ಹಾರಿಸ್ ರೌಫ್ ಪಾಕಿಸ್ತಾನ್ ತಂಡದ ರನ್ ಮಷಿನ್: ಪಾಕ್ ಕ್ರಿಕೆಟಿಗನಿಂದಲೇ ಟೀಕೆ
Asia Cup 2025 Final: ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ 3.4 ಓವರ್ಗಳನ್ನು ಎಸೆದ ಹಾರಿಸ್ ರೌಫ್ ಒಂದೇ ಒಂದು ವಿಕೆಟ್ ಪಡೆಯದೇ 50 ರನ್ಗಳನ್ನು ನೀಡಿದ್ದರು. ಹೀಗಾಗಿಯೇ ಇದೀಗ ಪಾಕ್ ತಂಡದ ಮಾಜಿ ನಾಯಕ ಹಾರಿಸ್ ರೌಫ್ ಅವರನ್ನು ಭಾರತದ ರನ್ ಮಷಿನ್ ಎಂದು ಟೀಕಿಸಿದ್ದಾರೆ.
Updated on:Sep 29, 2025 | 10:55 AM

ಹಾರಿಸ್ ರೌಫ್ (Haris Rauf) ಪಾಕಿಸ್ತಾನ್ ತಂಡದ ರನ್ ಮಷಿನ್... ಹೀಗಂದಿದ್ದು ಮತ್ಯಾರೂ ಅಲ್ಲ, ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್. ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಪಾಕ್ ತಂಡ ಸೋಲುತ್ತಿದ್ದಂತೆ ಆಕ್ರೋಶ ಹೊರಹಾಕಿರುವ ವಾಸಿಂ ಅಕ್ರಮ್, ಈ ಪರಾಜಯಕ್ಕೆ ಹಾರಿಸ್ ರೌಫ್ ಪ್ರಮುಖ ಕಾರಣ ಎಂದಿದ್ದಾರೆ.

ಚಾನೆಲ್ ಚರ್ಚೆಯಲ್ಲಿ ಕಾಣಿಸಿಕೊಂಡ ವಾಸಿಂ ಅಕ್ರಮ್ ಪಾಕಿಸ್ತಾನ್ ತಂಡದ ಪ್ರದರ್ಶನವನ್ನು ವಿಶ್ಲೇಷಿಸಿದ್ದರು. ಅದರಲ್ಲೂ ಒಂದು ಹಂತದಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿದ್ದ ಈ ಪಂದ್ಯವು ಪಾಕ್ ತಂಡದ ಕೈ ತಪ್ಪಿ ಹೋಗಲು ಮುಖ್ಯ ಕಾರಣ ಹಾರಿಸ್ ರೌಫ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಏಕೆಂದರೆ ಈ ಪಂದ್ಯದ 15ನೇ ಓವರ್ನಲ್ಲಿ ರೌಫ್ 17 ರನ್ ನೀಡಿದ್ದರು. ಇನ್ನು 18ನೇ ಓವರ್ನಲ್ಲಿ 13 ರನ್ ಬಿಟ್ಟು ಕೊಟ್ಟರು. ಅಲ್ಲದೆ ಅಂತಿಮವಾಗಿ ಓವರ್ನ 4 ಎಸೆತಗಳಲ್ಲೇ 10 ರನ್ ಚಚ್ಚಿಸಿಕೊಳ್ಳುವ ಮೂಲಕ ಪಂದ್ಯವನ್ನು ಬೇಗನೆ ಮುಗಿಸಿದರು. ಈ ಕಳಪೆ ಪ್ರದರ್ಶನದಿಂದಾಗಿ ಪಾಕ್ ತಂಡ ಸೋಲನುಭವಿಸಿದೆ ಎಂದು ವಾಸಿಂ ಅಕ್ರಮ್ ಟೀಕಿಸಿದರು.

ನನ್ನ ಪ್ರಕಾರ, ಹಾರಿಸ್ ರೌಫ್ ಭಾರತದ ವಿರುದ್ಧದ ರನ್ ಮಷಿನ್. ಈ ಹಿಂದೆ ಕೂಡ ಟಿ20 ವಿಶ್ವಕಪ್ನಲ್ಲಿ ಪಾಕ್ ತಂಡದ ಸೋಲಿಗೆ ಕಾರಣರಾಗಿದ್ದರು. ಇದೀಗ ಮತ್ತೊಮ್ಮೆ ಪಾಕಿಸ್ತಾನ್ ಪಾಲಿಗೆ ದುಬಾರಿಯಾಗಿದ್ದಾರೆ. ಈ ಮೂಲಕ ಹಾರಿಸ್ ರೌಫ್ ಟೀಮ್ ಇಂಡಿಯಾ ಪಾಲಿನ ರನ್ ಮಷಿನ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದು ವಾಸಿಂ ಅಕ್ರಮ್ ಪಾಕ್ ವೇಗಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 19.1 ಓವರ್ಗಳಲ್ಲಿ 146 ರನ್ಗಳಿಸಿ ಆಲೌಟ್ ಆಗಿದ್ದರು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 19.4 ಓವರ್ಗಳಲ್ಲಿ 150 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ತಂಡ 9ನೇ ಬಾರಿ ಏಷ್ಯಾಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
Published On - 10:55 am, Mon, 29 September 25




