ಹೀಗೂ ಉಂಟೆ… ಹೀಗೊಂದು ‘ನತದೃಷ್ಟ’ದ ವಿಶ್ವ ದಾಖಲೆ
Team India: ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತವಾಗಿ ಟಾಸ್ ಸೋತ ಹೀನಾಯ ದಾಖಲೆಯೊಂದು ನೆದರ್ಲೆಂಡ್ಸ್ ತಂಡದ ಹೆಸರಿನಲ್ಲಿತ್ತು. ನೆದರ್ಲೆಂಡ್ಸ್ ತಂಡವು ಸತತವಾಗಿ 11 ಬಾರಿ ಟಾಸ್ ಸೋತಿದ್ದರು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಟೀಮ್ ಇಂಡಿಯಾ ನತದೃಷ್ಟದೊಂದಿಗೆ ಹೊಸ ಇತಿಹಾಸ ನಿರ್ಮಿಸಿದೆ.
Updated on: Oct 26, 2025 | 9:54 AM

ಭಾರತ ತಂಡದ ಹೆಸರಿಗೆ ಹೊಸ ವಿಶ್ವ ದಾಖಲೆಯೊಂದು ಸೇರ್ಪಡೆಯಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಾಣವಾಗಿರುವುದು ನತದೃಷ್ಟದಿಂದ ಎಂಬುದು ವಿಶೇಷ. ಅಂದರೆ ಸತತವಾಗಿ ಟಾಸ್ ಸೋತು ಟೀಮ್ ಇಂಡಿಯಾ ಅನಗತ್ಯ ದಾಖಲೆಯೊಂದಕ್ಕೆ ಕೊರೊಳೊಡ್ಡಿದೆ. ಅದು ಕೂಡ 18 ಬಾರಿ ಟಾಸ್ ಸೋಲುವುದರೊಂದಿಗೆ..!

ಹೌದು, ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದು ಸತತವಾಗಿ ಅತ್ಯಧಿಕ ಬಾರಿ ಟಾಸ್ ಸೋತಿರುವ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ರೋಹಿತ್ ಶರ್ಮಾ ಅವರಿಂದ ಶುರುವಾದ ಈ ದಾಖಲೆಯನ್ನು ಆಸ್ಟ್ರೇಲಿಯಾದಲ್ಲಿ ನೂತನ ನಾಯಕ ಶುಭ್ಮನ್ ಗಿಲ್ ಮುಂದುವರೆಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭ್ಮನ್ ಗಿಲ್ಗೆ ಅದೃಷ್ಟ ಕೈ ಹಿಡಿದಿಲ್ಲ. ಮೂರು ಬಾರಿ ಕೂಡ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಟಾಸ್ ಗೆದ್ದಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾದ ಟಾಸ್ ಸೋಲಿನ ಸಂಖ್ಯೆ 18 ಕ್ಕೇರಿದೆ.

ಇದಕ್ಕೂ ಮುನ್ನ ಭಾರತ ತಂಡ ಕೊನೆಯ ಬಾರಿ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿದ್ದು 2023 ರಲ್ಲಿ. ಏಕದಿನ ವಿಶ್ವಕಪ್ 2023ರ ಸೆಮಿಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಟಾಸ್ ಗೆದ್ದಿದ್ದರು. ಇದಾದ ಬಳಿಕ ಟೀಮ್ ಇಂಡಿಯಾ ಒಮ್ಮೆಯೂ ಟಾಸ್ ಜಯಿಸಿಲ್ಲ ಎಂಬುದೇ ಅಚ್ಚರಿ. ಇದರ ನಡುವೆ ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಸಹ ಆಡಿದೆ.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರೋಹಿತ್ ಶರ್ಮಾ ಒಮ್ಮೆಯೂ ಟಾಸ್ ಗೆದ್ದಿರಲಿಲ್ಲ. ಇದಾಗ್ಯೂ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಭಾರತ ತಂಡವು ಶುಭ್ಮನ್ ಗಿಲ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಮೊದಲ ಸರಣಿಯಲ್ಲೇ ಗಿಲ್ಗೆ ಟಾಸ್ ಅದೃಷ್ಟ ಕೈ ಕೊಟ್ಟಿದೆ. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಟಾಸ್ ಸೋಲಿನ ಸಂಖ್ಯೆ ಹದಿನೆಂಟಕ್ಕೇರಿದೆ.




