ಐಸಿಸಿ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾದ ನಾಲ್ವರು ನಂಬರ್ 1
ICC Rankings 2026: ಕ್ರಿಕೆಟ್ ಜಗತ್ತಿನಲ್ಲಿ ಸದ್ಯ ಟೀಮ್ ಇಂಡಿಯಾದ್ದೇ ಕಾರುಬಾರು. ಮೂರೂ ಮಾದರಿಯ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರರು ಅಧಿಪತ್ಯ ಸ್ಥಾಪಿಸಿದ್ದು, ವಿಶ್ವ ಕ್ರಿಕೆಟ್ನ ಸಿಂಹಾಸನವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ನಾಲ್ವರು ಆಟಗಾರರು ಅಗ್ರಸ್ಥಾನ ಅಲಂಕರಿಸಿರುವುದು.
Updated on: Jul 30, 2026 | 2:02 PM

ಐಸಿಸಿ ಪ್ರಕಟಿಸಿರುವ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಲ್ವರು ಆಟಗಾರರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಈ ಪೈಕಿ ಏಕದಿನ ಹಾಗೂ ಟಿ20 ಕ್ರಿಕೆಟ್ನ ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಇಬ್ಬರು ಯುವ ದಾಂಡಿಗರು ವಿಶ್ವದ ನಂ. 1 ಸ್ಥಾನ ಅಲಂಕರಿಸಿದ್ದರೆ, ಟೆಸ್ಟ್ ಕ್ರಿಕೆಟ್ನ ಬೌಲಿಂಗ್ ಹಾಗೂ ಆಲ್ರೌಂಡರ್ ವಿಭಾಗಗಳಲ್ಲಿ ಮತ್ತಿಬ್ಬರು ಅನುಭವಿ ಆಟಗಾರರು ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಆಟಗಾರರ ಪಟ್ಟಿ ಈ ಕೆಳಗಿನಂತಿದೆ... (PC: Getty Images)

ಶುಭ್ಮನ್ ಗಿಲ್ (ಏಕದಿನ): ಭಾರತ ಏಕದಿನ ತಂಡದ ನಾಯಕ ಶುಭ್ಮನ್ ಗಿಲ್, ನ್ಯೂಝಿಲೆಂಡ್ನ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿ ವಿಶ್ವದ ನಂಬರ್ 1 ಏಕದಿನ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಏಕದಿನ ಬ್ಯಾಟರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. (PC: Getty Images)

ಇಶಾನ್ ಕಿಶನ್ (ಟಿ20): ಟೀಮ್ ಇಂಡಿಯಾದ ಯುವ ಸ್ಫೋಟಕ ದಾಂಡಿಗ ಇಶಾನ್ ಕಿಶನ್ ಝಿಂಬಾಬ್ವೆ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದರು. ಈ ಪ್ರದರ್ಶನದೊಂದಿಗೆ ಒಟ್ಟು 910 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಇಶಾನ್ ಕಿಶನ್, ಪ್ರಸ್ತುತ ಟಿ20 ಕ್ರಿಕೆಟ್ನ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. (PC: Getty Images)

ಜಸ್ಪ್ರೀತ್ ಬುಮ್ರಾ (ಟೆಸ್ಟ್): ಭಾರತ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಟೆಸ್ಟ್ ಕ್ರಿಕೆಟ್ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅದರಂತೆ ಇದೀಗ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. (PC: Getty Images)

ರವೀಂದ್ರ ಜಡೇಜಾ (ಟೆಸ್ಟ್): ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ 446 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂಲಕ ಈ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ. (PC: Getty Images)




