ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್
India vs Afghanistan: ಭಾರತ ಮತ್ತು ಅಫ್ಘಾನಿಸ್ತಾನ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಸೆಪ್ಟೆಂಬರ್ 13 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದ್ದು, ಈ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ 8 ಆಟಗಾರರ ಪಟ್ಟಿ ಇಲ್ಲಿದೆ.
Updated on: Sep 02, 2026 | 8:27 AM

ಅಫ್ಘಾನಿಸ್ತಾನ್ ವಿರುದ್ದದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಈ ಬಾರಿ 8 ಆಟಗಾರರು ಸ್ಥಾನ ಪಡೆದಿಲ್ಲ. ಅಂದರೆ ಕಳೆದ ಸರಣಿಯಲ್ಲಿ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಂಡಿದ್ದ ಎಂಟು ಆಟಗಾರರನ್ನು ಈ ಬಾರಿ ಕೈ ಬಿಡಲಾಗಿದೆ. ಆ ಆಟಗಾರರು ಯಾರೆಂದರೆ... (PC: BCCI)

ರಿಂಕು ಸಿಂಗ್: ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ರಿಂಕು ಸಿಂಗ್, ಕೇವಲ 14 ಎಸೆತಗಳಲ್ಲಿ 25 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದರು. ಆದಾಗ್ಯೂ, ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಸರಣಿಯಿಂದ ಅವರನ್ನು ಕೈಬಿಡಲಾಗಿದೆ. (PC: BCCI)

ಮಯಾಂಕ್ ಯಾದವ್: ಝಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಕಣಕ್ಕಿಳಿದಿದ್ದ ಮಯಾಂಕ್ ಯಾದವ್, ಭರ್ಜರಿ ಮೂಲಕ ಒಟ್ಟು 5 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೆ ಸರಣಿಯ ಮೊದಲ ಪಂದ್ಯದಲ್ಲೇ 2/18 ಅದ್ಭುತ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದಾಗ್ಯೂ, ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಸರಣಿಯಿಂದ ಇವರನ್ನು ಕೈಬಿಡಲಾಗಿದೆ. (PC: BCCI)

ಪ್ರಭ್‌ಸಿಮ್ರಾನ್ ಸಿಂಗ್: ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತದ 15 ಸದಸ್ಯರ ಅಧಿಕೃತ ಸ್ಕ್ವಾಡ್‌ನಲ್ಲಿ ಬ್ಯಾಕಪ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದರು. ಆದರೆ, ಪ್ರಮುಖ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಸರಣಿಯ ಎಲ್ಲಾ ಪಂದ್ಯಗಳಲ್ಲಿ ಆಡಿದ್ದರಿಂದ ಪ್ರಭ್ಸಿಮ್ರಾನ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗಲಿಲ್ಲ. ಇದೀಗ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ಇವರನ್ನು ಕೈಬಿಡಲಾಗಿದೆ. (PC: BCCI)

ಹರ್ಷ್ ದುಬೆ: ಝಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸ್ಪಿನ್ ಆಲ್ರೌಂಡರ್ ಆಗಿ ಸ್ಥಾನ ಪಡೆದಿದ್ದ ಹರ್ಷ್ ದುಬೆಗೂ ಕೂಡ ಒಂದೇ ಒಂದು ಮ್ಯಾಚ್ ಆಡಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಅಕ್ಷರ್ ಪಟೇಲ್ ಆಗಮನದೊಂದಿಗೆ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಹರ್ಷ್ ದುಬೆ ಹೊರಬಿದ್ದಿದ್ದಾರೆ. (PC: BCCI)

ಸೂರ್ಯಾಂಶ್ ಶೇಡ್ಗೆ: ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಕೇವಲ 1 ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಸೂರ್ಯಾಂಶ್ ಶೇಡ್ಗೆ ಅವರಿಗೆ ಆ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಬೌಲಿಂಗ್‌ನಲ್ಲಿ 2 ಓವರ್ ಎಸೆದು 15 ರನ್ ನೀಡಿದ್ದಾರಾದರೂ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಕೇವಲ ಒಂದೇ ಪಂದ್ಯದ ಅವಕಾಶದ ಬಳಿಕ, ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಸರಣಿಯಿಂದ ಇವರನ್ನು ತಂಡದಿಂದ ಹೊರಗಿಡಲಾಗಿದೆ. (PC: BCCI)

ಅಶೋಕ್ ಶರ್ಮಾ: ಝಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅಶೋಕ್ ಶರ್ಮಾ, ಈ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡಿದ್ದಾರೆ. ಆದರೆ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಇದೀಗ ಅಫ್ಘಾನಿಸ್ತಾನ್ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿದೆ. (PC: BCCI)

ಯಶ್ ಠಾಕೂರ್: ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಯಶ್ ಠಾಕೂರ್, ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡುವ ಅವಕಾಶ ಪಡೆದಿದ್ದರು. ತಮ್ಮ ಚಾಣಾಕ್ಷ ಬೌಲಿಂಗ್ ಪ್ರದರ್ಶನದ ಮೂಲಕ ಒಟ್ಟು 3 ವಿಕೆಟ್ ಕಸಿದುಕೊಂಡು ಗಮನ ಸೆಳೆದಿದ್ದರು. ಆದರೆ ಇದೀಗ ಅಫ್ಘಾನ್ ವಿರುದ್ಧದ ಸರಣಿಗೆ ಆಯ್ಕೆಯಾಗಿಲ್ಲ. (PC: BCCI)

ಪ್ರಿನ್ಸ್ ಯಾದವ್: ಝಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಮೊದಲ 2 ಪಂದ್ಯಗಳಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ಪ್ರಿನ್ಸ್ ಯಾದವ್, ಭರ್ಜರಿ ಬೌಲಿಂಗ್ ಮೂಲಕ ಒಟ್ಟು 4 ವಿಕೆಟ್ ಪಡೆದು ಮಿಂಚಿದ್ದರು. ಇದಾಗ್ಯೂ ಅಫ್ಘಾನಿಸ್ತಾನ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾದ ಭಾರತ ಟಿ20 ತಂಡದಲ್ಲಿ ಪ್ರಿನ್ಸ್ ಯಾದವ್ ಸ್ಥಾನ ಪಡೆದಿಲ್ಲ. (PC: BCCI)

ಭಾರತ ಟಿ20 ತಂಡ: ಶ್ರೇಯಸ್ ಅಯ್ಯರ್ (ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ (ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್*, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್. ಹರ್ಷಿತ್ ರಾಣಾ*, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ*.




