನಾಲ್ವರಲ್ಲಿ ಮೂವರು ಒಂದೇ ದಿನ ಈ ಸಾಧನೆ ಮಾಡಿರುವುದು ವಿಶೇಷ. ಅದು ಕೂಡ ಡಿಸೆಂಬರ್ 24ರ ಮಧ್ಯಾಹ್ನದೊಳಗೆ ಈ ವಿಸ್ಫೋಟಕ ಸೆಂಚುರಿಗಳು ಮೂಡಿಬಂದಿರುವುದು ಮತ್ತೊಂದು ವಿಶೇಷ.

2025-26ರ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲಿ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿದ್ದಾರೆ. ಅರುಣಾಚಲ ಪ್ರದೇಶ್ ವಿರುದ್ಧದ ಈ ಪಂದ್ಯದಲ್ಲಿ ವಿಸ್ಫೋಟಕ ಶತಕ ಸಿಡಿಸಿ ಸಕಿಬುಲ್ ಏಕದಿನ ಪಂದ್ಯದಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸಕಿಬುಲ್ ಗನಿಯ ದಾಖಲೆಯ ಶತಕದ ಬೆನ್ನಲ್ಲೇ ಇಶಾನ್ ಕಿಶನ್ ಕೂಡ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕರ್ನಾಟಕ ವಿರುದ್ಧದ ಮ್ಯಾಚ್ನಲ್ಲಿ ಅಬ್ಬರಿಸಿದ ಜಾರ್ಖಂಡ್ ತಂಡದ ನಾಯಕ ಇಶಾನ್ ಕೇವಲ 33 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ 2ನೇ ಭಾರತೀಯ ಎನಿಸಿಕೊಂಡಿದ್ದಾರೆ.

ಹಾಗೆಯೇ ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಶತಕ ಪೂರೈಸಲು ತೆಗೆದುಕೊಂಡಿದ್ದು ಕೇವಲ 36 ಎಸೆತಗಳನ್ನು ಮಾತ್ರ. ಈ ಮೂಲಕ ವಿಜಯ ಹಝಾರೆ ಟೂರ್ನಿಯಲ್ಲಿ ಅತೀ ವೇಗದ ಶತಕ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ ಮೂವರ ಶತಕಗಳಿಗೂ ಮುನ್ನ ವಿಜಯ ಹಝಾರೆ ಟೂರ್ನಿಯಲ್ಲಿ ವಿಸ್ಫೋಟಕ ಸೆಂಚುರಿ ಸಿಡಿಸಿದ್ದು ಅನ್ಮೋಲ್ ಪ್ರೀತ್ ಸಿಂಗ್. 2024 ರಲ್ಲಿ ಅರುಣಾಚಲ ಪ್ರದೇಶ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ ಕಣಕ್ಕಿಳಿದ ಅನ್ಮೋಲ್ ಪ್ರೀತ್ ಸಿಂಗ್ ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. ಆದರೆ ಈ ಬಾರಿಯ ಮೊದಲ ಮ್ಯಾಚ್ನಲ್ಲೇ ಈ ದಾಖಲೆಯನ್ನು ಸಕಿಬುಲ್ ಗನಿ ಹಾಗೂ ಇಶಾನ್ ಕಿಶನ್ ಮುರಿದಿರುವುದು ವಿಶೇಷ.
